ನವದೆಹಲಿ: ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಮಂದಿ ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ವಿಶೇಷ ಪೀಠ ರಚಿಸಲು ಸುಪ್ರಿಂ ಕೋರ್ಟ್ ಸಮ್ಮತಿಸಿದೆ. ಗುಜರಾತ್ ಗಲಭೆಯ ವೇಳೆ ಏಳು ಜನರನ್ನು ಕೊಲೆ ಮಾಡಿದ್ದ ಆರೋಪವೂ ಅಪರಾಧಿಗಳ ಮೇಲಿತ್ತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ. ಪಾರ್ದಿವಾಲಾ ಸದಸ್ಯರಾಗಿದ್ದ ಪೀಠವು ಈ ತೀರ್ಮಾನ ತೆಗೆದುಕೊಂಡಿತು. ಅರ್ಜಿದಾರರ ಪರ ವಕೀಲರಾದ ಶೋಭಾ ಗುಪ್ತಾ ಅವರು, ಪ್ರಕರಣದ ತುರ್ತು ವಿಚಾರಣೆ ಅಗತ್ಯವಿದ್ದು, ವಿಶೇಷ ಪೀಠ ರಚಿಸಬೇಕು ಎಂದು ಪ್ರಾರ್ಥಿಸಿದ್ದರು.
11 ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಅಪರಾಧಿಗಳಿಗೆ ಕ್ಷಮೆ ಹೊರತುಪಡಿಸಿ, ಶಿಕ್ಷೆ ನಿಗದಿಪಡಿಸಿ ಸುಪ್ರೀಂ ಕೋರ್ಟ್ ಮೇ 13, 2022ರಲ್ಲಿ ನೀಡಿದ್ದ ತೀರ್ಪಿನ ಮರುಪರಿಶೀಲನೆಗೆ ಕೋರಿ ಅತ್ಯಾಚಾರ ಸಂತ್ರಸ್ತೆಯು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದ್ದರು.
ಮೇ 13, 2022ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂ ಕೋರ್ಟ್, ಅವಧಿಪೂರ್ವದಲ್ಲಿ ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಎಲ್ಲ 11 ಅಪರಾಧಿಗಳಿಗೆ ಸನ್ನಡತೆ ಆಧಾರದಲ್ಲಿ ಕ್ಷಮೆಯನ್ನು ನೀಡಿ ಗುಜರಾತ್ ಸರ್ಕಾರ ಕಳೆದ ವರ್ಷ ಆಗಸ್ಟ್ 15ರಂದು ಬಿಡುಗಡೆ ಮಾಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.