ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌, ಅಧೀನ ನ್ಯಾಯಾಲಯಗಳಲ್ಲಿ ಮಾತೃಭಾಷೆ ಬಳಸಿ: ಕೇಂದ್ರ ಸಚಿವ ರಿಜಿಜು

ಅಖಿಲ ಭಾರತ ಕಾನೂನು ಸೇವೆಗಳ ಪ್ರಾಧಿಕಾರದ 18ನೇ ಅಧಿವೇಶನ
Last Updated 16 ಜುಲೈ 2022, 13:09 IST
ಅಕ್ಷರ ಗಾತ್ರ

ಜೈಪುರ: ಸುಪ್ರೀಂಕೋರ್ಟ್‌ನಲ್ಲಿ ವಾದ–ಪ್ರತಿವಾದ ಮತ್ತು ತೀರ್ಪುಗಳು ಇಂಗ್ಲಿಷ್‌ನಲ್ಲಿ ಇರಬಹುದು. ಆದರೆ, ಹೈಕೋರ್ಟ್‌ಗಳು, ಅಧೀನ ನ್ಯಾಯಾಲಯಗಳು ಕಲಾಪಗಳಲ್ಲಿ ಪ್ರಾದೇಶಿಕ ಮತ್ತು ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದುಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಶನಿವಾರ ಹೇಳಿದ್ದಾರೆ.

ಇಲ್ಲಿ ಆಯೋಜಿಸಿದ್ದ ಅಖಿಲ ಭಾರತ ಕಾನೂನು ಸೇವೆಗಳ ಪ್ರಾಧಿಕಾರದ18ನೇ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.

ಸುಪ್ರೀಂಕೋರ್ಟ್‌ನಲ್ಲಿ ವಾದ–ಪ್ರತಿವಾದ ಮತ್ತು ತೀರ್ಪುಗಳು ಇಂಗ್ಲೀಷಿನಲ್ಲೇ ಬರುತ್ತಿವೆ. ಆದರೆ, ನಮ್ಮ ದೃಷ್ಟಿಕೋನ ಹೈಕೋರ್ಟ್‌ಗಳು ಮತ್ತು ಅಧೀನ ನ್ಯಾಯಾಲಯಗಳಲ್ಲಾದರೂ ಪ್ರಾದೇಶಿಕ ಹಾಗೂ ಸ್ಥಳೀಯ ಭಾಷೆಗಳಿಗೆ ಆದ್ಯತೆ ಸಿಗಬೇಕೆನ್ನುವುದಾಗಿದೆ ಎಂದರು.

ಯಾವುದೇ ಮಾತೃಭಾಷೆಯನ್ನು ಕೀಳಾಗಿ ನೋಡಬಾರದು. ಮಾತೃಭಾಷೆಯು ಇಂಗ್ಲಿಷ್‌ಗಿಂತ ಕಡಿಮೆಯೇನಲ್ಲ. ಇಂಗ್ಲಿಷ್‌ನಲ್ಲಿ ಹೆಚ್ಚು ಮಾತನಾಡಿದರೆ ವಕೀಲರಿಗೆ ಹೆಚ್ಚು ಮೊಕದ್ದಮೆಗಳು, ಹೆಚ್ಚು ಶುಲ್ಕ ಹಾಗೂ ಹೆಚ್ಚು ಗೌರವ ಸಿಗುತ್ತದೆ ಎನ್ನುವ ವಾದವನ್ನು ಒಪ್ಪಲಾಗದು. ಯಾವುದೇ ನ್ಯಾಯಾಲಯವು ಕೆಲವು ವಿನಾಯಿತಿಗಳಿಗೆ ಮಾತ್ರವೇ ಇರಬಾರದು. ನ್ಯಾಯದ ಬಾಗಿಲುಗಳನ್ನುಎಲ್ಲರಿಗೂ ಸಮಾನವಾಗಿ ತೆರೆದಿರಬೇಕು ಎಂದು ಅವರು ಹೇಳಿದರು.

ದೇಶದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಏರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, ಇಂತಹ ಪ್ರಕರಣಗಳ ಸಂಖ್ಯೆ 5 ಕೋಟಿಗೆ ತಲುಪುತ್ತಿದೆ. ಆದರೆ, ನ್ಯಾಯಾಂಗ ಮತ್ತು ಸರ್ಕಾರದ ಮಧ್ಯೆ ಸಮನ್ವಯತೆ ಇದ್ದಾಗ ಇಂತಹ ಅನಿಶ್ಚಿತತೆ ತಗ್ಗಿಸಬಹುದು. ಆದಷ್ಟು ಬೇಗ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಬೇಕು ಎಂದರು.

ಸೋಮವಾರ ಆರಂಭವಾಗಲಿರುವ ಸಂಸತ್‌ ಅಧಿವೇಶನದಲ್ಲಿ ಸುಮಾರು 70 ಅನಗತ್ಯ ಕಾಯ್ದೆಗಳನ್ನು ಹಿಂಪಡೆಯಲಾಗುವುದು. ಶಾಸನಪುಸ್ತಕದಿಂದ ಸುಮಾರು 1,486 ಕಾನೂನುಗಳನ್ನು ಈವರೆಗೆ ತೆಗೆದುಹಾಕಲಾಗಿದೆ. ಇನ್ನೂ 1,824ಅನಗತ್ಯ ಕಾನೂನುಗಳನ್ನು ರದ್ದುಪಡಿಸಲು ಗುರುತಿಸಲಾಗಿದೆ ಎಂದು ರಿಜಿಜು ಹೇಳಿದರು.

‘ಎಎಎಸ್‌ಆರ್‌ ಕಾಯ್ದೆಗೆ ತಿದ್ದುಪಡಿ ಮಸೂದೆ’

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಹೆಚ್ಚಿನ ಅಧಿಕಾರ ನೀಡಲು ಮತ್ತು ಪುರಾತನ ಸ್ಮಾರಕಗಳ ರಕ್ಷಣೆಯ ಸಂಬಂಧದ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವ ಮಸೂದೆಯನ್ನು ಸೋಮವಾರ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗುತ್ತದೆ.

ಲೋಕಸಭೆಯ ಬುಲೆಟಿನ್ ಪ್ರಕಾರ, ಪುರಾತನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಅವಶೇಷಗಳು (ತಿದ್ದುಪಡಿ) ಮಸೂದೆ 2022 ಪರಿಚಯಿಸಲು ಮತ್ತು ಅಂಗೀಕಾರಕ್ಕಾಗಿ ಇದನ್ನು ಸರ್ಕಾರ ಪಟ್ಟಿ ಮಾಡಿದೆ.ಈ ಮಸೂದೆಯು ನಿಷೇಧಿತ ಪ್ರದೇಶಗಳ ರಕ್ಷಣೆ ಮತ್ತುಇತರ ತಿದ್ದುಪಡಿಗಳನ್ನು ತರುವ ಉದ್ದೇಶ ಹೊಂದಿದೆ.

ಸಂರಕ್ಷಿತ ಸ್ಮಾರಕಗಳ ಸುತ್ತಲಿನ 100 ಮೀಟರ್ ಜಾಗ ನಿಷೇಧಿತ ಪ್ರದೇಶವೆಂದು ಘೋಷಿಸಲು ಮತ್ತು ನಿಷೇಧಿತ ಪ್ರದೇಶದ ನಂತರದ 300 ಮೀಟರ್‌ ಸುತ್ತಲಿನ ಜಾಗವನ್ನು ನಿಯಂತ್ರಿತ ಪ್ರದೇಶವಾಗಿ ಗುರುತಿಸಲು, ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಅವಶೇಷಗಳು (ಎಎಎಸ್ಆರ್) ಕಾಯಿದೆ 1958ಕ್ಕೆ 2010ರಲ್ಲಿ ತಿದ್ದುಪಡಿ ತರಲಾಗಿತ್ತು. ಈ ಕಾಯ್ದೆಯ ಸೆಕ್ಷನ್‌ 20ಎ ಅನ್ನು ಬದಲಾಯಿಸುವ ಪ್ರಸ್ತಾವನೆಗೆ ಈ ತಿದ್ದುಪಡಿ ತರುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT