ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಕೇಂದ್ರ ಸಚಿವ, ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ

ಅಕ್ಷರ ಗಾತ್ರ

ನವದೆಹಲಿ: ರಾಜಕೀಯವನ್ನು ತೊರೆಯಲು ನಿರ್ಧರಿಸಿರುವುದಾಗಿ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ ಶನಿವಾರ ಘೋಷಿಸಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, 'ರಾಜಕೀಯದ ನಂಟು ಹೊಂದದ ವ್ಯಕ್ತಿಯೂ ಸಹ ಸಾಮಾಜಿಕ ಕಾರ್ಯಗಳನ್ನು ಮಾಡಬಹುದು' ಎಂದು ಬರೆದುಕೊಂಡಿದ್ದಾರೆ.

'ನನ್ನ ತಂದೆ, ಪತ್ನಿ, ಮಗಳು ಮತ್ತು ಕೆಲವು ಆಪ್ತ ಸ್ನೇಹಿತರ ಮಾತುಗಳನ್ನು ಆಲಿಸಿದೆ. ಎಲ್ಲವನ್ನೂ ಆಲಿಸಿದ ನಂತರ, ಬೇರೆ ಯಾವುದೇ ಪಕ್ಷಕ್ಕೆ ಸೇರುವ ನಿರ್ಧಾರವನ್ನು ನಾನು ತೆಗೆದುಕೊಂಡಿಲ್ಲ. ನಾನು ಕಾಂಗ್ರೆಸ್, ಟಿಎಂಸಿ ಅಥವಾ ಸಿಪಿಎಂ ಪಕ್ಷಗಳನ್ನು ಸೇರುತ್ತಿಲ್ಲ. ಅವರೂ ಸಹ ನನ್ನನ್ನು ಕರೆದಿಲ್ಲ ಎಂದು ಖಚಿತಪಡಿಸುತ್ತಿದ್ದೇನೆ' ಎಂಬುದಾಗಿ ಬಾಬುಲ್ ಸುಪ್ರಿಯೊ ತಿಳಿಸಿದ್ದಾರೆ.

ಕೇಂದ್ರದಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವುದರ ಬಗ್ಗೆ ಬೇಸರ ಹೊಂದಿರುವ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸುಪ್ರಿಯೊ ಸ್ಪಷ್ಟಪಡಿಸಿದ್ದಾರೆ.

ಪಶ್ಚಿಮ ಬಂಗಾಳದ ಬಿಜೆಪಿ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯಗಳು ಇರುವುದಾಗಿಯೂ ಸುಪ್ರಿಯೊ ತಿಳಿಸಿದ್ದಾರೆ.

ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ 2014ರಿಂದಲೇ ಸುಪ್ರಿಯೋ ಅವರು ಹಲವು ಖಾತೆಗಳನ್ನು ನಿರ್ವಹಿಸಿದ್ದರು. ಜುಲೈ ತಿಂಗಳ ಆರಂಭದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಪುನರ್‌ರಚನೆ ವೇಳೆ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಲಾಗಿತ್ತು.

ಸಂಸದ ಸ್ಥಾನಕ್ಕೂ ರಾಜೀನಾಮೆ: ಬಾಬುಲ್‌ ಸುಪ್ರಿಯೊ

ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ಬಾಬುಲ್‌ ಸುಪ್ರಿಯೊ ಅವರು ಸಕ್ರಿಯ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದೂ ಅವರು ಶನಿವಾರ ಪ್ರಕಟಿಸಿದರು.

ಕೇಂದ್ರ ಸಂಪುಟದಿಂದ ತಮ್ಮನ್ನು ಕೈಬಿಟ್ಟಿದ್ದು ಹಾಗೂ ಪಕ್ಷದ ರಾಜ್ಯ ಘಟಕದ ನಾಯಕರ ಜೊತೆಗಿನ ಭಿನ್ನಮತ ಈ ನಿರ್ಧಾರಕ್ಕೆ ಕಾರಣ ಎಂಬ ಸುಳಿವು ನೀಡಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲಿ 2014ರಿಂದ ರಾಜ್ಯ ಸಚಿವರಾಗಿ ವಿವಿಧ ಖಾತೆಯನ್ನು ಅವರು ನಿಭಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT