ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಅತೃಪ್ತಿ ಶಮನಕ್ಕೆ ಬಿಜೆಪಿ ಕ್ರಮ

Last Updated 13 ಜೂನ್ 2021, 20:04 IST
ಅಕ್ಷರ ಗಾತ್ರ

ಲಖನೌ: ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆಗೆ ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಬಿಜೆಪಿಯು ಪಕ್ಷದೊಳಗಿನ ಅತೃಪ್ತರನ್ನು ಸಮಾಧಾನಪಡಿಸುವ ಕೆಲಸಕ್ಕೆ ಮುಂದಾಗಿದೆ.

ಅಸಮಾಧಾನಗೊಂಡಿರುವ ಶಾಸಕರು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಪಕ್ಷದಲ್ಲಿ ಹುದ್ದೆಗಳನ್ನು ನೀಡುವುದು ಅಥವಾ ನಿಗಮ, ಮಂಡಳಿಗೆ ನೇಮಕ ಮಾಡುವ ಯೋಜನೆಯನ್ನು ಪಕ್ಷ ರೂಪಿಸುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ ಹಾಗೂ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಮಾಡಿದ ನಂತರ ಈ ಬೆಳವಣಿಗೆ ನಡೆಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಅಸಮಾಧಾನಗೊಂಡಿರುವ ನಾಯಕರನ್ನು ವಿವಿಧ ನಿಗಮ ಮಂಡಳಿಗಳಿಗೆ ನೇಮಕ ಮಾಡುವ ಸಾಧ್ಯತೆ ಇದೆ. ಇವುಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಪಕ್ಷದ ಕಾರ್ಯಕರ್ತರಿಗೆ ಈ ಹುದ್ದೆಗಳನ್ನು ನೀಡುವ ಮೂಲಕ ಅವುಗಳನ್ನು ಭರ್ತಿಗೊಳಿಸಲು ಚಿಂತನೆ ನಡೆದಿದೆ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

ಪಕ್ಷದ ಹುದ್ದೆಗಳಿಗೆ ನೇಮಕ ಮಾಡುವಾಗ ಜಾತಿ ಹಾಗೂ ಪ್ರಾದೇಶಿಕತೆಯನ್ನು ಗಮನದಲ್ಲಿಡಲಾಗುವುದು. ಇದು ಪಕ್ಷದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ ಎಂದು ಅವರು ಹೇಳಿದ್ದಾರೆ.

ಆದರೆ, ಕೆಲವು ನಾಯಕರು ರಾಜ್ಯದ ಆಡಳಿತ ಹಾಗೂ ಆದಿತ್ಯನಾಥ ಅವರ ಕಾರ್ಯವೈಖರಿಯ ಬಗ್ಗೆ ಅಪಸ್ವರಗಳನ್ನೆತ್ತಿದ್ದು, ಅವರ ಕೋಪವನ್ನು ಶಮನಗೊಳಿಸುವ ಉದ್ದೇಶದಿಂದ ಈ ನೇಮಕಾತಿಗಳನ್ನು ಮಾಡಲಾಗುತ್ತಿದೆ. ಅತೃಪ್ತಿಯನ್ನು ಶಮನಗೊಳಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಕೇಂದ್ರದ ನಾಯಕರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎರಡು ವಾರಗಳ ಹಿಂದೆ ಇಲ್ಲಿ ನಡೆದಿದ್ದ ಸಭೆಯಲ್ಲಿ, ಪಕ್ಷದ ಅನೇಕ ಶಾಸಕರು ಹಾಗೂ ಮುಖಂಡರು ಕೋವಿಡ್‌ ಎರಡನೇ ಅಲೆಯನ್ನು ಸರ್ಕಾರವು ನಿರ್ವಹಿಸಿದ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ್ದರಲ್ಲದೆ ಮುಖ್ಯಮಂತ್ರಿಯ ಬದಲಾವಣೆಗೂ ಬೇಡಿಕೆ ಇಟ್ಟಿದ್ದರು. ಮುಖ್ಯಮಂತ್ರಿಯ ಬದಲಾವಣೆಗೆ ಕೇಂದ್ರ ನಾಯಕತ್ವ ನಿರಾಕರಿಸಿದ್ದರೂ, ಸಂಪುಟ ಪುನಾರಚನೆ ಮಾಡಿ, ಅತೃಪ್ತರಿಗೆ ಸ್ಥಾನಗಳನ್ನು ನೀಡುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT