ಬಿಹಾರ: ಸರನ್ ಕಳ್ಳಬಟ್ಟಿ ದುರಂತ– ಅಧಿವೇಶನದಲ್ಲಿ ಕೋಲಾಹಲ

ಪಟ್ನಾ: ಸರನ್ ಕಳ್ಳಬಟ್ಟಿ ದುರಂತಕ್ಕೆ ಸಂಬಂಧಿಸಿ ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಸೋಮವಾರ ಸದನದಲ್ಲಿ ಭಾರಿ ಕೋಲಾಹಲ ಉಂಟಾಗಿತ್ತು.
ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಪರಿಹಾರಕ್ಕೆ ಆಗ್ರಹಿಸಿ ಮತ್ತು ಲಖಿಸರಾಯ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಮದ್ಯ ವಶಕ್ಕೆ ತೆಗೆದುಕೊಂಡ ಪ್ರಕರಣವನ್ನು ಬಿಜೆಪಿ ನಾಯಕರೊಬ್ಬರ ಜೊತೆ ತಳುಕುಹಾಕಿದ್ದನ್ನು ವಿರೋಧಿಸಿ ಬಿಜೆಪಿ ಶಾಸಕರು ಸೋಮವಾರ ಸದನದಲ್ಲಿ ಗದ್ದಲ ನಡೆಸಿದರು.
ಗದ್ದಲದಿಂದಾಗಿ ಬಿಹಾರ ವಿಧಾನಸಭೆ ಸ್ಪೀಕರ್ ಅವಾಧ್ ಬಿಹಾರಿ ಚೌಧರಿ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.
ಕಳ್ಳಬಟ್ಟಿ ದುರಂತದಲ್ಲಿ ಮಡಿದವರಿಗೆ ಪರಿಹಾರ ನೀಡುವಂತೆ ಅವರು ಬಿಜೆಪಿ ನಾಯಕ, ಬಿಹಾರ ವಿರೋಧ ಪಕ್ಷದ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರು ತಮ್ಮ ಪಕ್ಷದ ಪರವಾಗಿ ನಿಲುವಳಿ ಮಂಡಿಸಿದರು. ಮದ್ಯ ನಿಷೇಧ ಕಾನೂನಲ್ಲಿರುವ ಅವಕಾಶಗಳು ಮತ್ತು ಈ ಹಿಂದೆ ಕಳ್ಳಬಟ್ಟಿ ದುರಂತವೊಂದರಲ್ಲಿ ಮಡಿದಿದ್ದವರ ಕುಟುಂಬಗಳಿಗೆ ಪರಿಹಾರ ನೀಡಿದ್ದರ ಉದಾಹರಣೆ ನೀಡಿ ಅವರು ಮಾತನಾಡಿದರು. ಸರನ್ ಕಳ್ಳಬಟ್ಟಿ ದುರಂತದಲ್ಲಿ ಮಡಿದವರ ಕುಟುಂಬಗಳಿಗೂ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಸುಳ್ಳು ಆರೋಪ: ವಿಜಯ್ ಅವರ ಹತ್ತಿರದ ಸಂಬಂಧಿಯೊಬ್ಬರು ವಾಸವಿರುವ ಲಖಿಸರಾಯ್‌ನಲ್ಲಿ ಸಾವಿರಾರು ಮಧ್ಯದ ಸೀಸೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸದನದಲ್ಲಿ ಮಾಡಿದ ಆರೋಪವನ್ನು ವಿರೋಧಿಸಿದ ಅವರು, ನನ್ನ ಯಾವ ಸಂಬಂಧಿಯ ಹೆಸರೂ ಎಪ್‌ಐಆರ್‌ನಲ್ಲಿ ಇಲ್ಲ ಎಂದರು.
38 ಜನ ಮೃತ: ದುರಂತದಲ್ಲಿ 38 ಜನರು ಮೃತಪಟ್ಟಿದ್ದಾರೆ. ಈ ವಿಷಯದಲ್ಲಿ ದಾರಿತಪ್ಪಿಸುವ ಉದ್ದೇಶದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿವೆ ಎಂದು ತಪ್ಪು ಅಂಕಿಅಂಶಗಳನ್ನು ನೀಡಲಾಗುತ್ತಿದೆ ಎಂದು ಬಿಹಾರ ಸಚಿವ ಸುನೀಲ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದುರಂತದಲ್ಲಿ 100ಕ್ಕೂ ಹೆಚ್ಚು ಜನರು ಮಡಿದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. 50 ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.