ಗುರುವಾರ , ಆಗಸ್ಟ್ 5, 2021
28 °C

ಕೋವಿಡ್‌ ನಿರ್ವಹಣೆ ವಿಚಾರದಲ್ಲಿ ವಿರೋಧ ಪಕ್ಷಗಳಿಂದ ಅಡಚಣೆ: ಜೆಪಿ ನಡ್ಡಾ

ಪಿಟಿಐ Updated:

ಅಕ್ಷರ ಗಾತ್ರ : | |

ಚಂಡೀಗಡ: ಕೋವಿಡ್‌-19 ನಿಯಂತ್ರಣದ ವಿಚಾರದಲ್ಲಿ ಬಿಜೆಪಿಯು ಕೆಲಸಗಾರನಂತೆ ಮತ್ತು ವಿರೋಧ ಪಕ್ಷಗಳು ಅಡಚಣೆಕಾರನ ಪಾತ್ರ ನಿಭಾಯಿಸುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ಜೊತೆಗೆ, ಸಾಂಕ್ರಾಮಿಕದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಜೀವವನ್ನು ಪಣಕ್ಕಿಟ್ಟು ಜನರ ನೆರವಿಗೆ ನಿಂತಿದ್ದರು ಎಂದಿರುವ ಅವರು, 'ಬೇರೆ ಪಕ್ಷಗಳು ಪ್ರತ್ಯೇಕವಾಗಿ ಮತ್ತು ಐಸಿಯುನಲ್ಲಿ ಉಳಿದುಕೊಂಡಿವೆ' ಎಂದು ಟೀಕಿಸಿದ್ದಾರೆ.

ಹರಿಯಾಣ ರಾಜ್ಯ ಬಿಜೆಪಿ ಕಾರ್ಯಕಾರಣಿಯ ವರ್ಚುವಲ್‌ ಸಭೆಯಲ್ಲಿ ನಡ್ಡಾ ಮಾತನಾಡಿದರು.

ವಿರೋಧ ಪಕ್ಷಗಳು ಲಸಿಕೆ ಅಭಿಯಾನದ ಬಗ್ಗೆ ಅಪಪ್ರಚಾರ ಮಾಡಿ, ಗೊಂದಲ ಸೃಷ್ಟಿಸಿ ಅಡಚಣೆ ಮಾಡಲು ಪ್ರಯತ್ನಿಸಿದ್ದರ ಹೊರತಾಗಿಯೂ, ಜನರು ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಲಸಿಕೆ ಪಡೆದುಕೊಳ್ಳಲು ಮುಂದೆ ಬಂದರು ಎಂದಿದ್ದಾರೆ.

'ಬಿಜೆಪಿಯವರು ಬೇರೆಯವರಂತಲ್ಲ. ಬೇರೆ ಪಕ್ಷಗಳು ಪ್ರತ್ಯೇಕವಾಗಿ ಉಳಿದುಕೊಂಡಿದ್ದರ ಹೊರತಾಗಿಯೂ ನಾವು ನಿಲ್ಲದೆ, ಮುಂದಕ್ಕೆ ಸಾಗುತ್ತಿದ್ದೆವು. ನಾವು ಕೆಲಸಗಾರರು. ಆದರೆ, ಅವರು ಅಡಚಣೆಗಳನ್ನು ಉಂಟುಮಾಡುವವರು' ಎಂದು ದೂರಿದ್ದಾರೆ.

'ಕೆಲಸಗಳನ್ನು ಮಾಡುವುದಷ್ಟೇ ನಮ್ಮ ಕರ್ತವ್ಯ. ಟ್ವಿಟರ್‌, ಫೇಸ್‌ಬುಕ್‌ ಮತ್ತು ವರ್ಚುವಲ್‌ ಮಾಧ್ಯಮಗೋಷ್ಠಿಗಳನ್ನು ನಡೆಸುವುದು ಅವರ (ವಿರೋಧ ಪಕ್ಷಗಳ) ಕೆಲಸ. ಅವರು ಜನರ ಸಂಪರ್ಕದಿಂದ ದೂರವೇ ಉಳಿದರು. ಆದರೆ, ನಾವು ಜನರೊಂದಿಗೆ ಸಂಪರ್ಕದಲ್ಲಿ ಮುಂದುವರಿಯುತ್ತೇವೆ. ಮೋದಿ ಅವರ ನಾಯಕತ್ವದಲ್ಲಿ ಬಲಿಷ್ಠ ಭಾರತವನ್ನು ಕಟ್ಟಲು ಒಂದೇಒಂದು ಕಲ್ಲನ್ನೂ ಬಿಡುವುದಿಲ್ಲ' ಎಂದೂ ಭರವಸೆ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, ಮೋದಿ ಅವರ ನಾಯಕತ್ವದಲ್ಲಿ ಕೇವಲ 9‌ ತಿಂಗಳಲ್ಲಿ ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಯಿತು. ಆದರೆ ಕಾಂಗ್ರೆಸ್‌ ನಾಯಕರು ಟೀಕೆಗಳನ್ನು ಮಾಡಿ, ಜನರ ಭವಿಷ್ಯವನ್ನು ಹಾಳು ಮಾಡಲು ಪ್ರಯತ್ನಿಸಿದರು ಎಂದು ಕಿಡಿಕಾರಿದ್ದಾರೆ.

'ಆರಂಭದಲ್ಲಿ ವಿರೋಧ ಪಕ್ಷಗಳ ಕೆಲವು ನಾಯಕರು ನಾವು ಇಲಿ ಅಥವಾ ಹಂದಿಗಳಲ್ಲ ಎನ್ನುವ ಮೂಲಕ ಲಸಿಕೆಗಳನ್ನು ವಿರೋಧಿಸಿದರು. ಆದರೆ, ಯಾರು ಲಸಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರೋ ಅವರೇ ಇದೀಗ ಪಡೆದುಕೊಳ್ಳುತ್ತಿದ್ದಾರೆ' ಎಂದು ಕುಟುಕಿದರು.

ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌, ರಾಜ್ಯ ಸಚಿವರಾದ ಅನಿಲ್‌ ವಿಜ್‌, ಕನ್ವರ್‌ ಪಾಲ್‌ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ವಿನೋದ್‌ ತಾವ್ಡೆ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.

ಇದೇ ವೇಳೆ, ನೀರಿನ ಸಂರಕ್ಷಣೆಗೆ ಯೋಜನೆ ಸೇರಿದಂತೆ ಖಟ್ಟರ್‌ ಸರ್ಕಾರ ಜಾರಿಗೊಳಿಸಿರುವ ಹಲವು ಕಾರ್ಯಕ್ರಮಗಳ ಬಗ್ಗೆಯೂ ನಡ್ಡಾ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ, ಹಿಂದಿನ ಸರ್ಕಾರಗಳಿದ್ದಾಗ ದೊಡ್ಡ ಪ್ರಮಾಣದ ಭ್ರಷ್ಟಾಚಾರ, ಅರಾಜಕತೆ, ಭೂ-ಹಗರಣ ಮತ್ತು ನಿರುದ್ಯೋಗ ಮತ್ತಿತರ ಸಮಸ್ಯೆಗಳಿಗೆ ರಾಜ್ಯವು ಕುಖ್ಯಾತವಾಗಿತ್ತು ಎಂದು ಟೀಕಿಸಿದರು.

'ಇದೀಗ ರಾಜ್ಯದ ಬಗೆಗಿನ ಧೋರಣೆ ಬದಲಾಗಿದ್ದು, ಪ್ರಗತಿಶೀಲ ರಾಜ್ಯವಾಗಿ ಬದಲಾಗಿದೆ' ಎಂದು ಉಲ್ಲೇಖಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು