ಗುರುವಾರ , ಜುಲೈ 7, 2022
25 °C

ಬಿಹಾರದಲ್ಲಿ ನಕಲಿ ಮದ್ಯ ದುರಂತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನಳಂದ (ಬಿಹಾರ): ಜಿಲ್ಲೆಯಲ್ಲಿ ನಕಲಿ ಮದ್ಯ ಸೇವನೆಯಿಂದ ಮತ್ತೆ ಮೂವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಶನಿವಾರ ಎಂಟು ಮಂದಿ ಸಾವಿಗೀಡಾಗಿದ್ದರು. ಪ್ರಕರಣ ಸಂಬಂಧ ಛೋಟಿ ಪಹರಿ ಪ್ರದೇಶದಲ್ಲಿ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ದುರಂತವನ್ನು ಅಂತ್ಯಗೊಳಿಸಲು ಜಿಲ್ಲಾ ಪೊಲೀಸರು ಛೋಟಿ ಪಹರಿ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ತನಿಖೆಯನ್ನು ಉತ್ತಮವಾಗಿ ನಡೆಸುವ ಉದ್ದೇಶದಿಂದ ಪ್ರದೇಶವನ್ನು ನಾಲ್ಕು ಭಾಗವಾಗಿ ವಿಭಾಗಿಸಿ ಕಾರ್ಯಾಚರಣೆ ಕೈಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಹನ್ನೊಂದು ಮಂದಿ ನಕಲಿ ಮದ್ಯ ಸೇವನೆಯಿಂದ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಶಶಾಂಕ್‌ ಶುಭಂಕರ್‌ ತಿಳಿಸಿದ್ದಾರೆ.

ನಳಂದ ಜಿಲ್ಲೆಯಲ್ಲಿ ಇದುವರೆಗೆ 184 ಲೀಟರ್‌ ದೇಶೀಯ ಮದ್ಯ, 225 ಲೀಟರ್‌ ವಿದೇಶಿ ಮದ್ಯ ವಶಪಡಿಸಿಕೊಳ್ಳಲಾಗಿದ್ದು ಮತ್ತು 34 ಮಂದಿಯನ್ನು ಬಂಧಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ, ದುರಂತಕ್ಕೆ ಪೊಲೀಸರೇ ಹೊಣೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ನಕಲಿ ಮದ್ಯ ಮಾರಾಟದ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿತ್ತು. ಆದಾಗ್ಯೂ, ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ದೂರಿದ್ದಾರೆ.

ಸಂಬಂಧಪಟ್ಟ ಪೊಲೀಸ್‌ ಠಾಣೆಯ ಠಾಣಾಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ಎಂಟು ಮಂದಿ ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬದವರಿಗೆ ನೀಡಲಾಗಿದೆ ಎಂದು ನಳಂದ ಎಸ್‌ಪಿ ಅಶೋಕ್‌ ಮಿಶ್ರಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು