ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ: ಜೆಡಿಯು ಪಟ್ಟಿ ಬಿಡುಗಡೆ

ಲಾಲೂ ಸಂಬಂಧಿಗೆ ಜೆಡಿಯು ಟಿಕೆಟ್‌, ಬಿಜೆಪಿ ತ್ಯಜಿಸಿ ಎಲ್‌ಜೆಪಿ ಸೇರಿದ ಮಾಜಿ ಶಾಸಕಿ
Last Updated 7 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ, 115 ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಯು ಬುಧವಾರ ಘೋಷಿಸಿದೆ. ಲಾಲುಪ್ರಸಾದ್‌ ಅವರ ಪುತ್ರ ತೇಜಪ್ರತಾಪ್‌ ಅವರ ಮಾವ (ಪತ್ನಿಯ ತಂದೆ) ಚಂದ್ರಿಕಾ ರಾಯ್‌ ಅವರು ಜೆಡಿಯು ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.

ಬಿಜೆಪಿ ಜತೆ ಮಾಡಿಕೊಂಡಿರುವ ಸೀಟು ಹಂಚಿಕೆ ಒಪ್ಪಂದದ ಪ್ರಕಾರ ಜೆಡಿಯು, 122 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಇದರಲ್ಲಿ 7 ಕ್ಷೇತ್ರಗಳನ್ನು ಹಿಂದುಸ್ತಾನಿ ಆವಾಮ್‌ ಮೋರ್ಚಾಗೆ ನೀಡುವುದಾಗಿ ಪಕ್ಷ ಹೇಳಿದೆ.

ಚಂದ್ರಿಕಾ ರಾಯ್‌ ಅವರು ತಮ್ಮ ಸಾಂಪ್ರದಾಯಿಕ ಕ್ಷೇತ್ರ ಪರಸಾದಿಂದ ಸ್ಪರ್ಧಿಸಲಿದ್ದಾರೆ. ಆದರೆ, ಕಳೆದ ತಿಂಗಳಷ್ಟೇ ಹುದ್ದೆಗೆ ರಾಜೀನಾಮೆ ನೀಡಿ, ಮುಖ್ಯಮಂತ್ರಿ ಸಮ್ಮುಖದಲ್ಲಿ ಜೆಡಿಯು ಸೇರಿದ್ದ ಮಾಜಿ ಡಿಜಿಪಿ ಗುಪ್ತೇಶ್ವರ್‌ ಪಾಂಡೆ ಅವರು ಜೆಡಿಯು ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಬಕ್ಸರ್‌ ಕ್ಷೇತ್ರದಿಂದ ಇವರನ್ನು ಕಣಕ್ಕೆ ಇಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು.

ಬಿಜೆಪಿ ತ್ಯಜಿಸಿದ ಉಷಾ: ಮಾಜಿ ಶಾಸಕಿ ಉಷಾ ವಿದ್ಯಾರ್ಥಿ ಅವರು ಬಿಜೆಪಿಯನ್ನು ತ್ಯಜಿಸಿ, ಚಿರಾಗ್‌ ಪಾಸ್ವಾನ್‌ ನೇತೃತ್ವದ ಲೋಕ ಜನಶಕ್ತಿ ಪಾರ್ಟಿ ಜತೆ ಬುಧವಾರ ಕೈಜೋಡಿಸಿದ್ದಾರೆ. ಪಾಲಿಗಂಜ್‌ ಕ್ಷೇತ್ರದಿಂದ ಇವರು ಜೆಡಿಯು ವಿರುದ್ಧ ಎಲ್‌ಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ.

ದೀರ್ಘ ಕಾಲದಿಂದ ಆರ್‌ಎಸ್‌ಎಸ್‌ ಜತೆಗೆ ಗುರುತಿಸಿಕೊಂಡಿದ್ದ, ಬಿಜೆಪಿಯ ನಾಯಕ ರಾಜೇಂದ್ರ ಸಿಂಗ್‌ ಅವರು ಇತ್ತೀಚೆಗಷ್ಟೇ ಬಿಜೆಪಿಯನ್ನು ತ್ಯಜಿಸಿ ಎಲ್‌ಜೆಪಿ ಸೇರಿದ್ದರು. ರಾಜೇಂದ್ರ ಸಿಂಗ್‌ ಅವರು ದಿನಾರಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದರು. ಆದರೆ ಸೀಟು ಹಂಚಿಕೆ ಒಪ್ಪಂದದ ಪ್ರಕಾರ ಆ ಕ್ಷೇತ್ರವನ್ನು ಬಿಜೆಪಿಯು ಜೆಡಿಯುಗೆ ಬಿಟ್ಟುಕೊಟ್ಟಿದೆ.

ವಿಐಪಿಗೆ 11 ಕ್ಷೇತ್ರ: ಜೆಡಿಯು ಜತೆಗೆ ಮಾಡಿಕೊಂಡಿರುವ ಸೀಟು ಹಂಚಿಕೆ ಒಪ್ಪಂದದ ಪ್ರಕಾರ 121 ಕ್ಷೇತ್ರಗಳನ್ನು ಪಡೆದಿರುವ ಬಿಜೆಪಿಯು, ಅದರಲ್ಲಿ 11 ಕ್ಷೇತ್ರಗಳನ್ನು ತನ್ನ ಮಿತ್ರಪಕ್ಷ ವಿಕಾಸಶೀಲ ಇನ್ಸಾನ್‌ ಪಾರ್ಟಿಗೆ (ವಿಐಪಿ) ಬಿಟ್ಟುಕೊಡುವುದಾಗಿ ಹೇಳಿದೆ.

ವಿರೋಧಿ ಮೈತ್ರಿಕೂಟ ಮಹಾಘಟಬಂಧನದಲ್ಲಿದ್ದ ವಿಐಪಿಯು ಈಚೆಗಷ್ಟೇ ಅದರಿಂದ ಹೊರಬಂದು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿತ್ತು.

ಐಟಿ ದಾಳಿ

ಗಣಿಗಾರಿಕೆ ಮತ್ತು ಹೋಟೆಲ್‌ ಉದ್ಯಮಿ ಹಾಗೂ ದೊಡ್ಡ ಸಹಕಾರಿ ಬ್ಯಾಂಕ್‌ ಒಂದರ ಅಧ್ಯಕ್ಷರಿಗೆ ಸೇರಿದ ಬಿಹಾರ ಮತ್ತು ಉತ್ತರಪ್ರದೇಶದಲ್ಲಿರುವ ಕಟ್ಟಡಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ಉದ್ಯಮಿ ಮತ್ತು ಸಹಕಾರ ಬ್ಯಾಂಕ್‌ ಅಧ್ಯಕ್ಷರ ಹೆಸರುಗಳನ್ನು ಇಲಾಖೆಯು ಬಹಿರಂಗಪಡಿಸಿಲ್ಲ. ಆದರೆ, ದಾಳಿಗೆ ಒಳಗಾಗಿರುವ ಉದ್ಯಮಿಯು ಬಿಹಾರದ ರಾಜಕೀಯ ಪಕ್ಷವೊಂದರ ಜತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT