ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಎಲ್‌.ಮುರುಗನ್‌ ಪೊಲೀಸ್‌ ವಶಕ್ಕೆ

ಅನುಮತಿ ಇಲ್ಲದೇ ‘ವೆಟ್ರಿವೇಲ್‌ ಯಾತ್ರೆ’ ನಡೆಸಿದ ಹಿನ್ನೆಲೆಯಲ್ಲಿ ಕ್ರಮ
Last Updated 6 ನವೆಂಬರ್ 2020, 12:37 IST
ಅಕ್ಷರ ಗಾತ್ರ

ಚೆನ್ನೈ: ನಿಷೇಧದ ಹೊರತಾಗಿ ರಾಜ್ಯದಾದ್ಯಂತ ‘ವೆಟ್ರಿವೇಲ್‌ ಯಾತ್ರೆ’ ನಡೆಸಲು ಮುಂದಾದ ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಎಲ್‌.ಮುರುಗನ್‌ ಅವರನ್ನು ತಿರುಟ್ಟಾನಿಯಲ್ಲಿ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

‘ಕಂದ ಷಷ್ಠಿ ಕವಚಂ’ ಹೆಸರು ಕೆಡಿಸಿದ ಯುಟ್ಯೂಬ್‌ ಚಾನೆಲ್‌ ‘ಕರುಪ್ಪರ್‌ ಕೂಟಂ’ ಹಿಂದೆ ಡಿಎಂಕೆ ಕೈವಾಡವಿದ್ದು, ಇದನ್ನು ಜನರ ಮುಂದಿಡಲು ಈ ಯಾತ್ರೆಯನ್ನು ಕೈಗೊಳ್ಳುತ್ತಿರುವುದಾಗಿ ಮುರುಗನ್‌ ತಿಳಿಸಿದರು. ‘ವೆೆಟ್ರಿವೇಲ್‌’, ‘ವೀರವೇಲ್‌’ ಎಂಬ ಘೋಷಣೆಯೊಂದಿಗೆ ತಿರುಟ್ಟಾನಿಯಿಂದ ತಮ್ಮ ವಾಹನದಲ್ಲಿ ಯಾತ್ರೆಯನ್ನು ಆರಂಭಿಸಿದ ಮುರುಗನ್‌ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರನ್ನು ತಡೆದು ಪೊಲೀಸರು, ನಂತರ ಅವರನ್ನು ವಶಕ್ಕೆ ಪಡೆದರು.

ಯಾತ್ರೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಬಿಜೆಪಿ ನಾಯಕರಾದ ಪೊನ್ ರಾಧಾಕೃಷ್ಣನ್‌, ಸಿ.ಪಿ.ರಾಧಾಕೃಷ್ಣನ್‌ ಹಾಗೂ ಎಚ್‌.ರಾಜಾ ಅವರು ತಿರುಟ್ಟಾನಿಗೆ ಆಗಮಿಸಿದ್ದರು. ಶುಕ್ರವಾರದಿಂದ ಆರಂಭವಾಗಿ ತಮಿಳುನಾಡಿನಲ್ಲಿರುವ ಆರು ಪ್ರಮುಖ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಗಳಿರುವ ಪ್ರದೇಶಕ್ಕೆ ಭೇಟಿ ನೀಡಿ, ಡಿ.6ಕ್ಕೆ ಈ ಯಾತ್ರೆ ಮುಕ್ತಾಯಗೊಳಿಸಲು ಬಿಜೆಪಿ ನಿರ್ಧರಿಸಿತ್ತು. ಕೋವಿಡ್‌–19 ಪಿಡುಗಿನ ಕಾರಣದಿಂದಾಗಿ ಯಾತ್ರೆ ನಡೆಸಲು ಅನುಮತಿಯನ್ನು ಸರ್ಕಾರ ನಿರಾಕರಿಸಿತ್ತು.

ಯಾತ್ರೆಯ ವಿರುದ್ಧ ಮದ್ರಾಸ್‌ ಹೈಕೋರ್ಟ್‌ನಲ್ಲಿ ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದವು. ‘ಯಾತ್ರೆಗೆ ಅವಕಾಶ ನೀಡುವುದಿಲ್ಲ’ ಎಂದು ಗುರುವಾರವೇ ಹೈಕೋರ್ಟ್‌ಗೆ ಸರ್ಕಾರವು ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT