ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಚಲ ಪ್ರದೇಶ ಮತದಾನ ಇಂದು: ಇತಿಹಾಸ ಸೃಷ್ಟಿಸುವತ್ತ ದೃಷ್ಟಿ ನೆಟ್ಟ ಬಿಜೆಪಿ

Last Updated 11 ನವೆಂಬರ್ 2022, 19:32 IST
ಅಕ್ಷರ ಗಾತ್ರ

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆಯ 68 ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆಯಲಿದೆ. ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌, ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಅವರ ಮಗ ವಿಕ್ರಮಾದಿತ್ಯ ಸಿಂಗ್‌ ಸೇರಿ 412 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 55 ಲಕ್ಷಕ್ಕೂ ಹೆಚ್ಚು ಮತದಾರರು ಇವರ ರಾಜಕೀಯ ಭವಿಷ್ಯ ನಿರ್ಧರಿಸಲಿದ್ದಾರೆ.

ಅಭಿವೃದ್ಧಿ ಮಂತ್ರವನ್ನೇ ಪ್ರಮುಖ ಕಾರ್ಯಸೂಚಿ ಮಾಡಿಕೊಂಡು ಮತ ಯಾಚಿಸಿದ್ದ ಬಿಜೆಪಿಯು ರಾಜ್ಯದಲ್ಲಿ ಎರಡನೇ ಬಾರಿಗೆ ಅಧಿಕಾರ ಹಿಡಿದು ಇತಿಹಾಸ ಸೃಷ್ಟಿಸುವ ಕಡೆ ದೃಷ್ಟಿ ನೆಟ್ಟಿದೆ. ಆಡಳಿತಾರೂಢ ಪಕ್ಷಕ್ಕೆ ಎರಡನೇ ಬಾರಿ ಅಧಿಕಾರ ನೀಡಿರುವ ಉದಾಹರಣೆಯು ನಾಲ್ಕು ದಶಕದಿಂದ ಈಚೆಗೆರಾಜ್ಯದಲ್ಲಿ ಇಲ್ಲ. ಈ ಇತಿಹಾಸವನ್ನು ಮುಂದುವರಿಸುವಂತೆ ವಿರೋಧ ಪಕ್ಷ ಕಾಂಗ್ರೆಸ್‌ ಮತದಾರರಲ್ಲಿ ಮನವಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನೇತೃತ್ವದಲ್ಲಿ ಬಿಜೆಪಿ ಸರಣಿ ಚುನಾವಣಾ ಸಮಾವೇಶಗಳನ್ನು ನಡೆಸಿದೆ.

ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನೇತೃತ್ವದಲ್ಲಿ ಪಕ್ಷದ ಬಹುತೇಕಪ್ರಚಾರ ಸಮಾವೇಶಗಳು ನಡೆದಿವೆ. ಬಿಜೆಪಿ ಮುಷ್ಟಿಯಿಂದ ರಾಜ್ಯವನ್ನು ಪಡೆದುಕೊಳ್ಳುವುದು ಕಾಂಗ್ರೆಸ್‌ಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ.

24 ವರ್ಷಗಳ ಬಳಿಕ ಗಾಂಧಿ ಕುಟುಂಬದವರಲ್ಲದ ನಾಯಕನನ್ನು ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ನಡೆಯುತ್ತಿರವ ಮೊದಲ ಚುನಾವಣೆ ಇದಾಗಿದೆ ಮತ್ತು ಚುನಾವಣಾ ಕಣದಿಂದ ಪಕ್ಷದ ಪ್ರಮುಖ ನಾಯಕ ರಾಹುಲ್‌ ಗಾಂಧಿ ಸಂಪೂರ್ಣವಾಗಿ ಹೊರಗಿದ್ದದ್ದೂ ಈ ಚುನಾವಣೆಯ ಪ್ರಮುಖ ಅಂಶಗಳಲ್ಲಿ ಒಂದು.

ಭಾರಿ ಮೌಲ್ಯದ ಮದ್ಯ, ಉಡುಗೊರೆ ವಶ
ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ 11 ಲಕ್ಷ ಲೀಟರ್‌ ಮದ್ಯ, ₹65 ಕೋಟಿ ಮೌಲ್ಯದ ಉಡುಗೊರೆಗಳು ಮತ್ತು ₹17.84 ಕೋಟಿ ನಗದನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾ ಆಯೋಗವು ಹೇಳಿದೆ. ಇದೊಂದು ದಾಖಲೆ ಎಂದೂ ಆಯೋಗ ತಿಳಿಸಿದೆ.

ಕಳೆದ ಚುನಾವಣೆಗೆ ಹೋಲಿಸಿದರೆ ಹಿಮಾಚಲ ಪ್ರದೇಶದಲ್ಲಿ ವಶಕ್ಕೆ ಪಡೆಯಲಾದ ನಗದು ಮತ್ತು ವಸ್ತುಗಳ ಮೌಲ್ಯವು ಐದು ಪಟ್ಟು ಹೆಚ್ಚು.

ಚುನಾವಣಾ ಘೋಷಣೆಯಾಗಿ ಕೆಲವೇ ದಿನಗಳಲ್ಲಿ ಗುಜರಾತ್‌ನಲ್ಲಿ ₹71.88 ಕೋಟಿ ನಗದು ವಶಕ್ಕೆ ಪಡೆಯಲಾಗಿತ್ತು. 2017ರ ಚುನಾವಣೆ ಸಂದರ್ಭದಲ್ಲಿ ಒಟ್ಟು ₹27.21 ಕೋಟಿ ನಗದು ವಶಕ್ಕೆ ಪಡೆಯಲಾಗಿತ್ತು ಎಂದು ಆಯೋಗ ತಿಳಿಸಿದೆ.

ನರೋಡ ಪಾಟಿಯಾ ಹತ್ಯಾಕಾಂಡದ ತಪ್ಪಿತಸ್ಥನ ಮಗಳಿಗೆ ಬಿಜೆಪಿ ಟಿಕೆಟ್‌
ಅಹಮದಾಬಾದ್‌ (ಪಿಟಿಐ):
ನರೋಡ ಪಾಟಿಯಾ ಹತ್ಯಾಕಾಂಡದ ತಪ್ಪಿತಸ್ಥ ಮನೋಜ್‌ ಕುಕ್ರಾಣಿ ಅಲಿಯಾಸ್‌ ಸಿಂಧಿಯ ಮಗಳು ಅನಸ್ತೇಸಿಯಾ ತಜ್ಞೆ ಪಾಯಲ್‌ ಕುಕ್ರಾಣಿ ಅವರಿಗೆ ನರೋಡ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಸಿಕ್ಕಿದೆ. 2002ರ ಗೋಧ್ರೋತ್ತರ ಕೋಮು ಗಲಭೆಯಲ್ಲಿ ನರೋಡ ಪಾಟಿಯಾದಲ್ಲಿ 97 ಮುಸ್ಲಿಮರ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ 32 ಆರೋಪಿಗಳಿಗೆ ಶಿಕ್ಷೆ ಆಗಿತ್ತು. ಆದರೆ, ಗುಜರಾತ್‌ ಹೈಕೋರ್ಟ್‌ನ ವಿಭಾಗೀಯ ಪೀಠವು 17 ತಪ್ಪಿತಸ್ಥರನ್ನು 2018ರಲ್ಲಿ ಖುಲಾಸೆ ಮಾಡಿತ್ತು. ಅವರಲ್ಲಿ ಮಾಜಿ ಸಚಿವೆ ಮಾಯಾ ಕೊಡ್ನಾನಿ ಅವರೂ ಸೇರಿದ್ದಾರೆ. ಮನೋಜ್‌ ಕುಕ್ರಾಣಿ ಸೇರಿ 15 ತಪ್ಪಿತಸ್ಥರ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಎಲ್ಲ ತಪ್ಪಿತಸ್ಥರೂ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ.

ಗಲಭೆ ಸಂದರ್ಭದಲ್ಲಿ ಕೊಡ್ನಾನಿ ಅವರು ನರೋಡ ಕ್ಷೇತ್ರದ ಶಾಸಕಿಯಾಗಿದ್ದರು. ಮೂರು ಅವಧಿಗೆ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರ ಬಂಧನ ಮತ್ತು ಶಿಕ್ಷೆಯ ಸಂದರ್ಭದಲ್ಲಿಯೇ ಅವರ ಮೂರನೇ ಅವಧಿ ಕೊನೆಗೊಂಡಿತ್ತು. ಈ ಬಾರಿಯೂ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಸಿಂಧಿ ಸಮುದಾಯದವರೇ ಹೆಚ್ಚಾಗಿರುವ ಈ ಕ್ಷೇತ್ರವು ಮೂರು ದಶಕಗಳಿಂದ ಬಿಜೆಪಿ ತೆಕ್ಕೆಯಲ್ಲಿಯೇ ಇದೆ.

ಹಾಲಿ ಶಾಸಕ ಬಲರಾಂ ಥವಾಣಿ ಅವರನ್ನು ಕೈಬಿಟ್ಟು ಪಾಯಲ್ ಅವರಿಗೆ ಬಿಜೆಪಿ ಟಿಕೆಟ್‌ ನೀಡಲಾಗಿದೆ. 160 ಅಭ್ಯರ್ಥಿಗಳ ಪಟ್ಟಿಯಲ್ಲಿರುವ ನಾಲ್ವರು ಮಹಿಳೆಯರಲ್ಲಿ ಇವರೂ ಒಬ್ಬರು.

ಪಾಯಲ್ ಅವರಿಗೆ ಟಿಕೆಟ್‌ ನೀಡಿರುವುದು ಪಕ್ಷದ ಮುಖಂಡರಲ್ಲಿ ಹಲವರಿಗೆ ಅಸಮಾಧಾನ ಉಂಟು ಮಾಡಿದೆ. ಅವರು ಸ್ವಜಾತಿಯವರಲ್ಲದವರನ್ನು ಮದುವೆ ಆಗಿರುವುದು ಇದಕ್ಕೆ ಕಾರಣ. ‘ಅವರು ದಲಿತರೊಬ್ಬರನ್ನು ಮದುವೆ ಆಗಿದ್ದಾರೆ. ಹಾಗಾಗಿ ಅವರು ನಿಜವಾದ ಸಿಂಧಿ ಅಲ್ಲ. ಪಾಯಲ್ ಅವರು ತಮ್ಮ ಗಂಡನ ಹೆಸರಿನ ಬದಲಿಗೆ ತಂದೆಯ ಹೆಸರು ಬಳಸುತ್ತಿದ್ದಾರೆ. ಪಕ್ಷದ ನಿರ್ಧಾರವು ಸಮುದಾಯದ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟು ಮಾಡಿದೆ’ ಎಂದು ಪಕ್ಷದ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

‘ನಾವು 21ನೇ ಶತಮಾನದಲ್ಲಿ ಜೀವಿಸುತ್ತಿದ್ದೇವೆ. ಆದರೆ, ಜನರು ಇನ್ನೂ ಜಾತಿಯ ಕುರಿತು ಮಾತನಾಡುತ್ತಿದ್ದಾರೆ. ಅದು ಮುಖ್ಯ ವಿಷಯ ಅಲ್ಲ ಮತ್ತು ಮುಖ್ಯ ವಿಷಯ ಆಗಬಾರದು. ನನ್ನ ಗಂಡ ಅನಿಲ್ ಚೌಹಾಣ್‌ ಅವರೂ ವೃತ್ತಿಯಲ್ಲಿ ವೈದ್ಯ. ನಾವು ಜೊತೆಯಾಗಿ ಕಲಿತವರು. ನಮ್ಮ ಮಧ್ಯೆ ಜಾತಿ ಯಾವತ್ತೂ ವಿಷಯ ಆಗಿರಲಿಲ್ಲ. ಜನರು ಈಗ ಜಾತಿಯ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ’ ಎಂದು ಪಾಯಲ್ ಅವರು ಹೇಳಿದ್ದಾರೆ.

ಬಿಲ್ಕಿಸ್‌ ಬಾನು ಅವರ ಮೇಲೆ ಅತ್ಯಾಚಾರ ಎಸಗಿ ಅವರ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿದ್ದವರನ್ನು ಜೈಲಿನಿಂದ ಬಿಡುಗಡೆ ಮಾಡುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಶಾಸಕ ಚಂದ್ರಸಿಂಹ ರೌಲ್ಜಿ ಅವರಿಗೆ ಗೋಧ್ರಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಬಿಲ್ಕಿಸ್‌ ಮೇಲೆ ಅತ್ಯಾಚಾರ ಎಸಗಿದವರು ‘ಸಂಸ್ಕಾರಿ ಬ್ರಾಹ್ಮಣರು’ ಎಂದು ಅವರ ಬಿಡುಗಡೆಯ ಬಳಿಕ ರೌಲ್ಜಿ ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT