ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕುರಿತು ನಿತೀಶ್ ಕುಮಾರ್ ಮುಕ್ತ ಚರ್ಚೆಗೆ ಬರಲಿ: ತೇಜಸ್ವಿ ಯಾದವ್

Last Updated 19 ಅಕ್ಟೋಬರ್ 2020, 12:56 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಸೋಮವಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸವಾಲೆಸೆದಿದ್ದು, ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಯ ವಿಷಯದಲ್ಲಿ ಚರ್ಚಿಸಲು ಯಾವುದೇ ಸಮಯ ಮತ್ತು ಸ್ಥಳವನ್ನು ಮುಖ್ಯಮಂತ್ರಿಗಳೇ ಆಯ್ಕೆ ಮಾಡಲಿ. ಸರ್ಕಾರದ ಮುಖ್ಯಸ್ಥರಾಗಿ ಕಳೆದ 15 ವರ್ಷಗಳಲ್ಲಿ ತಮ್ಮ ಸಾಧನೆಗಳ ಬಗ್ಗೆ ಚರ್ಚಿಸಲು ಮುಂದಾಗಲಿ ಎಂದು ಹೇಳಿದ್ದಾರೆ.

'ಕಳೆದ 15 ವರ್ಷಗಳ ತಮ್ಮ ಸಾಧನೆ ಕುರಿತು ನಿತೀಶ್ ಕುಮಾರ್ ಅವರು ತನ್ನೊಂದಿಗೆ ಮುಕ್ತ ಚರ್ಚೆ ನಡೆಸಲಿ. ಈ ಸಂಪ್ರದಾಯವನ್ನು ನಾವು ಪ್ರಾರಂಭಿಸಬೇಕಾಗಿದೆ ಏಕೆಂದರೆ ವೈಶಾಲಿಯಲ್ಲಿ ಮೊದಲ ಬಾರಿಗೆ ಪ್ರಜಾಪ್ರಭುತ್ವ ಸ್ಥಾಪನೆಯಾಯಿತು. ಹಾಗಾಗಿ ಮುಖ್ಯಮಂತ್ರಿ ಅಭ್ಯರ್ಥಿಯೊಂದಿಗೆ ಅವರು ಚರ್ಚೆ ನಡೆಸಲಿ' ಎಂದಿದ್ದಾರೆ.
ರಾಜ್ಯ ಸರ್ಕಾರದ ಮೇಲೆ ಜನರು ತೀವ್ರವಾಗಿ ಕೋಪಗೊಂಡಿದ್ದಾರೆ ಎಂದ ಅವರು, ಮೈತ್ರಿ ಕೂಟವು ಸರಳ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಚುನಾವಣಾ ಸಭೆಗಳಲ್ಲಿ ನಿರುದ್ಯೋಗ ಮತ್ತು ವಲಸೆಯ ವಿಷಯಗಳ ಬಗ್ಗೆ ಯಾದವ್ ನಿರಂತರವಾಗಿ ಸರ್ಕಾರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.

ತೇಜಸ್ವಿ ಅವರ ಈ ಸವಾಲಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮಾಜಿ ಅಧ್ಯಕ್ಷ ಮ್ತು ಕೇಂದ್ರ ಸಚಿವ ನಿತ್ಯಾನಂದ ರೈ, ತೇಜಸ್ವಿಯೊಂದಿಗೆ ಅಭಿವೃದ್ಧಿಯ ಯಾವುದೇ ವಿಚಾರದ ಕುರಿತು ಎಲ್ಲಿಯಾದರೂ ಚರ್ಚಿಸಲು ಅವರು ಸಿದ್ಧರಾಗಿದ್ದಾರೆ. ಆದರೆ ನಿತೀಶ್ ಅವರು ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದಿದ್ದಾರೆ.

243 ವಿಧಾನಸಭಾ ಕ್ಷೇತ್ರಗಳಿರುವ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲನೇ ಹಂತವಾಗಿ ಅಕ್ಟೋಬರ್ 28, ಎರಡನೇ ಹಂತವಾಗಿ ನವೆಂಬರ್ ಮೂರು ಮತ್ತು ಕೊನೆಯ ಹಂತವಾಗಿ ನವೆಂಬರ್ 7ರಂದು ಚುನಾವಣೆ ನಡೆಯಲಿದೆ. ನವೆಂಬರ್ 10ರಂದು ಮತದಾನ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT