ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕೂಟ ವ್ಯವಸ್ಥೆಗೆ ಬಿಜೆಪಿ ಪ್ರಹಾರ: ಮಮತಾ ಆಕ್ರೋಶ

ಕೇಂದ್ರ, ಬಿಜೆಪಿ ವಿರುದ್ಧ ಮಮತಾ ಆಕ್ರೋಶ: ಬಿಜೆಪಿಯೇತರ ಪಕ್ಷಗಳ ಮುಖಂಡರಿಗೆ ಪತ್ರ
Last Updated 31 ಮಾರ್ಚ್ 2021, 22:47 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವಣ ತೀವ್ರ ಹಣಾಹಣಿ ಮತ್ತೊಂದು ಮಜಲಿಗೆ ಹೋಗಿದೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಬಿಜೆಪಿಯೇತರ ಪಕ್ಷಗಳ ನಾಯಕರಿಗೆ ಪತ್ರ ಬರೆದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಸ್ವಾತಂತ್ರ್ಯಾನಂತರ ಕೇಂದ್ರ ಮತ್ತು ರಾಜ್ಯಗಳ ನಡುವಣ ಸಂಬಂಧ ಇಷ್ಟು ಹದಗೆಟ್ಟಿರುವುದು ಇದೇ ಮೊದಲು ಎಂದಿದ್ದಾರೆ. ಬಿಜೆಪಿ ಪ್ರಜಾಪ್ರಭುತ್ವದ ಮೇಲೆ ಪ್ರಹಾರ ನಡೆಸುತ್ತಿದೆ ಎಂದಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಮಮತಾ ಅವರು ಪತ್ರ ಕಳುಹಿಸಿದ್ದಾರೆ.

ಸತತ 10 ವರ್ಷಗಳಿಂದ ಸರ್ಕಾರ ನಡೆಸುತ್ತಿರುವ ಮಮತಾ ಅವರನ್ನು ಅಧಿಕಾರದಿಂದ ಇಳಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಇದರಿಂದ ಕೆರಳಿರುವ ಮಮತಾ ಅವರು ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಟ್ಟಾಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಈ ಪತ್ರವನ್ನು ವಿಶ್ಲೇಷಿಸಲಾಗಿದೆ.

‘ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಒಕ್ಕೂಟ ವ್ಯವಸ್ಥೆ ಮೇಲೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ನಡೆಸಿರುವ ಸರಣಿ ಪ್ರಹಾರದತ್ತ ನಿಮ್ಮೆಲ್ಲರ ಗಮನ ಸೆಳೆಯುವುದಕ್ಕಾಗಿ ಈ ಪತ್ರ ಬರೆಯುತ್ತಿದ್ದೇನೆ’ ಎಂದು ಮಮತಾ ಅವರು ಪತ್ರದಲ್ಲಿ ಹೇಳಿದ್ದಾರೆ.

ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆಯನ್ನು ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ್ದು ಅತ್ಯಂತ ಕಳವಳಕಾರಿ ಬೆಳವಣಿಗೆ ಎಂದು ಅವರು ಬಣ್ಣಿಸಿದ್ದಾರೆ.

‘ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ದೆಹಲಿ ಸರ್ಕಾರದ ಎಲ್ಲ ಅಧಿಕಾರಗಳನ್ನು ಈ ಕಾನೂನಿನ ಮೂಲಕ ಕೇಂದ್ರವು ಕಸಿದುಕೊಂಡಿದೆ. ಈ ಎಲ್ಲ ಅಧಿಕಾರಗಳನ್ನು ಕೇಂದ್ರವು ನಿಯೋಜಿಸುವ ಲೆಫ್ಟಿನೆಂಟ್‌ ಜನರಲ್‌ ಅವರ ಕೈಗೆ ಕೊಟ್ಟಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಸೋನಿಯಾ ಅವರಲ್ಲದೆ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಡಿಎಂಕೆಯ ಎಂ.ಕೆ. ಸ್ಟಾಲಿನ್‌, ಎಸ್‌ಪಿಯ ಅಖಿಲೇಶ್‌ ಯಾದವ್‌, ಆರ್‌ಜೆಡಿಯ ತೇಜಸ್ವಿ ಯಾದವ್‌, ಶಿವಸೇನಾದ ಉದ್ಧವ್‌ ಠಾಕ್ರೆ, ಎಎಪಿಯ ಅರವಿಂದ ಕೇಜ್ರಿವಾಲ್‌, ವೈಎಸ್‌ಆರ್‌ ಕಾಂಗ್ರೆಸ್‌ನ ಜಗನ್‌ ರೆಡ್ಡಿ, ಎನ್‌ಸಿಯ ಫಾರೂಕ್‌ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ ಮುಂತಾದವರಿಗೆ ಪತ್ರವನ್ನು ಕಳುಹಿಸಲಾಗಿದೆ.

ಮುಫ್ತಿ ಬೆಂಬಲ: ಮಮತಾ ಅವರಿಗೆ ಮೆಹಬೂಬಾ ಮುಫ್ತಿ ಅವರು ಬೆಂಬಲ ಸೂಚಿಸಿದ್ದಾರೆ. ದೇಶದ ಪ್ರಜಾಪ್ರಭುತ್ವ ಉಳಿಯಬೇಕಿದ್ದರೆ ವಿರೋಧ ಪಕ್ಷಗಳೆಲ್ಲ ಒಂದಾಗಲೇಬೇಕಿರುವ ಅನಿವಾರ್ಯ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT