ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದಲ್ಲಿ ಮದ್ಯ ಕಳ್ಳಸಾಗಣೆಗೆ ನಿತೀಶ್‌ ಅವಕಾಶ ನೀಡಿದ್ದಾರೆ: ಸಂಜಯ್‌ ಜೈಸ್ವಾಲ್‌

Last Updated 6 ಸೆಪ್ಟೆಂಬರ್ 2022, 9:38 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದಲ್ಲಿ ಪೊಲೀಸರು ವಶಪಡಿಸಿಕೊಂಡ ಮದ್ಯದ ಬಾಟಲಿಗಳನ್ನು ಕಚ್ಚಾ ವಸ್ತುಗಳಾಗಿ ಬಳಸಿಕೊಳ್ಳುವ ಮೂಲಕ ಬಳೆ ತಯಾರಿಕಾ ಕಾರ್ಖಾನೆಗಳನ್ನು ಸ್ಥಾಪಿಸಲು ಸಿಎಂ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಯೋಜನೆ ರೂಪಿಸಿದೆ. ಇದರಿಂದಾಗಿ ಮದ್ಯದ ಕಳ್ಳಸಾಗಣೆಗೆ ಸರ್ಕಾರವೇ ಅನುವು ಮಾಡಿಕೊಟ್ಟಂತಾಗಿದೆ ಎಂದು ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್‌ ಜೈಸ್ವಾಲ್‌ ಆರೋಪಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿತೀಶ್ ಕುಮಾರ್ ಮತ್ತು ಅಬಕಾರಿ ಇಲಾಖೆಯು ಶೇ 10ರಷ್ಟು ಮದ್ಯದ ಸರಕುಗಳಲ್ಲಿ ಶೇ 9 ರಷ್ಟನ್ನು ಕಳ್ಳಸಾಗಣೆ ಮೂಲಕ ಗ್ರಾಹಕರಿಗೆ ರವಾನಿಸುತ್ತದೆ. ಆದರೆ, ವಶಪಡಿಸಿಕೊಂಡ ಶೇ 1ರಷ್ಟು ಮದ್ಯದ ಬಾಟಲಿಗಳನ್ನು ಬಳೆ ತಯಾರಿಕೆಗೆ ಕಚ್ಚಾ ಸಾಮಗ್ರಿಗಳನ್ನಾಗಿ ಬಳಸಿಕೊಳ್ಳುತ್ತಿದೆ. ಇದು ಬಿಹಾರದ ನೈಜ ಪರಿಸ್ಥಿತಿ. ಇಲ್ಲಿ ಮದ್ಯದ ಕಳ್ಳಸಾಗಣೆ ವ್ಯಾಪಕವಾಗಿ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ಹೊಸ ನೀತಿಯಡಿಯಲ್ಲಿ ಅಬಕಾರಿ ಇಲಾಖೆಯು ವಶಪಡಿಸಿಕೊಂಡ ಮದ್ಯದ ಬಾಟಲಿಗಳನ್ನು ಕಚ್ಚಾ ವಸ್ತುವಾಗಿ ಬಳಸಿ ಬಳೆ ತಯಾರಿಕಾ ಕಾರ್ಖಾನೆಗಳನ್ನು ಸ್ಥಾಪಿಸಲು ಬಿಹಾರ ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಮೊದಲ ಬಾರಿಗೆ ಕೈಗಾರಿಕೆ ಸಚಿವಾಲಯ‌ದ ಸಹಕಾರದೊಂದಿಗೆ ನಾವು ಮೂರು ಎಥೆನಾಲ್ ಸ್ಥಾವರಗಳನ್ನು ಸ್ಥಾಪಿಸಿದ್ದೇವೆ. ಜತೆಗೆ, ಮೆಕ್ಕೆಜೋಳದ ಬೆಲೆ ಕ್ವಿಂಟಲ್‌ಗೆ ₹1,400 ರಿಂದ ₹2,100 ಕ್ಕೆ ಏರಿಕೆಯಾಗಿತ್ತು.‌ ಆದರೆ, ಜೆಡಿಯು ಅವಧಿಯಲ್ಲಿ ಇದು ಸಾಧ್ಯವಾಗುತ್ತಿಲ್ಲ’ ಎಂದು ಜೈಸ್ವಾಲ್ ಗುಡುಗಿದ್ದಾರೆ.

ಸದ್ಯ ಎರಡು ದಿನಗಳ ದೆಹಲಿ ಪ್ರವಾಸದಲ್ಲಿರುವ ನಿತೀಶ್ ಕುಮಾರ್, ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT