ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಕೇಂದ್ರದಲ್ಲಿ ಇನ್ನೂ ಇರಲಿದೆ ಬಿಜೆಪಿ: ‍ಸಂಚಲನ ಸೃಷ್ಟಿಸಿದ ಪಿಕೆ ಹೇಳಿಕೆ

Last Updated 28 ಅಕ್ಟೋಬರ್ 2021, 23:42 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ರಾಜಕಾರಣದ ಕೇಂದ್ರ ಸ್ಥಾನದಲ್ಲಿ ಬಿಜೆಪಿ ಇನ್ನೂ ಬಹಳ ವರ್ಷ ಇರಲಿದೆ ಎಂದುರಾಜಕೀಯ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್‌ (ಪಿಕೆ) ಅಭಿಪ್ರಾಯಪಟ್ಟಿದ್ದಾರೆ. ಆದರೆ,ಇದನ್ನು ರಾಹುಲ್‌ ಗಾಂಧಿ ಮನವರಿಕೆ ಮಾಡಿಕೊಂಡಿಲ್ಲ. ನರೇಂದ್ರ ಮೋದಿ ಅವರನ್ನು ಜನರೇ ಕೆಳಕ್ಕೆ ಇಳಿಸಲು ಇನ್ನು ಬಹಳ ಕಾಲ ಬೇಕಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಭಾವಿಸಿದ್ದಾರೆ. ಇದುವೇ ರಾಹುಲ್ ಅವರ ಬಹುದೊಡ್ಡ ಸಮಸ್ಯೆ ಎಂದು ಪಿಕೆ ಅವರು ಹೇಳಿದ್ದಾರೆ.

ಪ್ರಶಾಂತ್ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಕ್ಷೀಣವಾಗಿದೆ ಎಂಬುದನ್ನು ಅವರ ಈ ಮಾತುಗಳು ಸೂಚಿಸಿವೆ. ಕೆಳ ತಿಂಗಳ ಹಿಂದಿನವರೆಗೆ, ಅವರು ಕಾಂಗ್ರೆಸ್‌ ಸೇರುವ ಮತ್ತು ಕಾಂಗ್ರೆಸ್‌ನಲ್ಲಿ ಅವರಿಗೆ ಮಹತ್ವದ ಹೊಣೆಗಾರಿಕೆ ನೀಡುವ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ನಡೆದಿತ್ತು.

ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷವು, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸೇರಿ ವಿವಿಧ ಪ್ರಾದೇಶಿಕ ಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗಿತ್ತು. ಮುಂದಿನ ವರ್ಷ ಆರು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಮತ್ತು ಮುಂದಿನ ಲೋಕಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯ ನೇರ ಎದುರಾಳಿ ಯಾರು ಎಂಬುದು ಚರ್ಚೆ ಆಗುತ್ತಿರುವ ಸಂದರ್ಭದಲ್ಲಿ ಪ್ರಶಾಂತ್‌ಹೇಳಿಕೆ ಹೊರಬಿದ್ದಿದೆ. ಗೋವಾದಲ್ಲಿಯೂ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಟಿಎಂಸಿ ಪರವಾಗಿ ಪ್ರಶಾಂತ್‌ ಕೆಲಸ ಮಾಡುತ್ತಿದ್ದಾರೆ.

ಟಿಎಂಸಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ವಾಗ್ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿಯೇ ಪ್ರಶಾಂತ್‌ ಅವರು ಈ ಮಾತನ್ನು ಹೇಳಿದ್ದಾರೆ. ಪ್ರಮುಖ ವಿರೋಧ ಪಕ್ಷದ ನಾಯಕನಾಗಿ ರಾಹುಲ್‌ ಗಾಂಧಿ ಅವರ ಸಾಮರ್ಥ್ಯದ ಬಗ್ಗೆ ಟಿಎಂಸಿ ಆಗಾಗ ಅನುಮಾನ ವ್ಯಕ್ತಪಡಿಸುತ್ತಲೇ ಬಂದಿದೆ. ಜತೆಗೆ, ಮಮತಾ ಅವರು ಉತ್ತಮ ನಾಯಕಿ ಎಂದೂ ಬಿಂಬಿಸುತ್ತಿದೆ. ಪ್ರಮುಖ ವಿರೋಧ ಪಕ್ಷದ ಸ್ಥಾನಕ್ಕೆ ಬರುವ ಆಕಾಂಕ್ಷೆಯನ್ನೂ ಟಿಎಂಸಿ ವ್ಯಕ್ತಪಡಿಸಿದೆ.

ಕಿಶೋರ್ ಹೇಳಿದ್ದೇನು?
ಪ್ರಶಾಂತ್ ಅವರ ಖಾಸಗಿ ಸಂಭಾಷಣೆಯೊಂದರ ವಿಡಿಯೊ ಈಗ ವೈರಲ್‌ ಆಗಿದೆ. ಆ ವಿಡಿಯೊದಲ್ಲಿ ಅವರು ಹೀಗೆ ಹೇಳಿದ್ದಾರೆ: ‘ಬಿಜೆಪಿ ಭಾರತದ ರಾಜಕಾರಣದ ಕೇಂದ್ರ ಸ್ಥಾನದಲ್ಲಿ ಇರಲಿದೆ... ಆ ಪಕ್ಷವು ಗೆಲ್ಲಲಿ, ಸೋಲಲಿ... ಸ್ವಾತಂತ್ರ್ಯಾನಂತರದ 40 ವರ್ಷಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಹೇಗೆ ಇತ್ತೋ, ಬಿಜೆಪಿ ಇನ್ನು ಮುಂದೆ ಹಾಗೆಯೇ ಇರಲಿದೆ. ಬಿಜೆಪಿ ಎಲ್ಲಿಗೂ ಹೋಗುವುದಿಲ್ಲ. ರಾಹುಲ್‌ ಸಮಸ್ಯೆಯೂ ಅದೇ. ಮೋದಿಯನ್ನು ಜನರು ಕಿತ್ತೆಸೆಯಲು ಇನ್ನು ಸ್ವಲ್ಪ ಸಮಯವಷ್ಟೇ ಬಾಕಿ ಇದೆ ಎಂದು ಅವರು ಭಾವಿಸಿದ್ದಾರೆ. ಆದರೆ, ಹಾಗೆ ಆಗುವುದಿಲ್ಲ’.

ಬಿಜೆಪಿ ಸಂಭ್ರಮ
ಕಿಶೋರ್ ಅವರ ಹೇಳಿಕೆಯು ಬಿಜೆಪಿಯಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಪ್ರಶಾಂತ್ ಕಿಶೋರ್ ಅವರ ಹೇಳಿಕೆಯನ್ನು ಇಡೀ ದೇಶವೇ ಒಪ್ಪುತ್ತದೆ. ಆಡಳಿತ ಪಕ್ಷವು ಇನ್ನೂ ಹಲವು ದಶಕ ಭಾರತದ ರಾಜಕೀಯದ ಕೇಂದ್ರ ಸ್ಥಾನದಲ್ಲಿ ಇರಲಿದೆ ಎಂದು ಬಿಜೆಪಿ ಹೇಳಿದೆ.

ದೇಶಕ್ಕೆ ಗೊತ್ತಿಲ್ಲದ ಏನನ್ನೂ ಪ್ರಶಾಂತ್‌ ಅವರು ಹೇಳಿಲ್ಲ. ಆದರೆ, ‘ದೇಶದ ಧ್ವನಿಯನ್ನು ರಾಹುಲ್ ಅವರು ಎಂದೂ ಆಲಿಸಿಲ್ಲ. ಇನ್ನು ಮುಂದೆಯೂ ಅವರು ಆಲಿಸುವುದಿಲ್ಲ’ ಎಂದು ಬಿಜೆಪಿ ವಕ್ತಾರ ರಾಜ್ಯವರ್ಧನ್‌ ಸಿಂಗ್ ರಾಠೋಡ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT