ಕಾಲಿವುಡ್ ನಿರ್ಮಾಪಕರ ಮೇಲೆ ಐಟಿ ದಾಳಿ: ₹200 ಕೋಟಿಗೂ ಅಧಿಕ ಅಘೋಷಿತ ಹಣ ಪತ್ತೆ

ನವದೆಹಲಿ: ‘ತಮಿಳುನಾಡಿನ ಕೆಲವು ಚಿತ್ರನಿರ್ಮಾಪಕರು, ವಿತರಕರು ಮತ್ತು ಹೂಡಿಕೆದಾರರಿಗೆ ಸೇರಿದ 40 ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದ ವೇಳೆ ಒಟ್ಟು ₹200 ಕೋಟಿಗೂ ಅಧಿಕ ಅಘೋಷಿತ ಆದಾಯಕ್ಕೆ ಸಂಬಂಧಿಸಿದ ದಾಖಲೆಗಳು, ನಗದು, ಆಭರಣ ಪತ್ತೆಯಾಗಿದೆ’ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಶನಿವಾರ ತಿಳಿಸಿದೆ.
ಚೆನ್ನೈ, ಮಧುರೈ, ಕೊಯಮತ್ತೂರು ಮತ್ತು ವೆಲ್ಲೂರ್‌ನಲ್ಲಿ ಶೋಧಕಾರ್ಯ ನಡೆಸಲಾಗಿದೆ. ₹26 ಕೋಟಿ ನಗದು ಮತ್ತು ₹3 ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಡಿಟಿ ಮಾಹಿತಿ ನೀಡಿದೆ.
‘ಹಣ ಅಕ್ರಮ ವರ್ಗಾವಣೆ ಮತ್ತು ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್ ಉಪಕರಣಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಕೆಲವು ಸಿನಿಮಾ ನಿರ್ಮಾಣ ಸಂಸ್ಥೆಗಳು ತೆರಿಗೆ ವಿನಾಯಿತಿ ಪಡೆಯಲು, ಸಿನಿಮಾದಿಂದ ಬಂದ ಆದಾಯವು ಕಡಿಮೆ ಎಂದು ತೋರಿಸಿದ್ದನ್ನು ಪತ್ತೆಹಚ್ಚಲಾಗಿದೆ’ ಎಂದು ಹೇಳಿದೆ.
ಅಕ್ರಮವಾಗಿ ಸಂಗ್ರಹಿಸಿದ ಆದಾಯವನ್ನು ಅಘೋಷಿತ ಹೂಡಿಕೆಗೆ ಮತ್ತು ಅಘೋಷಿತ ಪಾವತಿಗೆ ಬಳಕೆ ಮಾಡಲಾಗಿದೆ ಎಂದು ಹೇಳಿದೆ.
ಚಿತ್ರಮಂದಿರಗಳಿಂದ ‘ದಾಖಲೆಗಳನ್ನು ನಿರ್ವಹಿಸದೆಯೇ ಹಣ’ವನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಿನಿಮಾ ವಿತರಕರಿಂದ ವಶಪಡಿಸಿಕೊಂಡ ದಾಖಲೆಗಳಿಂದ ತಿಳಿದುಬಂದಿದೆ. ‘ಚಿತ್ರಮಂದಿರಗಳಿಂದ ಕಡಿಮೆ ಆದಾಯ ಬಂದಿದೆ’ ಎಂದು ತೋರಿಸಲಾಗುತ್ತದೆ. ಇದಕ್ಕಾಗಿ ವಿತರಕರು ಸಿಂಡಿಕೇಟ್‌ವೊಂದನ್ನು ರಚಿಸಿಕೊಂಡಿದ್ದಾರೆ ಎಂದು ಸಾಕ್ಷ್ಯಗಳು ಹೇಳುತ್ತಿವೆ ಎಂದು ಸಿಬಿಡಿಟಿ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.