ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆ ರದ್ದು ಮಾಡಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಜೀವಕೊಟ್ಟ ಮೋದಿ

Last Updated 21 ನವೆಂಬರ್ 2021, 7:49 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಕೃಷಿ ಕಾಯ್ದೆಗಳ ಕಾರಣಕ್ಕೆ ಉದ್ಭವಿಸಿದ್ದ ರಾಜಕೀಯ ಬಿಕ್ಕಟ್ಟೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪರಿಹರಿಸಿದ್ದಾರೆ ಎಂದು ಅಲ್ಲಿನ ಬಿಜೆಪಿ ನಾಯಕರು ಹರ್ಷಗೊಂಡಿದ್ದಾರೆ.

ರೈತರ ಹೋರಾಟ ಆರಂಭವಾದಗಿನಿಂದಲೂ ಈ ಭಾಗದ ಬಿಜೆಪಿ ಶಾಸಕರು ಕೃಷಿ ವರ್ಗದ ಆಕ್ರೋಶಕ್ಕೆ ಗುರಿಯಾಗಿದ್ದರು. ಈಗ ಆ ಸಮಸ್ಯೆ ಏಕಾಏಕಿ ಪರಿಹಾರಗೊಂಡಿದೆ.

ಕೇಂದ್ರ ರೂಪಿಸಿದ್ದ ಮೂರು ಕೃಷಿ ಕಾನೂನುಗಳನ್ನು ರೈತರಿಗೆ ಸೂಕ್ತ ರೀತಿಯಲ್ಲಿ ವಿವರಿಸುವಂತೆ ಬಿಜೆಪಿಯು ತನ್ನ ಚುನಾಯಿತ ಪ್ರತಿನಿಧಿಗಳಿಗೆ ಸೂಚಿಸಿತ್ತು. ಅದರಂತೆ ರೈತರನ್ನು ಕಾಣಲು ಹಳ್ಳಿಗಳಿಗೆ ಹೋಗುತ್ತಿದ್ದ ಜನಪ್ರತಿನಿಧಿಗಳಿಗೆ ಅಲ್ಲಿ ರೈತರಿಂದ ವಿರೋಧ ವ್ಯಕ್ತವಾಗುತ್ತಿತ್ತುಇಮ . ಬಿಜೆಪಿ ನಾಯಕರು ಏನೂ ಹೇಳಿದರೂ ಅದನ್ನು ಕೇಳುವ ವ್ಯವದಾನವೂ ಅವರಲ್ಲಿ ಇರಲಿಲ್ಲ. ಇನ್ನೂ ಚರ್ಚೆ ಎಂಬುದು ದೂರದ ಮಾತಾಗಿತ್ತು.

ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಸೋತಾಗ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿತ್ತು

'ಕೃಷಿ ಕಾಯ್ದೆಯ ವಿಚಾರವು ಚುನಾವಣೆಯ ವಸ್ತು ವಿಷಯವಾಗುತ್ತದೆ ಎಂಬುದು ನಮಗೆ ಸ್ಪಷ್ಟವಾಗಿ ಗೊತ್ತಿತ್ತು. ರೈತರ ಆಂದೋಲನವು ಪಶ್ಚಿಮ ಉತ್ತರ ಪ್ರದೇಶದಲ್ಲಿ ಗಂಭೀರ ಪರಿಣಾಮ ಬೀರುವ, ಅಲ್ಲಿ ನಾವು ಹಿನ್ನಡೆ ಅನುಭವಿಸುವ ಮುನ್ಸೂಚನೆಯೂ ಇತ್ತು. ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಪ್ರಧಾನ ಮಂತ್ರಿಯ ನಿರ್ಧಾರವು ನಮಗೆ ಹೆಚ್ಚಿನ ಪ್ರಮಾಣದಲ್ಲಿ ನೆರವಾಗಿದೆ. ಆದರೆ ಈ ಹಿಂದೆ ಈ ಕಾನೂನುಗಳಿಗೆ ನಾವು ನೀಡಿದ್ದ ಬೆಂಬಲವನ್ನು ಈಗ ಸಮರ್ಥಿಸಿಕೊಳ್ಳಬೇಕಾದ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ,’ ಎಂದು ಹೆಸರು ಹೇಳಲಿಚ್ಚಿಸದ ಬಿಜೆಪಿ ಶಾಸಕರೊಬ್ಬರು ತಿಳಿಸಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಳೆದುಹೋಗಿದ್ದ ಬಿಜೆಪಿ ನೆಲೆಯನ್ನು ಮರಳಿ ಸ್ಥಾಪಿಸಲು ಪ್ರಧಾನಿಯವರ ನಿರ್ಧಾರವು ಸಹಾಯ ಮಾಡುತ್ತದೆ ಎಂದು ಬಿಜೆಪಿಯ ರಾಜ್ಯ ಘಟಕವು ವಿಶ್ವಾಸ ಹೊಂದಿದೆ.

'ಪ್ರಧಾನಿ ಘೋಷಣೆಯ ನಂತರ ನಮ್ಮ ನೆಲೆಯನ್ನು ಮತ್ತೆ ಭದ್ರಪಡಿಸಿಕೊಳ್ಳಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಈಗ ನಾವು ಹೇಳುವುದನ್ನು ರೈತರೂ ಕೇಳುತ್ತಾರೆ ಎಂಬ ವಿಶ್ವಾಸ ನಮಗೂ ಇದೆ. ಮೋದಿ ಮತ್ತು ಯೋಗಿ ಸರ್ಕಾರಗಳು ರೈತರ ಅನುಕೂಲಕ್ಕಾಗಿ ಸಾಕಷ್ಟು ಮಾಡಿದ್ದು, ನಾವು ಈಗ ಅವರ ಸಂದೇಶವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ,' ಎಂದು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.

'ಕೃಷಿ ಕಾಯ್ದೆಗಳ ಹಿಂದೆಗೆತವು ರೈತರ ಭಾವನೆಗಳನ್ನು ತಣ್ಣಗಾಗಿಸಿದೆ. ಬಿಜೆಪಿಗೆ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದು ನಮಗೆ ಬಿಟ್ಟದ್ದು. ಪ್ರತಿಪಕ್ಷಗಳು ತಮ್ಮ ವಾದ ಮುಂದುವರೆಸುತ್ತವೆ ಎಂದು ನಮಗೆ ತಿಳಿದಿದೆ. ಆದರೆ ನಾವು ಅವುಗಳನ್ನು ಹಿಮ್ಮೆಟ್ಟಿಸುತ್ತೇವೆ,’ ಎಂದು ಪಶ್ಚಿಮ ಭಾಗದ ಮತ್ತೊಬ್ಬ ಬಿಜೆಪಿ ಶಾಸಕರು ಹೇಳಿದ್ದಾರೆ.

ಮೂಲಗಳ ಪ್ರಕಾರ, ಚಳವಳಿಯ ಸಮಯದಲ್ಲಿ ರೈತರನ್ನು ಹೆಚ್ಚು ಟೀಕಿಸಿದ ಶಾಸಕರಿಗೆ ಈ ಬಾರಿ ಟಿಕೆಟ್‌ ನೀಡದಿರಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.

ಆದರೆ, ಬಿಜೆಪಿ ಏನೇ ಮಾಡಿದರೂ, ಲಖಿಂಪುರ ಖೇರಿ ಘಟನೆಯು ಪಕ್ಷಕ್ಕೆ ಹಾನಿಯುಂಟು ಮಾಡುತ್ತಿದೆ.

ಕೃಷಿ ಕಾನೂನು ರದ್ದುಗೊಂಡಿರುವುದರಿಂದ ಇನ್ನು ಮುಂದೆ ಪ್ರತಿಪಕ್ಷಗಳು ಲಖಿಂಪುರ ಖೇರಿ ಪ್ರಕರಣವನ್ನು ಹಿಡಿದು ಜಗ್ಗುತ್ತವೆ ಎಂದು ಪಕ್ಷದ ಕಾರ್ಯಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ. ಅಲ್ಲದೇ, ರೈತರಲ್ಲಿ ಮನೆ ಮಾಡಿರುವ ಭಾವನೆಗಳು ಬಿಜೆಪಿಗೆ ಇನ್ನೂ ಪ್ರತೀಕೂಲವಾಗಿಯೇ ಕಾಣುತ್ತಿದೆ.

ಈ ಮಧ್ಯೆ ’ಮಿಷನ್‌ ಯುಪಿ’ ಇನ್ನೂ ಮುಗಿದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್ ಶನಿವಾರ ಹೇಳಿರುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

'ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಉತ್ತರ ನೀಡಲು ಸಾಕಷ್ಟಿದೆ. ಲಖೀಂಪುರ ಘಟನೆ, ರೈತರನ್ನು ವ್ಯಂಗ್ಯವಾಡಿದ್ದು, ನಮ್ಮ ವಿರುದ್ಧ ನಿಂದನೆ ಮಾಡಿದ್ದು... ಇವೆಲ್ಲವೂ ಇನ್ನೂ ಜೀವಂತವಾಗಿವೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT