ಬುಧವಾರ, ಮೇ 12, 2021
18 °C

ನನಗೆ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇರಲಿಲ್ಲ: ಕುತೂಹಲ ಕೆರಳಿಸಿದ ನಿತೀಶ್‌ ಹೇಳಿಕೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪಟ್ನಾ: ನನಗೆ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇರಲಿಲ್ಲ. ಬಿಜೆಪಿಯು ತನ್ನದೇ ಆದ ಅಭ್ಯರ್ಥಿಯನ್ನು ಈ ಹುದ್ದೆಗೆ ನೇಮಿಸಬಹುದಿತ್ತು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಭಾನುವಾರ ಹೇಳಿದ್ದಾರೆ.

ಜೆಡಿಯುನ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿರುವ ಅವರು, 'ವಿಧಾನಸಭೆ ಫಲಿತಾಂಶ ಹೊರಬಂದ ಬಳಿಕ ಮುಖ್ಯಮಂತ್ರಿ ಆಗಬೇಕೆಂಬ ಆಸೆ ನನಗೆ ಇರಲಿಲ್ಲ. ಜನರು ತಮ್ಮ ಆದೇಶವನ್ನು ನೀಡಿದ್ದರು. ಆ ಹಿನ್ನೆಲೆಯಲ್ಲಿ ಬಿಜೆಪಿಯು ತನ್ನದೇ ಆದ ಅಭ್ಯರ್ಥಿಯನ್ನು ಬಿಹಾರ ಮುಖ್ಯಮಂತ್ರಿ ಹುದ್ದೆಗೆ ನೇಮಿಸಬಹುದಿತ್ತು' ಎಂದು ತಿಳಿಸಿದ್ದಾರೆ.

'ಚುನಾವಣಾ ಫಲಿತಾಂಶಗಳು ಹೊರಬಂದ ನಂತರ, ನಾನು ನನ್ನ ಆಶಯವನ್ನು ಬಿಜೆಪಿಗೆ ತಿಳಿಸಿದೆ. ಆದರೆ, ನನ್ನ ಮೇಲಿನ ಒತ್ತಡವು ತೀವ್ರವಾಗಿತ್ತು. ಆ ಕಾರಣ, ನಾನು ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಲೇಬೇಕಾಯಿತು' ಎಂದು ನಿತೀಶ್ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸುಶೀಲ್‌ ಕುಮಾರ್‌ ಮೋದಿ, 'ನಿತೀಶ್‌ ಕುಮಾರ್‌ ಅವರು ಮುಖ್ಯಮಂತ್ರಿ ಆಗಲು ಬಯಸಿರಲಿಲ್ಲ' ಎಂದು ತಿಳಿಸಿದ್ದಾರೆ. ಮುಂದುವರೆದ ಅವರು, 'ನಿಮ್ಮ ಹೆಸರಲ್ಲಿ ಚುನಾವಣೆ ಎದುರಿಸಿದ್ದೇವೆ. ಜನರು ನಿಮಗಾಗಿ ಮತ ನೀಡಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಯುನ ಮುಖಂಡರು ಹೇಳಿದರು. ಆ ಹಿನ್ನೆಲೆಯಲ್ಲಿ ನಿತೀಶ್‌ ಕುಮಾರ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಜೆಡಿಯುನ ಆರು ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದ ಒಂದು ವಾರದ ನಂತರ ಹೊರಬರುತ್ತಿರುವ ಜೆಡಿಯು ಮತ್ತು ಬಿಜೆಪಿ ನಾಯಕರ ಈ ಹೇಳಿಕೆಗಳು ಕುತೂಹಲಕ್ಕೆ ಎಡೆಮಾಡಿಕೊಟ್ಟಿವೆ.

ಅರುಣಾಚಲ ಪ್ರದೇಶದಲ್ಲಿನ 60 ವಿಧಾನಸಭಾ ಸ್ಥಾನಗಳ ಪೈಕಿ 15ರಲ್ಲಿ ಜೆಡಿಯು ಸ್ಪರ್ಧಿಸಿತ್ತು. ಚುನಾವಣೆಯಲ್ಲಿ 41 ಸ್ಥಾನಗಳನ್ನು ಗೆದ್ದ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದರೆ, ಏಳು ಸ್ಥಾನಗಳನ್ನು ಗೆದ್ದ ಜೆಡಿಯು ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಶುಕ್ರವಾರ ದೋರ್ಜಿ ಖರ್ಮ, ಜಿಕ್ಕೆ ಟಾಕೊ, ಹಯೀಂಗ್‌ ಮಂಗ್ಫಿ, ಡೊಂಗ್ರು ಸಿಯಾಂಗ್ಜು, ತಲೇಮ್‌ ಟಬೊ ಹಾಗೂ ಕಂಗಾಂಗ್‌ ಟಕು ಅವರು ಜೆಡಿಯು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು