ಶನಿವಾರ, ಅಕ್ಟೋಬರ್ 1, 2022
20 °C

ಇ.ಡಿ, ಸಿಬಿಐಗೆ ಹೆದರುವುದಿಲ್ಲ: ಬಿಜೆಪಿ ಮೈತ್ರಿ ತೊರೆದ ನಂತರ ಜೆಡಿಯು ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಪಟ್ನಾ: ಕೇಂದ್ರದ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ(ಇಡಿ) ಹಾಗೂ ಸಿಬಿಐಗೆ ಹೆದರುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬುಧವಾರ ತಿಳಿಸಿದೆ. 

ಈ ವಿಚಾರವಾಗಿ ಮಾಧ್ಯಮಗೋಷ್ಠಿ ನಡೆಸಿರುವ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್, ‘ಅರುಣಾಚಲ ಪ್ರದೇಶದಲ್ಲಿನ ನಮ್ಮ ಶಾಸಕರನ್ನು ಖರೀದಿಸುವ ಮೂಲಕ ಬಿಜೆಪಿಯು ಮಿತ್ರ ಧರ್ಮವನ್ನು ಗಾಳಿಗೆ ತೂರಿದೆ‘ ಎಂದು ಆರೋಪಿಸಿದ್ದಾರೆ.
 
ನಿತೀಶ್‌ ಕುಮಾರ್‌ ಅವರು ಉಪ ರಾಷ್ಟ್ರಪತಿಯಾಗುವ ಬಯಕೆಯನ್ನು ಹೊಂದಿದ್ದರು ಎಂಬ ಬಿಜೆಪಿ ನಾಯಕ ಸುಶೀಲ್‌ ಮೋದಿ ಹೇಳಿಕೆಗೆ ಲಲನ್‌ ತಿರುಗೇಟು ನೀಡಿದ್ದಾರೆ.

‘ಇಂತಹ ಚೇಷ್ಟೆಗಳು ಅವರಿಗೆ(ಸುಶೀಲ್‌ ಮೋದಿ) ಸ್ವಲ್ಪ ಮಟ್ಟಿನ ರಾಜಕೀಯ ಪುನರ್ವಸತಿಯನ್ನು ಕಲ್ಪಿಸಬಹುದು’ ಎಂದು ವ್ಯಂಗ್ಯವಾಡಿದ್ದಾರೆ.

‘ಬಿಜೆಪಿಯವರು ಏಜೆನ್ಸಿಗಳನ್ನು ಬಳಸಲಿ. ನಾವು ಸಿಬಿಐ ಹಾಗೂ ಇಡಿಗೆ ಹೆದರುವುದಿಲ್ಲ. ಕಂಪನಿಗಳನ್ನು ನಡೆಸುವವರು ಮಾತ್ರ ಭಯದಿಂದ ಬದುಕಬೇಕು. ನಾವು ಸಂಸದರು ಅಥವಾ ಶಾಸಕರಾಗಿ ಪಡೆಯುವ ಸಂಬಳದ ಮೇಲೆ ಅವಲಂಬಿತರಾಗಿದ್ದೇವೆ’ ಎಂದು ಲಲನ್‌ ಹೇಳಿದ್ದಾರೆ.

ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವ ಪಕ್ಷದ ನಿರ್ಧಾರವನ್ನು ಎಲ್ಲರೂ ಬೆಂಬಲಿಸಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ.

ನಿತೀಶ್‌ ಅವರು 2017ರ ವರೆಗೆ ಮಹಾಮೈತ್ರಿಕೂಟದ ಭಾಗವಾಗಿಯೇ ಇದ್ದರು. ಆದರೆ, 2017ರಲ್ಲಿ ಮಹಾಮೈತ್ರಿಕೂಟ ತೊರೆದು ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿಕೊಂಡರು. ಮಹಾಮೈತ್ರಿಕೂಟಕ್ಕೆ ಸೇರುವ ಮೊದಲೂ ಅವರು ಎನ್‌ಡಿಎಯಲ್ಲಿಯೇ ಇದ್ದರು. 

ಈಗ, 9 ವರ್ಷಗಳಲ್ಲಿ ಎರಡನೇ ಬಾರಿಗೆ ಬಿಜೆಪಿ ಜತೆಗಿನ ನಂಟನ್ನು ಅವರು ಕಡಿದುಕೊಂಡಿದ್ದಾರೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂದು ಬಿಜೆಪಿ 2013ರಲ್ಲಿ ನಿರ್ಧರಿಸಿದಾಗ ನಿತೀಶ್‌ ಅವರು ಎನ್‌ಡಿಎ ತೊರೆದಿದ್ದರು. 

ಇವನ್ನೂ ಓದಿ: 

 ಮತ್ತೆ ಎನ್‌ಡಿಎ ತೊರೆದ ನಿತೀಶ್‌: ಸಿ.ಎಂ ಆಗಿ ಇಂದು ಪ್ರಮಾಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು