ಶುಕ್ರವಾರ, ಅಕ್ಟೋಬರ್ 23, 2020
21 °C

ಬಿಜೆಪಿಯ ಕಳಂಕ ತೊಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು

ಆನಂದ್‌ ಮಿಶ್ರಾ Updated:

ಅಕ್ಷರ ಗಾತ್ರ : | |

Prajavani

ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿ ದಂತೆ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು, ಬಿಜೆಪಿಗೆ ರಾಮಜನ್ಮಭೂಮಿ ಹೋರಾಟದಲ್ಲಿ ಯಶಸ್ಸಿನ ಸವಿಯನ್ನು ನೀಡಿದೆ. ಜತೆಗೆ, ರಾಜಕೀಯ ವಾಗಿಯೂ ಇದು ಅನೇಕ ಫಲಗಳನ್ನು ನೀಡಬಹುದೆಂಬ ಸೂಚನೆ ನೀಡಿದೆ.

ಈ ತೀರ್ಪನ್ನು ‘ನ್ಯಾಯಾಂಗದ ವಿಡಂಬನೆ’ ಎಂದು ವಿರೋಧಪಕ್ಷಗಳು ಟೀಕಿಸಿದ್ದರೆ, ‘ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಯಾವುದೇ ಸಂಚು ನಡೆಸಿಲ್ಲ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ನಮ್ಮ ವಾದಕ್ಕೆ ಈಗ ಮನ್ನಣೆ ಸಿಕ್ಕಿದೆ’ ಎಂದು ಬಿಜೆಪಿ ಹೇಳಿಕೊಂಡಿದೆ.

ಬಿಜೆಪಿಯ ಪರವಾಗಿ ತೀರ್ಪು ಬಂದಿದ್ದರೂ, ಬಿಹಾರದಲ್ಲಿ ಸದ್ಯದಲ್ಲೇ ನಡೆಯ ಲಿರುವ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹೆಚ್ಚಿನ ಸಂಭ್ರಮ ಆಚರಿಸುವುದರಿಂದ ಪಕ್ಷ ಹಿಂಜರಿದಿದೆ. ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆಯಾದರೂ ಸದ್ಯಕ್ಕಂತೂ ಇದು ರಾಮಮಂದಿರ ಹೋರಾಟದ ಸಂಪೂರ್ಣ ಶ್ರೇಯಸ್ಸು ಬಿಜೆಪಿಗೆ ಲಭಿಸುವಂತೆ ಮಾಡಿದೆ. ಜತೆಗೆ, ತನ್ನ ಮೇಲಿದ್ದ ‘ಮಸೀದಿ ಕೆಡವಿದ’ ಪಕ್ಷ ಎಂಬ ಕಳಂಕ ವನ್ನೂ ದೂರ ಮಾಡಲು ನೆರವಾಗಿದೆ.

‘ಮಸೀದಿ ಧ್ವಂಸದಲ್ಲಿ ಬಿಜೆಪಿ ನಾಯಕರು ನೇರ ಭಾಗಿಗಳು’ ಎಂದು ವಿರೋಧಪಕ್ಷಗಳು ಆರೋಪ ಮಾಡುತ್ತಲೇ ಬಂದಿವೆ. ಅದನ್ನು ಬಿಜೆಪಿ ನಿರಾಕರಿಸಿದೆ. ಇನ್ನು ಮುಂದೆ ಇಂಥ ಆರೋಪಗಳನ್ನು ಇನ್ನಷ್ಟು ಗಟ್ಟಿ ದನಿಯಿಂದ ನಿರಾಕರಿಸುವ ಶಕ್ತಿ ಬಿಜೆಪಿಗೆ ಈ ತೀರ್ಪಿನಿಂದ ಲಭಿಸಿದಂತಾಗಿದೆ.

1992ರ ಡಿ. 6ರಂದು ನಡೆದ ಮಸೀದಿ ಧ್ವಂಸ ಘಟನೆಯ ನಂತರ, ಉತ್ತರ ಪ್ರದೇಶದಲ್ಲಿದ್ದ ಕಲ್ಯಾಣ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಲಾಗಿತ್ತು. ಆನಂತರ 1993ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದ್ದರೂ, ಪಕ್ಷ ಅಲ್ಲಿ ಬಲಗೊಳ್ಳುತ್ತಲೇ ಇದೆ. ಈಗಲೂ ಬಿಜೆಪಿ ಅಲ್ಲಿ ಅತಿದೊಡ್ಡ ಪಕ್ಷವಾಗಿದೆ.

1984ರಲ್ಲಿ ಲೋಕಸಭೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಹೊಂದಿದ್ದ ಬಿಜೆಪಿಯು ಸರಿಯಾಗಿ 30 ವರ್ಷಗಳ ನಂತರ ಸ್ವಂತ ಬಲದಿಂದ ಸರ್ಕಾರ ರಚನೆ ಮಾಡುವಷ್ಟು ಸ್ಥಾನಗಳನ್ನು ಪಡೆಯಿತು. 2019ರ ಚುನಾವಣೆಯಲ್ಲಿ ತನ್ನದೇ ದಾಖಲೆಯನ್ನು ಮುರಿದ ಬಿಜೆಪಿ, 303 ಸ್ಥಾನಗಳನ್ನು ಗೆದ್ದುಕೊಂಡಿತು.

ಆದರೆ, ಈ ಮೂರು ದಶಕಗಳಲ್ಲಿ ಬಾಬರಿ ಮಸೀದಿ ಪ್ರಕರಣವು ಬಿಜೆಪಿಯನ್ನು ಕಾಡುತ್ತಲೇ ಇತ್ತು. ಈ ಪ್ರಕರಣ ಯಾವಾಗ ಯಾವ ತಿರುವು ಪಡೆಯುತ್ತದೋ ಎಂಬ ಭೀತಿ ಒಳಗೊಳಗೆ ಬಿಜೆಪಿಯನ್ನು ಕಾಡಿತ್ತು. ಬುಧವಾರ ತೀರ್ಪು ಹೊರಬೀಳುತ್ತಿದ್ದಂತೆಯೇ ಬಿಜೆಪಿಯ ನಾಯಕರು, ‘ಬಾಬರಿ ಮಸೀದಿ ಕೆಡವಿದ ಘಟನೆಯು ಆಕಸ್ಮಿಕ. ಪೂರ್ವ ನಿರ್ಧಾರಿತವಲ್ಲ. ಅದು ಕರಸೇವಕರ ಆ ಕ್ಷಣದ ಪ್ರತಿಕ್ರಿಯೆ’ ಎಂಬ ತಮ್ಮ ಹಳೆಯ ಹೇಳಿಕೆಗಳನ್ನು ಪುನರುಚ್ಚರಿಸಿದ್ದಾರೆ.

‘ದೇಶದ ಕೆಲವು ಹಿರಿಯ, ಗೌರವಾನ್ವಿತ ನಾಯಕರ ವಿರುದ್ಧ ದುರುದ್ದೇಶಪೂರಿತ ಆರೋಪಗಳನ್ನು ಮಾಡಲಾಗಿತ್ತು, ಮೂರು ದಶಕಗಳ ಬಳಿಕ ಅವುಗಳನ್ನು ತೊಡೆದುಹಾಕಲಾಗಿದೆ’ ಎಂದು ಮುಖಂಡ ರಾಮ್‌ ಮಾಧವ್‌ ಹೇಳಿದ್ದಾರೆ.

‘ಸತ್ಯವು ತೊಂದರೆಗೊಳಗಾಗಬಹುದು, ಆದರೆ ಅದನ್ನು ಸೋಲಿಸಲು ಸಾಧ್ಯವಿಲ್ಲ’ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು