ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಜಿಂದರ್ ಬಗ್ಗಾ ಬಂಧನ: ಮಗನ ವಿರುದ್ಧ ಅರವಿಂದ ಕೇಜ್ರಿವಾಲ್ ಪಿತೂರಿ ಎಂದ ತಾಯಿ

Last Updated 7 ಮೇ 2022, 2:26 IST
ಅಕ್ಷರ ಗಾತ್ರ

ಪಟ್ನಾ: ದೆಹಲಿ ಬಿಜೆಪಿ ಮುಖಂಡ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರ ಬಂಧನದ ಕುರಿತಂತೆ ಅವರ ತಾಯಿ ಕಮಲ್ಜೀತ್ ಕೌರ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಜ್ರಿವಾಲ್ ಅವರ ನಿರ್ದೇಶನದ ಮೇರೆಗೆ ಪಂಜಾಬ್ ಪೊಲೀಸರು ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

'ಪಂಜಾಬ್ ಪೊಲೀಸರು ದೆಹಲಿಯಲ್ಲಿರುವ ನನ್ನ ಮಗನ ನಿವಾಸಕ್ಕೆ ಬಂದು ಅವನನ್ನು ಪೊಲೀಸ್ ವ್ಯಾನ್‌ನಲ್ಲಿ ಕರೆದೊಯ್ದರು. ಪೊಲೀಸರು ಅವನಿಗೆ ಪೇಟ ಧರಿಸಲು ಸಹ ಅವಕಾಶ ನೀಡಲಿಲ್ಲ, ನನ್ನ ಪತಿ ಅವರ ಫೋನ್‌ನಲ್ಲಿ ವಿಡಿಯೊ ಮಾಡಲು ಪ್ರಯತ್ನಿಸಿದಾಗ ಅವರು ಫೋನ್ ಅನ್ನು ಕಸಿದುಕೊಂಡು ಹೋದರು' ಎಂದು ಬಿಹಾರದ ಮುಜಾಫರ್‌ಪುರದಲ್ಲಿ ನೆಲೆಸಿರುವ ಕೌರ್ ಹೇಳಿದರು.

'ಈ ಇಡೀ ಪಿತೂರಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಡಿದ್ದಾರೆ' ಎಂದು ಅವರು ಆರೋಪಿಸಿದರು.

'ನನ್ನ ಮಗ ಕೇಜ್ರಿವಾಲ್‌ ಅವರಿಗೆ ಯಾವುದೇ ಕೆಟ್ಟ ಪದಗಳನ್ನು ಬಳಸಿಲ್ಲ. ದೆಹಲಿ ವಿಧಾನಸೌಧದಲ್ಲಿ ಕೇಜ್ರಿವಾಲ್ 'ದಿ ಕಾಶ್ಮೀರ್ ಫೈಲ್ಸ್' ಅನ್ನು 'ಫೇಕ್' ಸಿನಿಮಾ ಎಂದು ಘೋಷಿಸಿದ್ದರು. ನಂತರ ಇದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ನನ್ನ ಮಗ ಪಾಲ್ಗೊಂಡಿದ್ದ' ಎಂದಿದ್ದಾರೆ.

ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದದ್ದೆಲ್ಲವೂ 1947 ರ ನಂತರ ದೇಶದ ಎರಡನೇ ಅತಿದೊಡ್ಡ ಹತ್ಯಾಕಾಂಡವಾಗಿದೆ ಮತ್ತು ನೀವು (ಕೇಜ್ರಿವಾಲ್) ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ವಿರುದ್ಧದ ಕ್ರೌರ್ಯವನ್ನು ಎತ್ತಿ ತೋರಿಸಿರುವ ಚಲನಚಿತ್ರವನ್ನು ನಕಲಿ ಎಂದು ವಾದಿಸುತ್ತಿದ್ದೀರಿ ಎಂದು ನನ್ನ ಮಗ ಹೇಳಿದ್ದ. ಅವರು (ಬಗ್ಗಾ) ಈ ವಿಷಯದ ಬಗ್ಗೆ ಕೇಜ್ರಿವಾಲ್ ಅವರು ಕ್ಷಮೆಯಾಚಿಸಬೇಕೆಂದು ಬಯಸಿದ್ದನು. ಇದು ಯಾವುದೇ ರೀತಿಯಿಂದಲೂ ಅವಹೇಳನಕಾರಿಯಲ್ಲ. ನಿಮ್ಮ ಹೇಳಿಕೆಗೆ ನೀವು (ಕೇಜ್ರಿವಾಲ್) ಕ್ಷಮೆಯಾಚಿಸದಿದ್ದರೆ, ಬಿಜೆಪಿ ಕಾರ್ಯಕರ್ತರು ನಿಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಾರೆ ಮತ್ತು ನಿಮಗೆ ಶಾಂತಿಯಿಂದ ಬದುಕಲು ಬಿಡುವುದಿಲ್ಲ' ಎಂದು ಕೌರ್ ಹೇಳಿದರು.

'ಇದು ಆಕ್ಷೇಪಾರ್ಹ ಅಥವಾ ಅವಹೇಳನಕಾರಿ ಹೇಳಿಕೆಯೇ?, ಕೇಜ್ರಿವಾಲ್ ಅವರು ನನ್ನ ಮಗನಿಗೆ ಕಿರುಕುಳ ನೀಡಲು ಪೊಲೀಸರನ್ನು ಬಳಸಿಕೊಂಡಿದ್ದಾರೆ ಮತ್ತು ಗದ್ದಲವನ್ನು ಸೃಷ್ಟಿಸಿದ್ದಾರೆ' ಎಂದು ದೂರಿದ್ದಾರೆ.

'ನನ್ನ ಪತಿ ದಾರಿಹೋಕರ ಫೋನ್ ಬಳಸಿ ನನ್ನನ್ನು ಸಂಪರ್ಕಿಸಿದರು. ಬಳಿಕ ನಾನು, ನನ್ನ ಕುಟುಂಬದ ಸ್ನೇಹಿತರು ಮತ್ತು ನೆರೆಹೊರೆಯವರಿಗೆ ನನ್ನ ಮನೆಗೆ ಹೋಗಿ ನನ್ನ ಪತಿಗೆ ಸಹಾಯ ಮಾಡುವಂತೆ ತಿಳಿಸಿದ್ದೇನೆ. ಪಂಜಾಬ್ ಪೊಲೀಸರು ತಮ್ಮನ್ನು ಸಂಪರ್ಕಿಸಿಲ್ಲ ಎಂದು ದೆಹಲಿ ಪೊಲೀಸರು ನಮಗೆ ತಿಳಿಸಿದ್ದಾರೆ. ನಾನು ಮಾಧ್ಯಮಗಳಿಂದ ಈ ಬಗ್ಗೆ ತಿಳಿದುಕೊಂಡಿದ್ದೇನೆ. ಪಂಜಾಬ್ ಪೊಲೀಸ್ ಬೆಂಗಾವಲು ಪಡೆಯನ್ನು ಹರಿಯಾಣದಲ್ಲಿ ಎಲ್ಲೋ ನಿಲ್ಲಿಸಲಾಗಿದೆ' ಎಂದು ಕೌರ್ ಹೇಳಿದರು.

'ದೆಹಲಿಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಮೊಹಲ್ಲಾ ಕ್ಲಿನಿಕ್ ಸ್ಥಿತಿ ಶೋಚನೀಯವಾಗಿದೆ. ದೆಹಲಿಯಲ್ಲಿ ಯಾವುದೇ ಹೊಸ ಆಸ್ಪತ್ರೆಯನ್ನು ತೆರೆದಿಲ್ಲ. ಎಎಪಿ ಸರ್ಕಾರವು ಶಾಲೆಗಳ 2 ರಿಂದ 4 ಕೊಠಡಿಗಳನ್ನು ಮಾತ್ರ ನವೀಕರಿಸಿದೆ ಮತ್ತು ಜನರನ್ನು ಮೂರ್ಖರನ್ನಾಗಿಸಲು ಅವುಗಳನ್ನು ಪ್ರದರ್ಶನವಾಗಿ ಬಳಸುತ್ತಿದೆ. ಎಎಪಿ ಸರ್ಕಾರವು ಕೋವಿಡ್ ಸಮಯದಲ್ಲಿ ರೋಗಿಗಳಿಗೆ ಸಹಾಯ ಮಾಡಲಿಲ್ಲ ಎನ್ನುವುದು ಸೇರಿದಂತೆ ಎಎಪಿ ಸರ್ಕಾರದ ಅಕ್ರಮಗಳನ್ನು ನನ್ನ ಮಗ ಬಯಲು ಮಾಡುತ್ತಿದ್ದ' ಎಂದು ಅವರು ಹೇಳಿದ್ದಾರೆ.

ಅವರು (ಕೇಜ್ರಿವಾಲ್) ಪಂಜಾಬ್‌ನಲ್ಲಿ ಅಧಿಕಾರಕ್ಕೇರುತ್ತಿದ್ದಂತೆ, ಎಎಪಿ ಸರ್ಕಾರದ ವೈಫಲ್ಯಗಳನ್ನು ಬಹಿರಂಗಪಡಿಸುತ್ತಿರುವ ತಮ್ಮ ರಾಜಕೀಯ ವಿರೋಧಿಗಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಅವರು ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT