ಅಸ್ಸಾಂನ ತಿವಾ ಸ್ವಾಯತ್ತ ಮಂಡಳಿ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಗೆಲುವು

ಗುವಾಹಟಿ: ಅಸ್ಸಾಂನ ತಿವಾ ಸ್ವಾಯತ್ತ ಮಂಡಳಿಗೆ (ಟಿಎಸಿ) ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿದೆ.
ಮಂಡಳಿಯ ಒಟ್ಟು 36 ಸ್ಥಾನಗಳ ಪೈಕಿ ಬಿಜೆಪಿ 33 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿಯ ಮೈತ್ರಿ ಪಕ್ಷ ಅಸ್ಸಾಂ ಗಣ ಪರಿಷತ್ ಎರಡು ಸ್ಥಾನ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್ 1 ಸ್ಥಾನದಲ್ಲಿ ಗೆಲುವು ಸಾಧಿಸಿದೆ.
ರಾಜ್ಯ ಚುನಾವಣಾ ಆಯೋಗ ಈ ಚುನಾವಣೆಯ ಫಲಿತಾಂಶವನ್ನು ಭಾನುವಾರ ಪ್ರಕಟಿಸಿದೆ.
ಕಣದಲ್ಲಿ ಒಟ್ಟು 124 ಅಭ್ಯರ್ಥಿಗಳಿದ್ದರು. 3,08,409 ಮತದಾರರಿದ್ದು, ಡಿ.17ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಶೇ 71ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
ಇತ್ತೀಚೆಗೆ ನಡೆದ ಬೋಡೊಲ್ಯಾಂಡ್ ಪ್ರಾದೇಶಿಕ ಮಂಡಳಿಗೆ ನಡೆದ ಚುನಾವಣೆಯಲ್ಲಿಯೂ ಬಿಜೆಪಿ ಭಾರಿ ಗೆಲುವು ಸಾಧಿಸಿದೆ. ಈಗ ತಿವಾ ಸ್ವಾಯತ್ತ ಮಂಡಳಿಯ ಚುನಾವಣೆಯಲ್ಲಿಯೂ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಗಳಲ್ಲಿನ ಗೆಲುವು ಬಿಜೆಪಿ ವಿಶ್ವಾಸವನ್ನು ಹೆಚ್ಚಿಸಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.