ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಕ್ಸಟ್ಟೆ ಭಾಗ್ಯ... ಕಾಂಗ್ರೆಸ್ ಆಶ್ವಾಸನೆ ವಿರುದ್ಧ ಬಿಜೆಪಿ ದಾಳಿ ಮುಂದುವರಿಕೆ!

Last Updated 17 ಜನವರಿ 2023, 11:12 IST
ಅಕ್ಷರ ಗಾತ್ರ

ಬೆಂಗಳೂರು: 200 ಯೂನಿಟ್‌ ಉಚಿತ ವಿದ್ಯುತ್‌, ‘ಗೃಹಲಕ್ಷ್ಮೀ’ ಕಾರ್ಯಕ್ರಮದಡಿ ಮನೆಯ ಯಜಮಾನಿಗೆ ಮಾಸಿಕ ₹2,000 ಸಹಾಯಧನ ನೀಡುವ ಕಾಂಗ್ರೆಸ್‌ನ ಆಶ್ವಾಸನೆಗಳ ವಿರುದ್ಧ ಬಿಜೆಪಿ ದಾಳಿ ಮುಂದುವರಿಸಿದೆ. ‘ಪುಕ್ಸಟ್ಟೆ ಭಾಗ್ಯಗಳನ್ನು ನೀಡಿ ರಾಜ್ಯವನ್ನು ದಿವಾಳಿ ಮಾಡುವ ಆಲೋಚನೆಯಲ್ಲಿದೆ ಕಾಂಗ್ರೆಸ್‌’ ಎಂದು ಆರೋಪಿಸಿದೆ.

ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿಯೂ, ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ ₹2,000 ಸಹಾಯಧನ ನೀಡುವುದಾಗಿಯೂ ಕಾಂಗ್ರೆಸ್‌ ಭರವಸೆ ನೀಡಿದೆ. ಕಾಂಗ್ರೆಸ್‌ ಈ ಕಾರ್ಯಕ್ರಮಗಳನ್ನು ಘೋಷಿಸಿದಾಗಿನಿಂದಲೂ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ, ಇಂದೂ ಕೂಡ ತನ್ನ ಟೀಕೆ ಮುಂದುವರಿಸಿದೆ.

‘ಕಾಂಗ್ರೆಸ್ ತನ್ನ ಏಳು ದಶಕಗಳ ಸಾಧನೆಯನ್ನು ಜನತೆಯ ಮುಂದಿಟ್ಟು ಮತ ಭಿಕ್ಷೆ ಕೇಳಬೇಕಿತ್ತು. ಅದರ ಬದಲು ಜನರಿಗೆ ಪೂರೈಸಲಾಗದ ಪೊಳ್ಳು ಭರವಸೆಗಳನ್ನು ಕೊಡುತ್ತಿದೆ. ಅಧಿಕಾರದ ಲಾಲಸೆಯಲ್ಲಿರುವ ಡಿ.ಕೆ ಶಿವಕುಮಾರ್‌ ಸ್ವಾಭಿಮಾನಿ ಕನ್ನಡಿಗರ ದಾರಿ ತಪ್ಪಿಸುತ್ತಿದ್ದಾರೆ. 2013-18ರವರೆಗೂ ಕಾಂಗ್ರೆಸ್ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕವನ್ನು ಕೊಳ್ಳೆ ಹೊಡಿದಿತ್ತು. ಕಾಂಗ್ರೆಸ್‌ ನೀಡಿದ ದೌರ್ಭಾಗ್ಯಗಳ ಫಲವಾಗಿ ಇಂದು ವಿರೋಧ ಪಕ್ಷದ ಸ್ಥಾನದಲ್ಲಿದೆ. ಸಂಸತ್ತಿನಲ್ಲಿ ವಿಪಕ್ಷ ಸ್ಥಾನ ಕಳೆದುಕೊಂಡಿರುವ ಕಾಂಗ್ರೆಸ್‌, ಕರ್ನಾಟಕದಲ್ಲೂ ಈ ದುಸ್ಥಿತಿ ಎದುರಾಗುವ ಆತಂಕದಲ್ಲಿದೆ’ ಎಂದು ವ್ಯಂಗ್ಯವಾಡಿದೆ.

‘ನಾ ನಾಯಕಿ’ ಎಂದು ರಾಜ್ಯಕ್ಕೆ ಬಂದ ಪ್ರಿಯಾಂಕಾ ಗಾಂಧಿ ವಂಶಪಾರಂಪರ್ಯ ನಾಯಕತ್ವವನ್ನು ಉಳಿಸಿಕೊಳ್ಳಲು ಸ್ವಾಭಿಮಾನಿ ಕನ್ನಡಿಗರನ್ನು ಈ ಬಾರಿ ಅವಲಂಬಿಸಿದ್ದಾರೆ. ರಾಹುಲ್‌ ಗಾಂಧಿ ಉಪಯೋಗಕ್ಕಿಲ್ಲವಾಗಿರುವುದರಿಂದಲೇ ಬೋಗಸ್ ಭಾಗ್ಯದ ಆಮಿಷ ಒಡುತ್ತಿರುವುದು. ಕನ್ನಡಿಗರದ್ದು ಕೊಡುವ ಗುಣವೆಂಬುದು ಅವರು ಮರೆತಂತಿದೆ’ ಎಂದು ಬಿಜೆಪಿ ಹೇಳಿದೆ.

‘ಎಡಬಿಡಂಗಿ ಸಿದ್ಧಾಂತ ಪ್ರತಿಪಾದಿಸುವ ಕಾಂಗ್ರೆಸ್ ಪುಕ್ಸಟ್ಟೆ ಭಾಗ್ಯಗಳನ್ನು ನೀಡಿ ಕರ್ನಾಟಕವನ್ನು ದಿವಾಳಿ ಮಾಡುವ ಆಲೋಚನೆಯಲ್ಲಿದೆ. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಗಿವೆ. ಭಾರತದ ಆರ್ಥಿಕತೆ ಸಧೃಡವಾಗಿರುವುದು ಕಾಂಗ್ರೆಸ್‌ಗೆ ಸಹಿಸಲಾಗುತ್ತಿಲ್ಲವೇ? ಕಾಂಗ್ರೆಸ್ ಎಂದಿಗೂ ತನ್ನ ಸಾಧನೆ ಮೂಲಕ ಮತ ಕೇಳುವ ಸಂಸ್ಕಾರವನ್ನು ಬೆಳೆಸಿಕೊಂಡಿಲ್ಲ. ಇಂದಿರಾ ಗಾಂಧಿ ಅಮೆರಿಕದಿಂದ ಉಚಿತವಾಗಿ ಬಂದ ಜೋಳವನ್ನೇ ಅಂದು 50 ಪೈಸೆಗೆ ಮಾರಾಟ ಮಾಡಿದ್ದರು. ಇಂದು ಅವರ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಕರ್ನಾಟಕಕ್ಕೆ ಬಂದು ಮಹಿಳೆಯರಿಗೆ 2,000 ರೂ. ಭರವಸೆ ನೀಡಿರುವುದು ಹಾಸ್ಯಾಸ್ಪದ’ ಎಂದು ಬಿಜೆಪಿ ಗೇಲಿ ಮಾಡಿದೆ.

ಗೃಹಲಕ್ಷ್ಮೀಯ ಅಣಕ

ಕಾಂಗ್ರೆಸ್‌ ‘ಗೃಹಲಕ್ಷ್ಮೀ’ ಕಾರ್ಯಕ್ರಮವನ್ನು ಘೋಷಿಸುತ್ತಲೇ ಟ್ವೀಟ್‌ ಮಾಡಿದ್ದ ಬಿಜೆಪಿ ‘ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಸಬಲೀಕರಣ ಬಿಡಿ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳನ್ನೇ ಎಂದೂ ಪ್ರಶ್ನಿಸದ ಪ್ರಿಯಾಂಕಾ ಗಾಂಧಿ ಇದೀಗ ಗೃಹಲಕ್ಷ್ಮಿ ಎಂಬ ಯೋಜನೆ ಜಾರಿಗೊಳಿಸುತ್ತೇವೆ ಎಂದಿರುವುದು ಕಾಂಗ್ರೆಸ್’ನ ಗ್ಯಾರಂಟಿ ಸುಳ್ಳಿನ ಸರಣಿಯ ಮುಂದುವರಿದ ಭಾಗ. ಈ ಡೋಂಗಿತನದ ಅರಿವು ರಾಜ್ಯದ ಜನರಿಗಿದೆ’ ಎಂದು ಹೇಳಿತ್ತು.

ಸುನಿಲ್‌ ಕುಮಾರ್‌– ಸಿದ್ದರಾಮಯ್ಯ ನಡುವೆ ವಾಗ್ವಾದ

200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಕಾರ್ಯಕ್ರಮದ ವಿಚಾರವಾಗಿ ಇಂಧನ ಸಚಿವ ಸುನಿಲ್‌ ಕುಮಾರ್‌ ಮತ್ತು ಸಿದ್ದರಾಮಯ್ಯ ನಡುವೆ ವಾಗ್ವಾದ ನಡೆದಿತ್ತು.

ಉಚಿತ ವಿದ್ಯುತ್ ಎಂಬುದು ಕಾಂಗ್ರೆಸ್‌ನ ಸುಳ್ಳು ಡಂಗುರ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಇಲಾಖೆಯನ್ನು ಲಾಭದ ಹಳಿಗೆ ತಂದು ಜನರಿಗೆ 200 ಯುನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ಪೂರೈಸಲಾಗುವುದು. ಉದ್ಘಾಟನಾ ಸಮಾರಂಭಕ್ಕೆ ಸುನಿಲ್‌ ಅವರನ್ನೂ ಆಹ್ವಾನಿಸುತ್ತೇವೆ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT