ಶುಕ್ರವಾರ, ಜೂನ್ 18, 2021
20 °C

ಪ್ರಧಾನಿ ಮೋದಿ ಹೆಸರು ಕೆಡಿಸಲು ಕಾಂಗ್ರೆಸ್ ಟೂಲ್‌ಕಿಟ್: ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್-‌19 ಸಾಂಕ್ರಾಮಿಕ ಸಂಬಂಧದ ಕಾಂಗ್ರೆಸ್‌ನ ʼಟೂಲ್‌ಕಿಟ್‌ʼ ವಿರುದ್ಧ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ವಾಗ್ದಾಳಿ ನಡೆಸಿದ್ದಾರೆ. ಇಡೀದೇಶ ಆರೋಗ್ಯ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ವಿರೋಧ ಪಕ್ಷವು ತನ್ನ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಬಲಪಡಿಸಿಕೊಳ್ಳಲು ಯತ್ನಿಸುತ್ತಿರುವುದನ್ನು ಜನರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿರುವ ಪಾತ್ರ, ಕೋವಿಡ್‌ ವೈರಸ್‌ನ ಹೊಸ ರೂಪಾಂತರವನ್ನು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಗಳಿಗೆ ಬದಲಾಗಿ ʼಭಾರತದ ತಳಿʼ ಅಥವಾ ‘ಮೋದಿ ತಳಿʼ ಎನ್ನುವಂತೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ತಿಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

ʼಕೋವಿಡ್‌ ಸಾಂಕ್ರಾಮಿಕ ಸಂಬಂಧ ಕಾಂಗ್ರೆಸ್‌ನ ಟೂಲ್‌ಕಿಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಇಂದು ಹರಿದಾಡುತ್ತಿದೆ. ಆರೋಗ್ಯ ಸಂಕಷ್ಟದ ನಡುವೆ, ಈ ಟೂಲ್‌ಕಿಟ್‌ ಮೂಲಕ ಕಾಂಗ್ರೆಸ್‌ ಪಕ್ಷವು ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಬಲಪಡಿಸಿಕೊಳ್ಳಲು ಹೇಗೆ ಪ್ರಯತ್ನಿಸುತ್ತಿದೆ ಎಂಬುದನ್ನು ದೇಶವು ಗಮನಿಸುತ್ತಿದೆ. ಭಾರತ ಸರ್ಕಾರಕ್ಕೆ ಹಾಗೂ ಒಳ್ಳೆಯ ಕೆಲಸ ಮಾಡುತ್ತಿರುವ ಸಾವಿರಾರು ಜನರಿಗೆ ಅಪಖ್ಯಾತಿ ತರಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆʼ ಎಂದು ಕಿಡಿಕಾರಿದ್ದಾರೆ.

ಟೂಲ್‌ಕಿಟ್‌ನಲ್ಲಿ, ʼಪ್ರಧಾನ ಮಂತ್ರಿ ನರೇಂದ್ರ ಮೋದಿ ಖ್ಯಾತಿʼ ಎಂಬ ಅಂಕಣವಿದೆ. ಅದರಲ್ಲಿ, ಪ್ರಧಾನಿಯವರ ಖ್ಯಾತಿಗೆ ಧಕ್ಕೆ ತರುವಂತೆ ಮತ್ತು ಜನಪ್ರಿಯತೆಯನ್ನು ಕುಗ್ಗಿಸುವಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

'ಕೆಲವು ಹಂತಗಳಲ್ಲಿ ಪ್ರಧಾನಿಯವರು ಕೋವಿಡ್‌ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂಬುದನ್ನು ಕಾಂಗ್ರೆಸ್‌ ಒಪ್ಪಿಕೊಂಡಿದೆ. ಆದರೆ, ಕೋವಿಡ್‌ ಎರಡನೇ ಅಲೆಯು ಮೋದಿ ಹೆಸರಿಗೆ ಮಸಿ ಬಳಿಯುವ ಅವಕಾಶವಾಗಿದೆʼ ಎಂದಿದ್ದಾರೆ.

ಭಾರತದಲ್ಲಿರುವ ವಿದೇಶಿ ಪತ್ರಕರ್ತರು ಮೋದಿ ಮತ್ತು ಅವರ ಕೆಟ್ಟ ನಿರ್ವಹಣೆಯ ಬಗ್ಗೆ ವರದಿ ಮಾಡುವಂತೆ ನೋಡಿಕೊಳ್ಳುವಂತೆಯೂ ಸ್ವಯಂ-ಸೇವಕರಿಗೆ (ಕಾಂಗ್ರೆಸ್‌ ಕಾರ್ಯಕರ್ತರಿಗೆ) ಟೂಲ್‌ಕಿಟ್‌ನಲ್ಲಿ ಸೂಚಿಸಲಾಗಿದೆ. ಕೋವಿಡ್‌ ಸಾವು ಮತ್ತು ಶವಸಂಸ್ಕಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿದೇಶಿ ಮಾಧ್ಯಮಗಳಲ್ಲಿ ಬಳಕೆಯಾಗಿರುವ ನಾಟಕೀಯ ಚಿತ್ರಗಳನ್ನು ಬಳಸಿಕೊಳ್ಳಬೇಕು. ಇಂತಹ ಚಿತ್ರಗಳು ಸ್ಥಳೀಯ ಪತ್ರಕರ್ತರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದೂ ತಿಳಿಸಲಾಗಿದೆ ಎಂದಿದ್ದಾರೆ.

ʼವೈರಸ್‌ನ ಹೊಸ ರೂಪಾಂತರದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚಿಸುವ ಸಂದರ್ಭದಲ್ಲಿ ಕಾರ್ಯಕರ್ತರು ʼಮೋದಿ ತಳಿʼ ಎಂದು ಬಳಸಬೇಕೆಂದು ಸೂಚಿಸಲಾಗಿದೆ. ಇದು ದುರದೃಷ್ಟಕರ. ಇದು ಕಾಂಗ್ರಸ್‌ನ ನಿಜವಾದ ಬಣ್ಣʼ ಎಂದು ಕಟುವಾಗಿ ಆರೋಪಿಸಿದ್ದಾರೆ. ಮಾತ್ರವಲ್ಲದೆ, ದೇಶದ ಘನತೆಗೆ ಧಕ್ಕೆ ತರುವ ಹಾಗೂ ಜನರನ್ನು ದಿಕ್ಕುತಪ್ಪಿಸುವ ಸಲುವಾಗಿ ಕಾಂಗ್ರೆಸ್‌ ಹಲವು ಟೂಲ್‌ಕಿಟ್‌ಗಳನ್ನು ರೂಪಿಸಿದೆ ಎಂದೂ ಹೇಳಿದ್ದಾರೆ.‌

ಇದೇ ವಿಚಾರವಾಗಿ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ‌ ಜೆಪಿ ನಡ್ಡಾ ಅವರು, ʼಸಮಾಜವನ್ನು ಒಡೆಯುವುದು ಮತ್ತು ಇತರರ ವಿರುದ್ಧ ವಿಷ ಹರಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು. ಭಾರತವು ಕೋವಿಡ್-19‌ ವಿರುದ್ಧ ಹೋರಾಟ ನಡೆಸುತ್ತಿದ್ದು, ಕಾಂಗ್ರೆಸ್‌ನ ನಡೆಯನ್ನು ಗಮನಿಸುತ್ತಿದೆ. ಕಾಂಗ್ರೆಸ್‌, ʼಟೂಲ್‌ಕಿಟ್‌ ಮಾದರಿಗಳನ್ನುʼ ಮೀರಿ, ದೇಶಕ್ಕಾಗಿ ರಚನಾತ್ಮಕವಾಗಿ ಏನನ್ನಾದರೂ ಮಾಡಬೇಕೆಂದು‌ ಒತ್ತಾಯಿಸುತ್ತೇನೆʼ ಎಂದು ಟ್ವೀಟ್‌ ಮಾಡಿದ್ದರು.

ರಾಜ್ಯ ಬಿಜೆಪಿ ಕಿಡಿ
ಟೂಲ್‌ಕಿಟ್‌ ವಿಚಾರವಾಗಿ ಕಾಂಗ್ರೆಸ್‌ ವಿರುದ್ಧ ರಾಜ್ಯ ಬಿಜೆಪಿ ಘಟಕವು ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ನ ನಿಜವಾದ ಮುಖ ಬಹಿರಂಗವಾಗಿದೆ ಎಂದು ಟ್ವೀಟ್‌ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು