ಭಾನುವಾರ, ಸೆಪ್ಟೆಂಬರ್ 26, 2021
25 °C

ಪೆಗಾಸಸ್‌ ತನಿಖೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೆಗಾಸಸ್‌ ಕುತಂತ್ರಾಂಶ ಬಳಸಿ ಗೂಢಚರ್ಯೆ ನಡೆಸಿದ್ದಾರೆ ಎನ್ನಲಾದ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಗೆ ಆಡಳಿತಾರೂಢ ಎನ್‌ಡಿಎಯ ಅಂಗವಾಗಿರುವ ಜೆಡಿಯುನ ಮುಖ್ಯಸ್ಥ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ದನಿಗೂಡಿಸಿದ್ದಾರೆ. 

‘ದೂರವಾಣಿ ಕದ್ದಾಲಿಕೆಯ ಬಗ್ಗೆ ಬಹಳ ದಿನಗಳಿಂದ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಚರ್ಚೆ (ಸಂಸತ್ತಿನಲ್ಲಿ) ನಡೆಯಲೇಬೇಕು. ಆರಂಭದ ದಿನದಿಂದಲೇ ನಾನು ಇದನ್ನು ಹೇಳುತ್ತಿದ್ದೇನೆ. ಈಗಿನ ದಿನಗಳಲ್ಲಿ ಇಂತಹುದನ್ನು (ಗೂಢಚರ್ಯೆ) ಯಾರು ಬೇಕಿದ್ದರೂ ವಿವಿಧ ರೀತಿಯಲ್ಲಿ ಮಾಡಬಹುದು. ಹಾಗಾಗಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇಡೀ ಪ್ರಕರಣದ ಎಲ್ಲ ಆಯಾಮಗಳನ್ನೂ ಪರಿಶೀಲನೆಗೆ ಒಳಪಡಿಸಬೇಕು’ ಎಂದು ನಿತೀಶ್‌ ಹೇಳಿದ್ದಾರೆ. 

ನಿತೀಶ್ ಹೇಳಿಕೆಯ ಬಗ್ಗೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಲಾಲು ಪ್ರಸಾದ್‌ ನೇತೃತ್ವದ ಆರ್‌ಜೆಡಿ ಈ ಹೇಳಿಕೆಯನ್ನು ಸ್ವಾಗತಿಸಿದೆ. ನಿತೀಶ್‌ ಅವರು ಈ ಹೇಳಿಕೆಯನ್ನು ಹಿಂದಕ್ಕೆ ಪಡೆಯಲಿಕ್ಕಿಲ್ಲ ಎಂಬ ವಿಶ್ವಾಸವನ್ನು ಪಕ್ಷವು ವ್ಯಕ್ತಪಡಿಸಿದೆ. ‘ಬಿಜೆಪಿಗಿಂತ ಭಿನ್ನವಾದ ಹಲವು ನಿಲುವುಗಳನ್ನು ನಿತೀಶ್‌ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಆಗಬೇಕು ಎಂದು ಅವರು ಹೊಂದಿರುವ ಆಕಾಂಕ್ಷೆಯ ಭಾಗ ಇದು’ ಎಂದು ಎಲ್‌ಜೆಪಿಯ ಚಿರಾಗ್‌ ಪಾಸ್ವಾನ್‌ ಹೇಳಿದ್ದಾರೆ. 

ನಿತೀಶ್‌ ಅವರನ್ನು ಲೇವಡಿ ಮಾಡುವುದಕ್ಕೂ ಈ ಸಂದರ್ಭವನ್ನು ಆರ್‌ಜೆಡಿ ಬಳಸಿಕೊಂಡಿದೆ. ನಿತೀಶ್‌ ಅವರು ತಮ್ಮ ನಿಲುವಿಗೆ ಬದ್ಧರಾಗಬೇಕು ಎಂದಿದೆ. ಒತ್ತಡ ಬಂದ ಬಳಿಕ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂಬ ಹೇಳಿಕೆಯನ್ನು ಅವರು ನೀಡಬಾರದು ಎಂದು ಆರ್‌ಜೆಡಿ ಹೇಳಿದೆ. 

ಆದರೆ, ನಿತೀಶ್‌ ಅವರ ಹೇಳಿಕೆಯನ್ನು ಜೆಡಿಯು ಮುಖಂಡರು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯ ನಿಲುವಿಗಿಂತ ಭಿನ್ನವಾದ ನಿಲುವನ್ನು ಜೆಡಿಯು ಹಿಂದೆಯೂ ತೆಗೆದುಕೊಂಡಿದೆ. ಇದು ಬಿಹಾರದ ಎನ್‌ಡಿಎ ಮೈತ್ರಿಕೂಟ ನೇತೃತ್ವದ ಸರ್ಕಾರದ ಮೇಲೆ ಪರಿಣಾಮ ಬೀರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು