ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ಚುನಾವಣಾ ಕಣದಲ್ಲಿ ‘ಬಾಹುಬಲಿ’ಗಳು!

ಅಪರಾಧ ಹಿನ್ನೆಲೆಯವರಿಗೆ ರಾಜಕೀಯ ಪಕ್ಷಗಳ ಮಣೆ
Last Updated 21 ಅಕ್ಟೋಬರ್ 2020, 20:42 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೆಯಲ್ಲಿ ‘ಜನಬೆಂಬಲ’ ದೊರೆಯಬೇಕೆಂದರೆ ಸ್ಪರ್ಧಾ ಕಣದಲ್ಲಿದ್ದವರಿಗೆ ‘ಹಣಬಲ’ ಅಗತ್ಯವಾಗಿ ಬೇಕು. ಜೊತೆಗೆ ‘ಭುಜಬಲ’ವೂ ಅಷ್ಟೇ ಮುಖ್ಯ.

ಅದರಲ್ಲೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿ ‘ಕುಖ್ಯಾತಿ’ಗೆ ಒಳಗಾದವರ 'ಭುಜಬಲದ ಪರಾಕ್ರಮ'ವಂತೂ ಆಯಾ ಕ್ಷೇತ್ರಗಳ ಮತದಾರರಿಗೆ ಪರಿಚಯವೇ ಇರುತ್ತದೆ.

ಅಂತೆಯೇ, ಅಪರಾಧ ಹಿನ್ನೆಲೆಯವರು,ರೌಡಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದರೆ,ಸ್ಪರ್ಧಿಸಿ ಗೆದ್ದುಬಂದರೆ ಅಂಥವರನ್ನು ಬಿಹಾರದ ಜನತೆ ‘ಬಾಹುಬಲಿ ನೇತಾ’ಎಂದು ಕರೆಯುತ್ತಾರೆ.

ಇದೇ 28ರಂದು ನಡೆಯಲಿರುವ ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆಯ ಕಣದಲ್ಲಿ ಇರುವವರ ಪೈಕಿ ಶೇ 31ರಷ್ಟು ಅಭ್ಯರ್ಥಿಗಳು, ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾಗಿ ನಾಮಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

ಲಾಲೂಪ್ರಸಾದ್‌ ನೇತೃತ್ವದ ‘ಗೂಂಡಾರಾಜ್’ ಕೊನೆಗಾಣಿಸುವ ಭರವಸೆಯೊಂದಿಗೆ ಚುನಾವಣೆ ಎದುರಿಸಿ, 2005ರಿಂದ ಸತತ ಅಧಿಕಾರದಲ್ಲಿರುವ ನಿತೀಶ್‌ಕುಮಾರ್ ನೇತೃತ್ವದ ಜೆಡಿಯು ಸಹ ಅಪರಾಧದ ಹಿನ್ನೆಲೆಯ ಅನೇಕರಿಗೆ ಈ ಬಾರಿಯೂ ಟಿಕೆಟ್‌ ನೀಡಿದೆ.

2005ರಲ್ಲಿ ಅಪರಾಧದ ಹಿನ್ನೆಲೆಯ ಶೇ 39ರಷ್ಟು ಅಭ್ಯರ್ಥಿಗಳು ಕಣದಲ್ಲಿದ್ದರೆ, 15 ವರ್ಷಗಳ ನಂತರ ಅಂಥವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಬದಲಾವಣೆಯೇನೂ ಕಂಡುಬಂದಿಲ್ಲ ಎಂಬ ಅಂಶವನ್ನು ಪ್ರಜಾಸತ್ತಾತ್ಮಕ ಸುಧಾರಣಾ ಸಂಸ್ಥೆ (ಎಡಿಆರ್‌) ನಡೆಸಿರುವ ಸಮೀಕ್ಷೆ ಹೊರಹಾಕಿದೆ.

ಈ ಬಾರಿ ಸ್ಪರ್ಧೆಯಲ್ಲಿರುವ 1000ಕ್ಕೂ ಅಧಿಕ ಅಭ್ಯರ್ಥಿಗಳ ಪೈಕಿ ಅಂದಾಜು 300ಕ್ಕೂ ಅಧಿಕ ಅಭ್ಯರ್ಥಿಗಳು ಅಪರಾಧದ ಹಿನ್ನೆಲೆಯವರಾಗಿದ್ದು, ಅವರಲ್ಲಿ 164 ಜನರಂತೂ ತಮ್ಮ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ, ಅತ್ಯಾಚಾರ ಮತ್ತು ಅಪಹರಣದಂತಹ ಗಂಭೀರ ಆರೋಪಗಳಿವೆ ಎಂದು ಘೋಷಿಸಿದ್ದಾರೆ.

ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಜೆಡಿಯು, ಬಿಜೆಪಿ, ಲೋಕ ಜನಶಕ್ತಿ (ಎಲ್‌ಜೆಪಿ) ಹಾಗೂ ಮಹಾ ಘಟಬಂಧನದ ನೇತೃತ್ವ ವಹಿಸಿಕೊಂಡಿರುವ ರಾಷ್ಟ್ರೀಯ ಜನತಾದಳ (ಆರ್‌ಜೆಡಿ)ಗಳು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖರಿಗೆ ಟಿಕೆಟ್‌ ನೀಡಿವೆ.

ಪ್ರಮುಖ ಪಕ್ಷಗಳ ಟಿಕೆಟ್‌ ಪಡೆದಿರುವ ಅಪರಾಧದ ಹಿನ್ನೆಲೆಯ ಹಾಗೂ ಅವರ ಕುಟುಂಬ ಸದಸ್ಯರ ವಿವರ ಈ ರೀತಿ ಇದೆ.

* ಮೊಕಾಮಾ ಕ್ಷೇತ್ರದಲ್ಲಿ ಆರ್‌ಜೆಡಿಯಿಂದ ಸ್ಪರ್ಧಿಸಿರುವ ಅನಂತ್‌ಸಿಂಗ್‌ ಹಾಲಿ ಶಾಸಕರೂ ಹೌದು (2015ರಲ್ಲಿ ಜೈಲಿನಲ್ಲಿದ್ದೇ ಜಯಿಸಿದ್ದರು).2005 ಮತ್ತು 2010ರಲ್ಲೂ ಜಯಿಸಿದ್ದ ಅವರು, ಮತ್ತೀಗ ಜೈಲಿನಲ್ಲಿದ್ದುಕೊಂಡೇ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಯಾವುದೇ ಕಾರಣಕ್ಕೆ ನಾಮಪತ್ರ ತಿರಸ್ಕೃತಗೊಂಡರೆ ನೆರವಿಗಿರಲಿ ಎಂಬ ಉದ್ದೇಶದಿಂದ ಅವರ ಪತ್ನಿ ನೀಲಮ್‌ ದೇವಿ ಸಹ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು.

* ದಾನಾಪುರ ಕ್ಷೇತ್ರದಲ್ಲಿ ಆರ್‌ಜೆಡಿಯಿಂದ ಸ್ಪರ್ಧಿಸಿರುವ ರಿತ್ಲಾಲ್ ಯಾದವ್, 2003ರಲ್ಲಿ ನಡೆದಿದ್ದ ಬಿಜೆಪಿಯ ನಗರಸಭೆ ಸದಸ್ಯ ಸತ್ಯನಾರಾಯಣ ಸಿನ್ಹಾ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. 2005ರಿಂದ ಮೂರು ಬಾರಿ ಶಾಸಕಿಯಾಗಿರುವ ಸಿನ್ಹಾ ಅವರ ಪತ್ನಿ ಆಶಾ ಸಿಂಗ್‌ ವಿರುದ್ಧ ಸ್ಪರ್ಧಿಸಿರುವ ಯಾದವ್ ಕಳೆದ ವರ್ಷವಷ್ಟೇ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ.

* ಗಯಾ ಜಿಲ್ಲೆಯ ಅತ್ರಿ ಕ್ಷೇತ್ರದಲ್ಲಿ ಆರ್‌ಜೆಡಿ ಕಣಕ್ಕಿಳಿಸಿರುವ ಅಜಯ್ ಯಾದವ್ ವಿರುದ್ಧ ಬರೊಬ್ಬರಿ 14 ಪ್ರಕರಣಗಳು ದಾಖಲಾಗಿವೆ. ಇವರು ಸ್ಪರ್ಧಿಸಿರುವುದು ಹೆಸರಾಂತ ರೌಡಿಯಾಗಿದ್ದ ಬೃಂದೇಶ್ವರಿ ಪ್ರಸಾದ್‌ ಯಾದವ್‌ ಅವರ ಪತ್ನಿ ಮನೋರಮಾ ದೇವಿ ವಿರುದ್ಧ.

* ಬಕ್ಸರ್‌ ಜಿಲ್ಲೆಯ ಬ್ರಹ್ಮಪುರ ಕ್ಷೇತ್ರದಿಂದ ಚಿರಾಗ್ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿಯಿಂದ ರೌಡಿಶೀಟರ್ ಹುಲಾಸ್‌ ಪಾಂಡೇ ಸ್ಪರ್ಧಿಸಿದ್ದು, ಇವರ ಸೋದರ ಸುನಿಲ್‌ ಪಾಂಡೆ ಸಹ ಕುಖ್ಯಾತ ರೌಡಿ.

* ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಈಗ ಬಂಧನದಲ್ಲಿರುವ ಮಾಜಿ ಶಾಸಕ ರಾಜವಲ್ಲಭ ಯಾದವ್‌ ಅವರ ಪತ್ನಿ ವಿಭಾ ದೇವಿ ಅವರನ್ನು ಆರ್‌ಜೆಡಿ ನೆವಾಡಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.

* ಭೋಜ್‌ಪುರ ಜಿಲ್ಲೆಯ ಸಂದೇಶ್ ಕ್ಷೇತ್ರದಿಂದ ಕಿರಣ್‌ ದೇವಿ ಆರ್‌ಜೆಡಿ ಅಭ್ಯರ್ಥಿಯಾಗಿದ್ದು, ಅವರ ಪತಿ, ಹಾಲಿ ಶಾಸಕ ಅರುಣ್‌ ಯಾದವ್‌ ಅತ್ಯಾಚಾರ ಪ್ರಕರಣದ ಆರೋಪ ಎದುರಿಸಿ ಪರಾರಿಯಾಗಿದ್ದಾರೆ.

* 1994ರಲ್ಲಿ ನಡೆದಿದ್ದ ಐಎಎಸ್ ಅಧಿಕಾರಿ ಜಿ.ಕೃಷ್ಣಯ್ಯ ಅವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಆನಂದ್‌ ಮೋಹನ್‌ ಸಿಂಗ್‌ ಅವರ ಪತ್ನಿ ಲವ್ಲೀ ಆನಂದ್‌ (ಸಹಾರ್ಸಾ ಕ್ಷೇತ್ರ) ಹಾಗೂ ಪುತ್ರ ಚೇತನ್‌ ಆನಂದ್‌ (ಶೋಹರ್ ಕ್ಷೇತ್ರ) ಅವರಿಗೆ ಆರ್‌ಜೆಡಿ ಟಿಕೆಟ್‌ ನೀಡಿದೆ.

* 14 ಪ್ರಕರಣಗಳಲ್ಲಿ ಭಾಗಿಯಾಗಿರುವ ಅಭಯ್ ಕುಷವಾಹಾ ಅವರನ್ನು ಗಯಾ ಜಿಲ್ಲೆಯ ಬೇಲಾಗಂಜ್‌ ಕ್ಷೇತ್ರದಿಂದ, ಅಪರಾಧ ಹಿನ್ನೆಲೆಯ ಮನೋರಂಜನ್ ಸಿಂಗ್ ಧುಮಾಲ್ ಅವರ ಪತ್ನಿ ಸೀತಾದೇವಿ ಸರನ್ ಜಿಲ್ಲೆಯ ಏಕ್ಮಾ ಕ್ಷೇತ್ರದಿಂದ ಹಾಗೂ ಪೂರ್ನಿಯಾ ಜಿಲ್ಲೆಯ ರುಪೌಲಿ ಕ್ಷೇತ್ರದಲ್ಲಿ ರೌಡಿ ಅವದೇಶ ಮಂಡಲ್‌ ಅವರ ಪತ್ನಿ ಭೀಮಾ ಭಾರತಿ ಅವರಿಗೆಆಡಳಿತಾರೂಢ ಜೆಡಿಯು ಟಿಕೆಟ್‌ ನೀಡಿದೆ.

* 24 ಪ್ರಕರಣಗಳಲ್ಲಿ ಭಾಗಿಯಾಗಿರುವ ಅಖಿಲೇಶ್ ಸಿಂಗ್‌ ಅವರ ಪತ್ನಿ ಅರುಣಾ ದೇವಿಗೆ ನೆವಾಡಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನೀಡಿದೆ.

* ರೌಡಿಸಂ ಹಿನ್ನೆಲೆಯ ಅನೇಕರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದು, ಲಾಲ್‌ಗಂಜ್‌ ಕ್ಷೇತ್ರದಿಂದ ಸ್ಪರ್ಧಿಸಿರುವ ವಿಜಯ್‌ಕುಮಾರ್‌ ಶುಕ್ಲಾ ಅಲಿಯಾಸ್‌ ಮುನ್ನಾ ಶುಕ್ಲಾ ಅಂಥವರಲ್ಲಿ ಪ್ರಮುಖರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT