ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜೇಶ್ವರ ಗೆಲ್ಲಲು ಬಿಜೆಪಿ ಹರಸಾಹಸ

Last Updated 19 ಮಾರ್ಚ್ 2021, 21:56 IST
ಅಕ್ಷರ ಗಾತ್ರ

ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಬಿಜೆಪಿಯು ಈ ಬಾರಿ ಬೇರೆ ಯಾವುದೇ ಪಕ್ಷಕ್ಕಿಂತ ಹೆಚ್ಚಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಕೇರಳದಲ್ಲಿ ಬಿಜೆಪಿಗೆ ಗೆಲುವಿನ ನಿರೀಕ್ಷೆ ಇರುವಕ್ಷೇತ್ರಗಳಲ್ಲಿ ಇದೂ ಒಂದಾಗಿದೆ. ಆದರೆ ಅಲ್ಪಸಂಖ್ಯಾತರ ಮತಗಳೆಲ್ಲವೂ ಧ್ರುವೀಕರಣಗೊಳ್ಳುವ ಸಾಧ್ಯತೆಯು ಬಿಜೆಪಿಯ ಚಿಂತೆಗೆ ಕಾರಣವಾಗಿದೆ.

ಕರ್ನಾಟಕದ ಗಡಿಯ ಸಮೀಪದಲ್ಲೇ ಇರುವ ಈ ಕ್ಷೇತ್ರದಲ್ಲಿ ಕನ್ನಡಿಗರ ಸಂಖ್ಯೆ ದೊಡ್ಡದಾಗಿದೆ. ಆ ಕಾರಣಕ್ಕೆ ಎಲ್ಲಾ ಪಕ್ಷಗಳೂ ಪ್ರಚಾರದ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಬಳಸುತ್ತವೆ. ಆದರೆ, ಅದು ಮತಯಾಚನೆಗೆ ಸೀಮಿತವಾಗಿದೆಯೇ ವಿನಾ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ.

ಬಿಜೆಪಿ ಇಲ್ಲಿ ಆಯೋಜಿಸುತ್ತಿರುವ ಪ್ರಚಾರ ಕಾರ್ಯಕ್ರಮ ಹಾಗೂ ರ್‍ಯಾಲಿಗಳಲ್ಲಿ ಮಹಿಳೆಯರೂ ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದಾರೆ. 2016ರಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್‌ ಅವರು ಕೇವಲ 89 ಮತಗಳಿಂದ ಸೋತಿದ್ದರು. ಈ ಬಾರಿ ಗೆಲುವಿನ ನಿರೀಕ್ಷೆಯೊಂದಿಗೆ ಪುನಃ ಕಣಕ್ಕಿಳಿದಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಆಗಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರ್ಕಾರವಾಗಲಿ ಮಂಜೇಶ್ವರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ. ಜತೆಗೆ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವನ್ನೂ ಮುನ್ನೆಲೆಯಲ್ಲಿಟ್ಟುಕೊಂಡು ಮತ ಯಾಚನೆ ಮಾಡುತ್ತಿದೆ.

ಇನ್ನೊಂದೆಡೆ ಸಿಪಿಎಂ ಅಭ್ಯರ್ಥಿ ವಿ.ವಿ. ರಮೇಶನ್‌ ಅವರು ಉಚಿತ ಪಡಿತರ ವಿತರಣೆ ಮುಂತಾದ ಎಲ್‌ಡಿಎಫ್‌ ಸರ್ಕಾರದ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ. ಯುಡಿಎಫ್‌ ಅಭ್ಯರ್ಥಿ, ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ (ಐಯುಎಂಎಲ್‌) ಎ.ಕೆ.ಎಂ. ಅಶ್ರಫ್‌ ಕಳೆದ ಐದು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಆರೋಪಿಸಿದ್ದಾರೆ.

ಕೋವಿಡ್‌ ಕಾರಣಕ್ಕೆ ಕೇರಳದಿಂದ ಕರ್ನಾಟಕಕ್ಕೆ ಬರುವ ರಸ್ತೆಗಳನ್ನು ತಡೆದಿರುವ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರದ ಕ್ರಮವನ್ನು ಮುಂದಿಟ್ಟುಕೊಂಡು ಎಲ್‌ಡಿಎಫ್‌ ಹಾಗೂ ಯುಡಿಎಫ್‌, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿವೆ. ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವವರ ಮೇಲೆ ಈಗಲೂ ಕರ್ನಾಟಕವು ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಇದರಿಂದಾಗಿ ಕಾಸರಗೋಡು ಜಿಲ್ಲೆಯಿಂದ ಚಿಕಿತ್ಸೆಗಾಗಿ ಮಂಗಳೂರಿಗೆ ಬರುವ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ.

ಶಕ್ತಿ ಪ್ರದರ್ಶನ: ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸುರೇಂದ್ರನ್‌ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ಸಂದರ್ಭವನ್ನು ಬಿಜೆಪಿಯು ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಿ ಬಳಸಿಕೊಂಡಿತು.

‘ಪ್ರಚಾರದ ಆರಂಭದ ದಿನದಿಂದಲೇ ನಮಗೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಆದ್ದರಿಂದ ಈ ಬಾರಿ ಸುರೇಂದ್ರನ್‌ ಅವರ ಗೆಲುವು ನಿಶ್ಚಿತ’ ಎಂದು ಪಕ್ಷದ ಸ್ಥಳೀಯ ನಾಯಕ ಹರೀಶ್‌ಚಂದ್ರ ಮಂಜೇಶ್ವರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT