ಸೋಮವಾರ, ಸೆಪ್ಟೆಂಬರ್ 26, 2022
23 °C

ಪ್ರಧಾನಿ ಮೋದಿಗೆ ಪ್ರಚಾರ: ಬಿಜೆಪಿಯಿಂದ ‘ದೇಶ್‌ ಕಿ ಬದ್ಲಿ ಸೋಚ್‌’ ಕಾರ್ಯತಂತ್ರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ‘ದೇಶ್‌ ಕಿ ಬದ್ಲಿ ಸೋಚ್‌’ (ಬದಲಾದ ದೇಶದ ಯೋಚನೆ) ಎನ್ನುವ ಪ್ರಚಾರ ಕಾರ್ಯತಂತ್ರವನ್ನು ಬಿಜೆಪಿ ಆರಂಭಿಸಿದೆ. ಕಾಂಗ್ರೆಸ್‌ನ ಹಿಂದಿನ ಪ್ರಧಾನಿಗಳ ಸ್ವಾತಂತ್ರ್ಯ ದಿನದ ಕೆಂಪುಕೋಟೆ ಭಾಷಣಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೆಂಪುಕೋಟೆಯ ಭಾಷಣಗಳನ್ನು ಹೋಲಿಕೆ ಮಾಡಿ, ಮೋದಿ ಅವರನ್ನು ಮೇಲಾಗಿಸಿ, ಅವರಿಗೆ ಪ್ರಚಾರ ನೀಡುವ ಸಲುವಾಗಿ ಈ ಯೋಜನೆ ರೂಪಿಸಿದೆ.

ಮೋದಿ ಮತ್ತು ಮಾಜಿ ಪ್ರಧಾನಿಗಳಾದ ಮನಮೋಹನ ಸಿಂಗ್‌, ರಾಜೀವ್‌ ಗಾಂಧಿ, ಇಂದಿರಾ ಗಾಂಧಿ ಮತ್ತು ಜವಾಹರ್‌ಲಾಲ್‌ ನೆಹರೂ ಅವರ ಭಾಷಣಗಳನ್ನು ಗ್ರಾಫಿಕ್‌ ಮೂಲಕ ಜೋಡಿಸಿ, ಬಿಜೆಪಿ ಮಂಗಳವಾರ ರಾತ್ರಿ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಬಿಜೆಪಿ ಮಾಡಿರುವ ಕೆಲವು ಟ್ವೀಟ್‌ಗಳು ಇಂತಿವೆ

* ನೆಹರೂ ಅವರು ತಮ್ಮ 1963ರ ಭಾಷಣದಲ್ಲಿ 1962ರ ಚೀನಾ ಯುದ್ಧದ ವೇಳೆ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸಲಿಲ್ಲ. ಆದರೆ, ಇತ್ತೀಚೆಗೆ ಚೀನಾದೊಂದಿಗೆ ಹೋರಾಡಿ ಲಡಾಖ್‌ನಲ್ಲಿ ಹುತಾತ್ಮರಾದ ಸೈನಿಕರಿಗೆ 2020ರ ತಮ್ಮ ಭಾಷಣದಲ್ಲಿ ಮೋದಿ ಅವರು ಗೌರವ ಸಲ್ಲಿಸಿದ್ದಾರೆ.

* 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಬಳಿಕ ಇಂದಿರಾ ಗಾಂಧಿ ಅವರು ಅದನ್ನು ಸಮರ್ಥಿಸಿ, ರಾಷ್ಟ್ರದ ಪ್ರತಿರೋಧದ ಆಲೋಚನೆಗಳನ್ನು ಈ ಮೂಲಕ ‘ಸ್ವಚ್ಛ’ಗೊಳಿಸಲಾಗಿದೆ ಎಂದಿದ್ದರು. ಆದರೆ, ಮೋದಿ ಅವರು ತಮ್ಮ 2017ರ ಭಾಷಣದಲ್ಲಿ ಪ್ರಜಾಪ್ರಭುತ್ವವು ದೇಶದ ‘ದೊಡ್ಡ ಶಕ್ತಿ’ ಎಂದಿದ್ದರು.

* 2008 ಮತ್ತು 2009ರಲ್ಲಿ ಮನಮೋಹನ ಸಿಂಗ್‌ ಅವರ ಭಾಷಣೆವನ್ನು ಹಂಚಿಕೊಂಡಿರುವ ಬಿಜೆಪಿ, ಸಿಂಗ್‌ ಅವರು ಈ ಭಾಷಣಗಳಲ್ಲಿ ಕೇವಲ ನೆಹರೂ ಮತ್ತು ಗಾಂಧಿ ಕುಟುಂಬದ ಗುಣಗಾಣ ಮಾಡಿದ್ದಾರೆ. ಆಯ್ದ ಕೆಲವರನ್ನು ಮಾತ್ರ ನೆನಪಿಸಿಕೊಂಡಿದ್ದಾರೆ. ಆದರೆ, ಮೋದಿ ಅವರು 2014ರ ತಮ್ಮ ಭಾಷಣದಲ್ಲಿ, ದೇಶವು ಇಷ್ಟೆಲ್ಲಾ ಸಾಧನೆ ಮಾಡಿದೆ ಎಂದಾದರೆ, ಅದು ಸಾಧ್ಯವಾಗಿದ್ದು ಸರ್ಕಾರದ ಮುಖ್ಯಸ್ಥರಿಂದ ಮಾತ್ರ ಎಂದಿದ್ದಾರೆ.

ಬಿಜೆಪಿ ವಿಡಿಯೊ: ಕಾಂಗ್ರೆಸ್‌ ವಿರೋಧ

1947ರ ದೇಶ ವಿಭಜನೆ ಕುರಿತು ತಾನು ಪ್ರತಿಪಾದಿಸುವ ಇತಿಹಾಸವನ್ನು ವಿವರಿಸಿ ಬಿಜೆಪಿಯು ಮಂಗಳವಾರ ವಿಡಿಯೊವೊಂದನ್ನು ಬಿಡುಗಡೆ ಮಾಡಿತ್ತು. ವಿಡಿಯೊದಲ್ಲಿ ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್‌ ನಾಯಕರೇ ಕಾರಣ ಎಂದು ಹೇಳಿತ್ತು. ಮಾಜಿ ಪ್ರಧಾನಿ ನೆಹರೂ ಮತ್ತು ಮೊಹಮ್ಮದ್‌ ಅಲಿ ಜಿನ್ನಾ ಅವರ ಚಿತ್ರಗಳೂ ವಿಡಿಯೊದಲ್ಲಿದೆ.

ಇದನ್ನು ವಿರೋಧಿಸಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ‘ಕೇಂದ್ರ ಸರ್ಕಾರವು ‘ಸ್ವಯಂ ಪ್ರೀತಿ’ಯಲ್ಲಿ ಮುಳುಗಿದೆ. ಹೋರಾಟಗಾರರ ತ್ಯಾಗಗಳನ್ನು ಕ್ಷುಲ್ಲಕಗೊಳಿಸುವ ಯತ್ನ ಮಾಡುತ್ತಿದೆ. ರಾಜಕೀಯ ದುರುದ್ದೇಶ ಇರುವ ಈ ಪ್ರಚಾರತಂತ್ರವನ್ನು ಕಾಂಗ್ರೆಸ್‌ ಕಟುವಾಗಿ ವಿರೋಧಿಸಿತ್ತದೆ’ ಎಂದು  ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು