ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಸ್ಪಂದಿಸದಿದ್ದರೆ ಎನ್‌ಡಿಎಯಿಂದ ಹೊರಕ್ಕೆ: ಬಿಜೆಪಿ ಮಿತ್ರಪಕ್ಷದ ಎಚ್ಚರಿಕೆ

Last Updated 13 ಡಿಸೆಂಬರ್ 2020, 3:51 IST
ಅಕ್ಷರ ಗಾತ್ರ

ಜೈಪುರ: ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರಾಜಸ್ಥಾನದಲ್ಲಿ ಶನಿವಾರ ರೈತರು ಹಲವು ಹೆದ್ದಾರಿಗಳನ್ನು ತಡೆದು ಪ್ರತಿಭಟಿಸಿದ್ದಾರೆ. ಬಿಜೆಪಿ ಮಿತ್ರ ಪಕ್ಷ ಲೋಕತಾಂತ್ರಿಕ್‌ ಪಕ್ಷದ (ಆರ್‌ಎಲ್‌ಪಿ) ಸಂಸದ ಹನುಮಾನ್ ಬೆನಿವಾಲ್ ಕೂಡ ಈ ಪ್ರತಿಭಟನೆಗಳಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ.

ಹೊಸ ಕೃಷಿ ಕಾನೂನುಗಳನ್ನು "ರೈತ ವಿರೋಧಿ" ಎಂದು ಕರೆದಿರುವ ಆರ್‌ಎಲ್‌ಪಿಯ ಸಂಚಾಲಕ ಬೆನಿವಾಲ್, ಪ್ರಧಾನಿ ನರೇಂದ್ರ ಮೋದಿಯವರು ರೈತರ ಬಗ್ಗೆ ಕಾಳಜಿ ವಹಿಸಿದ್ದೇ ಆದರೆ, ಅವರು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

ಮಾತುಕತೆಯಲ್ಲಿ ರೈತರ ಪರವಾದ ನಿರ್ಧಾರಗಳನ್ನು ಕೈಗೊಳ್ಳದೇ ಹೋದರೆ, ಎನ್‌ಡಿಎಯಿಂದ ಹೊರ ಹೋಗುವುದಾಗಿಯೂ ಅವರು ಪುನರುಚ್ಚರಿಸಿದರು. ಅಲ್ಲದೆ, ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರಾಜಸ್ಥಾನ-ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಬೆನಿವಾಲ್ ಮತ್ತು ಅವರ ಬೆಂಬಲಿಗರು ಘೋಷಿಸಿದರು.

ಮಿತ್ರಪಕ್ಷಗಳೊಂದಿಗೆ ಸಮಾಲೋಚನೆ ಮಾಡಿಲ್ಲ

'ಮೂರು ಮಸೂದೆಗಳನ್ನು ರೂಪಿಸಿದಾಗ ಬಿಜೆಪಿ ಯಾರೊಂದಿಗೂ ಸಮಾಲೋಚನೆ ನಡೆಸಿಲ್ಲ. ನಾವೂ ಎನ್‌ಡಿಎಯ ಭಾಗವಾಗಿದ್ದೇವೆ. ನಾವೂ ರೈತರ ಮಕ್ಕಳು. ಅವರು ನಮ್ಮೊಂದಿಗೆ ಮಾತನಾಡಬೇಕಿತ್ತು. ರೈತರಿಗೆ ಸಂಬಂಧಿಸಿದಂತೆ ಇಂಥದ್ದೊಂದು ಮಸೂದೆಯನ್ನು ರೂಪಿಸುತ್ತಿರುವುದಾಗಿ ಬಿಜೆಪಿ ನಮಗೆ ಹೇಳಬೇಕಾಗಿತ್ತು. ಈ ಮಸೂದೆಗಳನ್ನು ರೂಪಿಸಿದ್ದು ಯಾರೆಂದು ಗೊತ್ತಿಲ್ಲ. ಮಸೂದೆಗಳನ್ನು ತಂದರು, ಅಂಗೀಕರಿಸಿದರು,'ಎಂದು ಬೆನಿವಾಲ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಬಿಜೆಪಿ ಮಿತ್ರಪಕ್ಷವಾದ ಆರ್‌ಎಲ್‌ಪಿ ರಾಜಸ್ಥಾನದಲ್ಲಿ ಒಂದು ಲೋಕಸಭೆ ಸ್ಥಾನ ಗೆದ್ದಿದ್ದು, ವಿಧಾನಸಭೆಯಲ್ಲಿ ಮೂವರು ಶಾಸಕರನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT