ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿಗಳ ಆಸ್ತಿ ಮೇಲಿನ ಪ್ರೇಮ ಸಾರ್ವಜನಿಕ ಆಸ್ತಿ ಮೇಲಿಲ್ಲ ಏಕೆ? ಬಿಜೆಪಿ ಪ್ರಶ್ನೆ

ಅಕ್ಷರ ಗಾತ್ರ

ಬೆಂಗಳೂರು: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ವರಿಷ್ಠರನ್ನು ವಿಚಾರಣೆಗೆ ಒಳಪಡಿಸುತ್ತಿರುವುದರ ವಿರುದ್ಧ ಕಾಂಗ್ರೆಸ್‌ ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಬಿಜೆಪಿ ವ್ಯಂಗ್ಯವಾಡಿದೆ.

ಕಾಂಗ್ರೆಸ್‌ ನಾಯಕರಿಗೆ ನಕಲಿ ಗಾಂಧಿಗಳ ಆಸ್ತಿಯ ಮೇಲಿರುವ ಪ್ರೇಮ ಸಾರ್ವಜನಿಕ ಆಸ್ತಿ ಪಾಸ್ತಿಯ ಮೇಲಿಲ್ಲವೇಕೆ ಕಾಂಗ್ರೆಸ್ಸಿಗರೇ, ಸಾರ್ವಜನಿಕ ಸ್ವತ್ತುಗಳಿಗೆ ಹಾನಿ ಮಾಡಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿದ್ದೀರಾ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಕಾನೂನು ವಿಚಾರಣೆಯನ್ನೇ ವಿಷಯವಾಗಿಸಿಕೊಂಡು ದೇಶವ್ಯಾಪಿ ಕಾನೂನು ಸುವ್ಯವಸ್ಥೆಯನ್ನು ದುರ್ಬಲಗೊಳಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಪೊಲೀಸರ ಮೇಲೆ ಹಲ್ಲೆ ಮಾಡುವುದು, ಪೊಲೀಸ್‌ ವಾಹನಗಳನ್ನು ಜಖಂಗೊಳಿಸುವುದು, ಬೈಕ್‌ ಬಸ್‌ಗಳನ್ನು ಸುಡುವುದು ನ್ಯಾಯವೇ?’ ಎಂದು ಪ್ರಶ್ನಿಸಿದೆ.

‘ಈ ದೇಶದ ಕಾನೂನು ನಕಲಿ ಗಾಂಧಿ ಕುಟುಂಬಕ್ಕೆ ಅನ್ವಯಿಸಬಾರದು ಎಂಬುದು ಕಾಂಗ್ರೆಸ್‌ ನಿಲುವೇ? ದೇಶದ ಸಂವಿಧಾನ ಅಥವಾ ಭಾರತೀಯ ದಂಡ ಸಂಹಿತೆಯ ಯಾವ ಭಾಗದಲ್ಲಿ ನಕಲಿ ಗಾಂಧಿಗಳಿಗೆ ಕಾನೂನಿನ ರಿಯಾಯಿತಿ ನೀಡಲಾಗಿದೆ?’ ಎಂದು ಬಿಜೆಪಿ ಕೇಳಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಅವರು ಸೋಮವಾರ, ಮಂಗಳವಾರ ಮತ್ತು ಬುಧವಾರ ಇ.ಡಿ ವಿಚಾರಣೆ ಎದುರಿಸಿದ್ದರು. ಶುಕ್ರವಾರ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಆದರೆ ಸೋನಿಯಾ ಗಾಂಧಿ ಅವರ ಅನಾರೋಗ್ಯದ ಕಾರಣ, ಶುಕ್ರವಾರದ ಬದಲು ಸೋಮವಾರ ವಿಚಾರಣೆಗೆ ಬರುವುದಾಗಿ ರಾಹುಲ್‌ ಹೇಳಿದ್ದರು. ಇದಕ್ಕೆ ಇ.ಡಿ ಸಮ್ಮತಿಸಿದೆ. ರಾಹುಲ್‌ ವಿಚಾರಣೆ ವಿರುದ್ಧ ಕಾಂಗ್ರೆಸ್‌ ದೇಶದಲ್ಲಿ ವ್ಯಾಪಕ ಪ್ರತಿಭಟನೆ ಹಮ್ಮಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT