ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾದಿ ಮಹಮ್ಮದ್‌ ಬಗ್ಗೆ ಅವಹೇಳನಕಾರಿ ಪೋಸ್ಟ್‌; ಉ.ಪ್ರ. ಬಿಜೆಪಿ ಮುಖಂಡ ಬಂಧನ

ಅಕ್ಷರ ಗಾತ್ರ

ಕಾನ್ಪುರ: ಪ್ರವಾದಿ ಮಹಮ್ಮದ್‌ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿರುವ ಆರೋಪದ ಮೇಲೆ ಬಿಜೆಪಿ ಮುಖಂಡರೊಬ್ಬರನ್ನು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಕಾನ್ಪುರದ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಪ್ರಧಾನ ಕಾರ್ಯದರ್ಶಿ ಹರ್ಷಿತ್‌ ಶ್ರೀವಾಸ್ತವ ಬಂಧಿತ ಮುಖಂಡ. ಅವರ ವಿರುದ್ಧ ಕರ್ನೈಲ್‌ಗಂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ಮಾಡಿದ್ದ ಟ್ವೀಟ್‌ ಅನ್ನು ಅಳಿಸಿಹಾಕಲಾಗಿದೆ.

ಜೂನ್‌ 3ರಂದು ನಡೆದ ಕೋಮು ಗಲಭೆಯಿಂದ ತತ್ತರಿಸಿರುವ ಕಾನ್ಪುರಕ್ಕೆ ಹರ್ಷಿತ್‌ ಮಾಡಿದ್ದ ಟ್ವೀಟ್‌ನಿಂದಾಗಿ ಇನ್ನಷ್ಟು ಗೊಂದಲದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 153ಎ, 295ಎ ಮತ್ತು 67ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರೊಬ್ಬರು ಹೇಳಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಹರ್ಷಿತ್‌ ಅವರ ಟ್ವೀಟ್‌ ವೈರಲ್‌ ಆಗುತ್ತಿದ್ದಂತೆ ಪೊಲೀಸರು ಕಾರ್ಯೋನ್ಮುಖರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಸಾಮಾಜಿಕ ಮಾಧ್ಯಮಗಳಲ್ಲಿ ನಿಗಾವಹಿಸಿದ್ದು, ಪ್ರಚೋದನಕಾರಿ ಪೋಸ್ಟ್‌ಗಳನ್ನು ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಕಳೆದ ಎರಡು ದಿನಗಳಲ್ಲಿ ಪೊಲೀಸರು 23 ಮಂದಿ ಸಾಮಾಜಿಕ ಮಾಧ್ಯಮ ಬಳಕೆದಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬಿಜೆಪಿಯ ವಕ್ತಾರರಾಗಿದ್ದ ನೂಪುರ್‌ ಶರ್ಮಾ ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಪ್ರವಾದಿ ಮಹಮ್ಮದ್‌ ಅವರ ವಿಷಯದಲ್ಲಿ ಆಡಿದ್ದ ಮಾತುಗಳು ವಿವಾದದ ರೂಪ ಪಡೆದಿತ್ತು. ಅದೇ ವಿಚಾರವಾಗಿ ಕಾನ್ಪುರದಲ್ಲಿ ಹಿಂಸಾಚಾರ ನಡೆದಿತ್ತು. ಹಲವು ರಾಷ್ಟ್ರಗಳಿಂದ ಖಂಡನೆಯೂ ವ್ಯಕ್ತವಾಗಿದೆ.

ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದ ಸಮಯದಲ್ಲೇ ಕಾನ್ಪುರದಲ್ಲಿ ಹಿಂಸಾಚಾರ ನಡೆದಿತ್ತು. ಗಲಭೆಗೆ ಸಂಬಂಧಿಸಿದಂತೆ ಕನಿಷ್ಠ 50 ಜನರನ್ನು ಬಂಧಿಸಲಾಗಿದ್ದು, ಸುಮಾರು 10 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT