ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ 30–40 ವರ್ಷ ಬಿಜೆಪಿ ಯುಗ: ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಮಿತ್ ಶಾ

ದಕ್ಷಿಣ ಭಾರತದತ್ತ ಕಮಲದ ಕಣ್ಣು
Last Updated 3 ಜುಲೈ 2022, 18:27 IST
ಅಕ್ಷರ ಗಾತ್ರ

ಹೈದರಾಬಾದ್‌: ದಕ್ಷಿಣ ಭಾರತವು ಬಿಜೆಪಿಯ ಮುಂದಿನ ಗುರಿ ಆಗಲಿದೆ ಎಂದು ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾನುವಾರ ಘೋಷಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾರ್ಯಕಾರಿಣಿಯ ರಾಜಕೀಯ ನಿರ್ಣಯವನ್ನು ಮಂಡಿಸಿದರು. ಕುಟುಂಬ ನಾಯಕತ್ವದ ಪಕ್ಷಗಳನ್ನು ನಿವಾರಿಸಲು ಬಿಜೆಪಿ ಕೆಲಸ ಮಾಡಲಿದೆ ಎಂದೂ ನಿರ್ಣಯದಲ್ಲಿ ಹೇಳಲಾಗಿದೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ನಿರ್ಣಯವನ್ನು ಅನುಮೋದಿಸಿದರು.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು ಸಾಧ್ಯವಾಗಿದ್ದು ಕರ್ನಾಟಕದಲ್ಲಿ ಮಾತ್ರ. ತೆಲಂಗಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿನ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯನ್ನು ಎದುರಿಸಲು ಬಿಜೆಪಿ ಎಲ್ಲ ಸಿದ್ಧತೆ ನಡೆಸಿದೆ. ಹಾಗಾಗಿಯೇ ಕಾರ್ಯಕಾರಿಣಿಗೆ ಹೈದರಾಬಾದ್‌ ನಗರವನ್ನು ಆಯ್ಕೆ ಮಾಡಲಾಗಿದೆ. ತೆಲಂಗಾಣದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ.

ಕಾರ್ಯಕಾರಿಣಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರೂ ವಂಶಾಡಳಿತದ ರಾಜಕೀಯ ಪಕ್ಷಗಳ ವಿರುದ್ಧ ಹರಿಹಾಯ್ದರು. ಅಂತಹ ರಾಜಕೀಯದ ಕಾಲ ಮುಗಿಯಿತು ಎಂದು ಅವರು ಹೇಳಿದರು. ಕುಟುಂಬ ನೇತೃತ್ವದ ಪಕ್ಷಗಳಿಂದ ದೇಶವು ಈಗ ಬೇಸತ್ತಿದೆ ಎಂದು ಹೇಳಿದ್ದಾರೆ ಎಂದು ಬಿಜೆಪಿ ಮುಖಂಡ ರವಿಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ.

ಕಾಂಗ್ರೆಸ್ ಈಗ ಒಂದು ಕುಟುಂಬದ ಪಕ್ಷವಾಗಿ ಮಾತ್ರ ಉಳಿದಿದೆ. ‘ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಬೇಕು ಎಂಬ ಕೂಗು ಎದ್ದಿದೆ. ಆದರೆ, ಹೊಸ ಅಧ್ಯಕ್ಷನನ್ನು ಕಾಂಗ್ರೆಸ್‌ ಆಯ್ಕೆ ಮಾಡುತ್ತಿಲ್ಲ. ಪಕ್ಷದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆದರೆ ತಮ್ಮ ಸ್ಥಾನಕ್ಕೆ ಕುತ್ತು ಎದುರಾಗಬಹುದು ಎಂಬ ಭೀತಿ ಆ ಕುಟುಂಬದಲ್ಲಿ ಇದೆ’ ಎಂದು ಬಿಜೆಪಿಯ ರಾಜಕೀಯ ನಿರ್ಣಯದಲ್ಲಿ ಇದೆ.

ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲಿ ಕುಟುಂಬ ಆಳ್ವಿಕೆಯನ್ನು ಬಿಜೆಪಿ ಸೋಲಿಸಲಿದೆ. ‘ಪಶ್ಚಿಮ ಬಂಗಾಳ, ತೆಲಂಗಾಣ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಲಿದೆ’ ಎಂದು ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.

2002ರ ಗುಜರಾತ್‌ ಗಲಭೆಗಳಲ್ಲಿ ಮೋದಿ ಅವರು ಆರೋಪಮುಕ್ತ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದು ಚಾರಿತ್ರಿಕ ಎಂದು ಕಾರ್ಯಕಾರಿಣಿಯು ಬಣ್ಣಿಸಿದೆ. ಕೆಲವು ಜನರು, ಸೈದ್ಧಾಂತಿಕ ನಿಲುವಿನ ಮಾಧ್ಯಮ ವ್ಯಕ್ತಿಗಳು ಮತ್ತು ಕೆಲವು ಎನ್‌ಜಿಒಗಳು ಸೇರಿ ಮೋದಿ ಅವರ ತೇಜೋವಧೆಗೆ ನಡೆಸಿದ ಪಿತೂರಿಯನ್ನು ಕೋರ್ಟ್ ತೀರ್ಪು ಬಯಲಾಗಿಸಿದೆ. ಇಷ್ಟೆಲ್ಲ ವರ್ಷಗಳಲ್ಲಿ ಮೋದಿ ಅವರು ಮೌನವಾಗಿಯೇ ಇದ್ದರು ಮತ್ತು ವಿಶೇಷ ತನಿಖಾ ತಂಡದ ತನಿಖೆಗೆ ಸಹಕರಿಸಿದ್ದರು. ಮೋದಿ ಅವರು ಯಾವುದೇ ನಾಟಕ ಮಾಡಲಿಲ್ಲ’ ಎಂದು ಶರ್ಮಾ ಹೇಳಿದ್ದಾರೆ.

ಬಿಜೆಪಿಗೆ ಸಿಕ್ಕಿರುವ ಚುನಾವಣಾ ಗೆಲುವಿನ ಬಗ್ಗೆಯೂ ಕಾರ್ಯಕಾರಿಣಿಯಲ್ಲಿ ಉಲ್ಲೇಖ ಇದೆ. ತುಷ್ಟೀಕರಣದ ರಾಜಕಾರಣ ಕೊನೆಯಾಗಿದ್ದು, ದಕ್ಷತೆ ಮತ್ತು ಅಭಿವೃದ್ಧಿಯ ರಾಜಕಾರಣ ಆರಂಭವಾಗಿದೆ. ಮುಂದಿನ 30–40 ವರ್ಷ ಬಿಜೆಪಿಯುಗ ಇರಲಿದೆ ಎಂದು ಶಾ ಹೇಳಿದ್ದಾರೆ.

ಅಗ್ನಿವೀರ ಯೋಜನೆ, ರಕ್ಷಣಾ ಪಡೆಗಳ ಮುಖ್ಯಸ್ಥ ಸ್ಥಾನ ಸೃಷ್ಟಿ, ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ ಜಾರಿಗಳ ಬಗ್ಗೆಯೂ ನಿರ್ಣಯದಲ್ಲಿ ಉಲ್ಲೇಖ ಇದೆ. ಮೋದಿ ನೇತೃತ್ವದ ಸರ್ಕಾರದ ಸಾಧನೆಯನ್ನು ಹೊಗಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT