ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದ ಜನತೆಗೆ ದ್ರೋಹ ಬಗೆದ ಬಿಜೆಪಿ: ಕಾಂಗ್ರೆಸ್

Last Updated 3 ಜುಲೈ 2021, 12:04 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ನಾಯಕತ್ವದ ವಿರುದ್ಧ ಶನಿವಾರ ಟೀಕಾಪ್ರಹಾರ ಮಾಡಿರುವ ಕಾಂಗ್ರೆಸ್, ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಬದಲು ಉತ್ತರಾಖಂಡದಲ್ಲಿ ರಾಜಕೀಯ ಅಸ್ಥಿರತೆಯನ್ನು ಸೃಷ್ಟಿ ಮಾಡಿದೆ ಎಂದು ಆರೋಪಿಸಿದೆ.

ಪದೇ ಪದೇ ಮುಖ್ಯಮಂತ್ರಿಯನ್ನು ಬದಲಾಯಿಸುವ ಮೂಲಕ ಜನರಿಗೆ ದ್ರೋಹ ಬಗೆದಿದೆ ಎಂದು ವಾಗ್ದಾಳಿ ನಡೆಸಿದೆ.

ಶುಕ್ರವಾರದಂದು ಉತ್ತರಾಖಂಡದ ಮುಖ್ಯಮಂತ್ರಿ ಸ್ಥಾನಕ್ಕೆ ತೀರತ್ ಸಿಂಗ್ ರಾವತ್ ರಾಜೀನಾಮೆ ನೀಡಿದ್ದರು. ಇದರೊಂದಿಗೆ ನಾಲ್ಕು ತಿಂಗಳ ಅವಧಿಯೊಳಗೆ ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾಗಿದೆ.

ಉತ್ತರಾಖಂಡದ 'ದೇವಭೂಮಿ'ಯನ್ನು ಬಿಜೆಪಿ ಅವಮಾನಗೊಳಿಸಿದ್ದು, ಈಗಿನ ಪರಿಸ್ಥಿತಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಹೊಣೆ ಎಂದು ಕಾಂಗ್ರೆಸ್ ದೂರಿದೆ.

ಪದೇ ಪದೇ ಮುಖ್ಯಮಂತ್ರಿಗಳನ್ನು ಬದಲಾಯಿಸುತ್ತಿರುವ ಬಿಜೆಪಿ, ಜನರ ಸಮಸ್ಯೆಗಳನ್ನು ಬಗೆಹರಿಸಲು ಏನನ್ನೂ ಮಾಡಿಲ್ಲ. ಈ ಮೂಲಕ ಇಡೀ ರಾಜ್ಯವನ್ನು ಅವಮಾನಿಸಿದೆ. ಜನರ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಅಲ್ಲದೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ದೇವಭೂಮಿಯನ್ನು ಅವಮಾನಿಸಲಾಗಿದ್ದು, ಬಿಜೆಪಿ ರಾಜಕೀಯ ಅರಾಜಕತೆ ಸೃಷ್ಟಿ ಮಾಡಿದೆ ಎಂದು ಆರೋಪಿಸಿದೆ.

ಪ್ರಧಾನಿ ನರೇಂದ್ರ ಮೋದಿ 'ಡಬಲ್ ಎಂಜಿನ್' ಸರ್ಕಾರದ ಭರವಸೆ ನೀಡಿದ್ದರು. ಆದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಪದವಿಯ ಬದಲಾವಣೆ ಮಾತ್ರ ಆಗುತ್ತಿದೆ. ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೇಳಿದೆ.

ಉತ್ತರಾಖಂಡದಲ್ಲಿ ಈಗಿನ ರಾಜಕೀಯ ಅಸ್ಥಿರತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೊಣೆಗಾರರು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ಸುರ್ಜೇವಾಲಾ ಆರೋಪಿಸಿದ್ದಾರೆ.

2017ರಲ್ಲಿ ಉತ್ತರಾಖಂಡದ ಜನರು ಬಿಜೆಪಿಯನ್ನು ಆಯ್ಕೆ ಮಾಡಿದರು. ಆದರೆ ಅಭಿವೃದ್ಧಿಯತ್ತ ಗಮನ ಹರಿಸುವುದನ್ನು ಬಿಟ್ಟು ಸಂಪನ್ಮೂಲವನ್ನು ದೋಚಿದೆ. ಬಿಜೆಪಿಯಲ್ಲಿ ಕುರ್ಚಿ ಬದಲಿಸುವ ಆಟ ಮಾತ್ರ ನಡೆಯುತ್ತಿದೆ. ಜನರ ನಿರೀಕ್ಷೆಗಳನ್ನು ಹುಸಿಯಾಗಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT