ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈವಿಕ ಭಯೋತ್ಪಾದನೆ ತಡೆ ಕಾನೂನು ಅಗತ್ಯ

ಸಂಸತ್ತಿನ ಆರೋಗ್ಯ ಸ್ಥಾಯಿ ಸಮಿತಿಯಿಂದ ಸರ್ಕಾರಕ್ಕೆ ಸಲಹೆ
Last Updated 22 ನವೆಂಬರ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ:ಜೈವಿಕ ಭಯೋತ್ಪಾದನೆ ತಡೆಗೆ ಪರಿಣಾಮಕಾರಿ ಕಾನೂನು ರೂಪಿಸುವ ಅಗತ್ಯವಿದೆ ಎಂದು ಸಂಸತ್ತಿನ ಆರೋಗ್ಯ ಸ್ಥಾಯಿಸಮಿತಿಯು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ಜೈವಿಕ ಅಸ್ತ್ರಗಳನ್ನು ನಿಯಂತ್ರಿಸಬೇಕಾದ ಮಹತ್ವವನ್ನು ಕೋವಿಡ್–19 ಸಾಂಕ್ರಾಮಿಕ ತಿಳಿಸಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟಿರುವ ಸಮಿತಿ, ವಿವಿಧ ದೇಶಗಳ ನಡುವೆ ಈ ಸಂಬಂಧ ಮಹತ್ವದ ಪಾಲುದಾರಿಕೆ ಆಗಬೇಕಿದೆ ಎಂದಿದೆ.

ಸ್ಥಾಯಿಸಮಿತಿ ಸಿದ್ಧಪಡಿಸಿರುವ ‘ಕೋವಿಡ್–19 ಸಾಂಕ್ರಾಮಿಕ ಮತ್ತು ಅದರ ನಿರ್ವಹಣೆ’ ಎಂಬ ವರದಿಯಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಿದೆ. ಯಾವುದೇ ರೀತಿಯ ಜೈವಿಕ ಭಯೋತ್ಪಾದನಾ ಚಟುವಟಿಕೆಗಳಿಗೆ ವಿಶ್ವ ಸಮುದಾಯ ಒಳಗಾಗದಂತೆ ತಡೆಯುವ ಜೈವಿಕ ಸುರಕ್ಷತೆ ಬಗ್ಗೆ ವರದಿ ಒತ್ತಿ ಹೇಳಿದೆ.

ಸ್ಥಾಯಿಸಮಿತಿ ಮುಖ್ಯಸ್ಥ ರಾಮ್ ಗೋಪಾಲ್ ಯಾದವ್ ಅವರು ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ವರದಿಯನ್ನು ಶನಿವಾರ ಸಲ್ಲಿಸಿದರು.

ಪ್ರಪಂಚದಾದ್ಯಂತ ಕೋಟ್ಯಂತರ ಜನರಿಗೆಕೊರೊನಾ ವೈರಾಣು ಸೋಂಕು ತಗುಲಿರುವ ಮತ್ತು ಅದು ಸಾಂಕ್ರಾಮಿಕ ರೋಗವಾಗಿ ಬದಲಾಗಿರುವ ಬಗ್ಗೆ ಗಮನ ಸೆಳೆದಿರುವ ಸಮಿತಿ, ಶತ್ರು ರಾಷ್ಟ್ರಗಳ ವಿರುದ್ಧ ಜೈವಿಕ ಅಸ್ತ್ರಗಳಾಗಿ ವೈರಸ್‌ಗಳನ್ನು ಬಳಸಬಹುದು ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

‘ಜೈವಿಕ ಶಸ್ತ್ರಾಸ್ತ್ರಗಳ ವಿರುದ್ಧ ಜೈವಿಕ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಸಮಗ್ರ ವಿಧಾನದ ಅಗತ್ಯವಿದೆ. ಜೈವಿಕ ಅಸ್ತ್ರಗಳ ತಡೆಗಟ್ಟುವಿಕೆ, ಅವುಗಳಿಂದ ರಕ್ಷಣೆ ಅಗತ್ಯ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಹಾಗೂ ದೇಶದಲ್ಲಿ ಜೈವಿಕ ಸುರಕ್ಷತೆ ಮತ್ತು ಭದ್ರತೆಯನ್ನು ಬಲಪಡಿಸುವ ತುರ್ತು ಇದೆ’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಜೈವಿಕ ಸುರಕ್ಷತಾ ಕ್ರಮಗಳು
*
ಜೈವಿಕ ಸುರಕ್ಷತೆಯು ಮಹತ್ವದ ಅಂಶವಾಗಿದ್ದು, ಸರ್ಕಾರ ಕಾನೂನು ರೂಪಿಸಲು ಇದು ಸರಿಯಾದ ಸಮಯ
*ಪ್ರಾಣಿಗಳು ಹಾಗೂ ಮಾನವನಿಗೆ ಸಂಬಂಧಿಸಿದ ರೋಗಗಳ ಬಗ್ಗೆ ಕಣ್ಗಾವಲು ಬಲಪಡಿಸಬೇಕು
*ಜೈವಿಕ ಶಸ್ತ್ರಾಸ್ತ್ರಗಳ ಬಳಕೆಯಿಂದ ಉಂಟಾಗುವ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ನಿರ್ವಹಣೆಗಾಗಿ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಅತ್ಯಗತ್ಯ
*ಲಸಿಕೆಗಳು ಹಾಗೂ ಔಷಧಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಶೋಧನೆ ಹಾಗೂ ಕಣ್ಗಾವಲು ಹೆಚ್ಚಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT