ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ | ಸಂಪುಟ ರಚನೆ: 2024ರ ಚುನಾವಣೆ ಮೇಲೆ ಕಣ್ಣು

ಎಲ್ಲ ಜಾತಿಗಳಿಗೆ ಪ್ರಾತಿನಿಧ್ಯ; ಮೂವರು ಉಪಮುಖ್ಯಮಂತ್ರಿಗಳ ನೇಮಕ ಸಾಧ್ಯತೆ
Last Updated 14 ಮಾರ್ಚ್ 2022, 22:05 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ, 2024ರ ಲೋಕಸಭೆ ಚುನಾವಣೆಯ ಸಿದ್ಧತೆ ಆರಂಭಿಸಿದೆ. ಇದರ ಮೊದಲ ಸುಳಿವು ಉತ್ತರ ಪ್ರದೇಶ ಸಚಿವ ಸಂಪುಟ ರಚನೆಯಲ್ಲಿ ಗೋಚರವಾಗುವ ಸಾಧ್ಯತೆಯಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕೇಂದ್ರದ ಬಿಜೆಪಿ ನಾಯಕರ ಜೊತೆ ದೆಹಲಿಯಲ್ಲಿ ಮಾತುಕತೆ ನಡೆಸಿದ್ದು, ಸಂಪುಟ ಸೇರಲಿರುವವರ ಪಟ್ಟಿ ಅಂತಿಮವಾಗಿದೆ ಎಂದು ಮೂಲಗಳು ತಿಳಿಸಿವೆ. ಯೋಗಿ ಅವರು ಹೋಳಿ ಹಬ್ಬದ ದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ.

ಕಳೆದ ಬಾರಿ ಯೋಗಿ ಸಂಪುಟದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳಿದ್ದರು. ಮೂಲಗಳ ಪ್ರಕಾರ, ಈ ಬಾರಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಿಸುವ ಸಾಧ್ಯತೆಯಿದೆ. ಚುನಾವಣೆಯಲ್ಲಿ ಸೋತಿರುವ ಕೇಶವಪ್ರಸಾದ್ ಮೌರ್ಯ ಹಾಗೂ ದಿನೇಶ್ ಶರ್ಮಾ ಅವರು ಸಂಪುಟ ಸೇರಲಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

‘ಒಟ್ಟು 60 ಸಚಿವರು ಸಂಪುಟದಲ್ಲಿ ಇರಲಿದ್ದಾರೆ. ಸಚಿವರ ಆಯ್ಕೆಯಲ್ಲಿ ಜಾತಿ ಪರಿಗಣನೆ ಮಹತ್ವದ ಮಾತ್ರ ವಹಿಸಲಿದೆ’ ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. ಇವರು ಯೋಗಿ ಹಾಗೂ ಕೇಂದ್ರದ ನಾಯಕರ ನಡುವೆ ಮಾತುಕತೆ ನಡೆದಾಗ ಉಪಸ್ಥಿತರಿದ್ದರು.

ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆದಿವೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್, ಉತ್ತರಾಖಂಡದ ಮಾಜಿ ರಾಜ್ಯಪಾಲ ಬೇಬಿ ರಾಣಿ ಮೌರ್ಯ, ಹಾಗೂ ಮೋದಿ ಅವರಿಗೆ ಆಪ್ತರು ಎನ್ನಲಾಗಿರುವ ಗುಜರಾತ್‌ ಕೇಡರ್‌ನ ಮಾಜಿ ಅಧಿಕಾರಿ ಎ.ಕೆ. ಶರ್ಮಾ ಅವರ ನೇಮಕದ ಬಗ್ಗೆ ಚರ್ಚೆ ನಡೆದಿದೆ.

ಮೂವರು ಉಪಮುಖ್ಯಮಂತ್ರಿಗಳು ಬ್ರಾಹ್ಮಣ, ಒಬಿಸಿ ಹಾಗೂ ಠಾಕೂರ್ ಸಮುದಾಯದಿಂದ ಆಯ್ಕೆಯಾಗುವ ಸಾಧ್ಯತೆಯಿದೆ. ಜಾಟ್‌, ದಲಿತ ಹಾಗೂ ಗುಜ್ಜರ್‌ ಸಮುದಾಯಗಳಿಗೆ ಸಂಪುಟದಲ್ಲಿ ಹೆಚ್ಚಿನ ಸ್ಥಾನ ದೊರೆಯಬಹುದು ಎನ್ನಲಾಗಿದೆ. ಬಿಜೆಪಿ ಮಿತ್ರಪಕ್ಷಗಳಾದ ಅಪ್ನಾದಳ ಹಾಗೂ ನಿಷಾದ್ ಪಕ್ಷಗಳಿಗೆ ತಲಾ ಒಂದು ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.

ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸಂಪುಟ ರಚನೆಯಾಗಲಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ‘ಲೋಕಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿಯಿದೆ. ಮುಖ್ಯವಾಗಿ, ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ ಸಮುದಾಯಗಳನ್ನು ಒಳಗೊಂಡಂತೆ ಎಲ್ಲ ಜಾತಿಗಳಿಗೆ ಪ್ರಾತಿನಿಧ್ಯ ದೊರೆಯುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ಯೋಗಿ ಸಂಪುಟದ ಪ್ರಮಾಣ ವಚನ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಬಿಜೆಪಿ ನಿರ್ಧರಿಸಿದೆ. ರಾಜಧಾನಿಯ ಇಕಾನಾ ಮೈದಾನದಲ್ಲಿ ಸಮಾರಂಭ ನಡೆಯಲಿದೆ.

ಪರಿಷತ್‌ನ 36 ಸ್ಥಾನಗಳ ಮೇಲೆ ಬಿಜೆಪಿ ಕಣ್ಣು
ಪರಿಷತ್‌ನಲ್ಲಿ ಬಹುಮತ ಬಿಜೆಪಿ ಗುರಿ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ನಿಚ್ಚಳ ಬಹುಮತ ಪಡೆದಿರುವ ಬಿಜೆಪಿ, ಇದೀಗ ವಿಧಾನ ಪರಿಷತ್‌ನ 36 ಸ್ಥಾನಗಳ ಮೇಲೆ ಕಣ್ಣಿಟ್ಟಿದೆ.

ಏಪ್ರಿಲ್ 9ರಂದು ಪರಿಷತ್‌ನ 36 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಏಪ್ರಿಲ್ 12ರಂದು ಮತ ಎಣಿಕೆ ನಡೆಯಲಿದೆ.

ವಿಧಾನಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆದಿರುವ ಬಿಜೆಪಿ, ಪರಿಷತ್‌ನಲ್ಲೂ ಏಕೈಕ ಅತಿದೊಡ್ಡ ಪಕ್ಷವಾಗುವ ಅವಕಾಶ ಈ ಚುನಾವಣೆಯಿಂದ ಸಿಕ್ಕಿದೆ.

100 ಸದಸ್ಯಬಲದ ಪರಿಷತ್‌ನಲ್ಲಿ ಸದ್ಯ ಬಿಜೆಪಿಯ 35, ಎಸ್‌ಪಿಯ 17 ಹಾಗೂ ಬಿಎಸ್‌ಪಿಯ ನಾಲ್ವರು ಸದಸ್ಯರಿದ್ದಾರೆ. ಕಾಂಗ್ರೆಸ್ ಅಪ್ನಾದಳ (ಎಸ್) ಹಾಗೂ ನಿಷಾದ್ ಪಕ್ಷಗಳು ತಲಾ ಒಂದು ಸ್ಥಾನ ಹೊಂದಿವೆ. 37 ಸ್ಥಾನಗಳು ಖಾಲಿಯಿವೆ.

ವಿಧಾನಸಭಾ ಚುನಾವಣೆಗೂ ಮುನ್ನ, ಸಮಾಜವಾದಿ ಪಕ್ಷದ ಹಲವು ಪರಿಷತ್ ಸದಸ್ಯರು ಬಿಜೆಪಿ ಸೇರ್ಪಡೆಯಾಗಿದ್ದರು. ಈ ಚುನಾವಣೆಯನ್ನು ಎರಡು ಹಂತಗಳಲ್ಲಿ ನಡೆಸಲು ಈ ಮೊದಲು ಉದ್ದೇಶಿಸಲಾಗಿತ್ತು. ಆದರೆ ಈಗ ಒಂದೇ ದಿನದಂದು ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT