ಮಂಗಳವಾರ, ಸೆಪ್ಟೆಂಬರ್ 21, 2021
22 °C

ಮುಂಬೈನಲ್ಲಿ ಹುಸಿ ಬಾಂಬ್‌ ಕರೆ; ಮೂವರ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಇಲ್ಲಿನ ಮೂರು ರೈಲ್ವೆ ನಿಲ್ದಾಣಗಳು ಮತ್ತು ಬಾಲಿವುಡ್‌ನ ಖ್ಯಾತ ನಟ ಅಮಿತಾಭ್‌ ಬಚ್ಚನ್‌ ಅವರ ನಿವಾಸದಲ್ಲಿ ಬಾಂಬ್‌ ಇಟ್ಟಿರುವುದಾಗಿ ಹುಸಿ ಕರೆ ಮಾಡಿದ್ದ ಮೂವರನ್ನು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ರಾತ್ರಿ 9.45ರ ಸುಮಾರಿಗೆ ಮುಂಬೈ ಪೊಲೀಸ್‌ನ ಮುಖ್ಯ ನಿಯಂತ್ರಣ ಕೊಠಡಿಗೆ ಅನಾಮಧೇಯ ಕರೆಯೊಂದು ಬಂದಿತ್ತು. ಕರೆ ಮಾಡಿದ್ದ ವ್ಯಕ್ತಿ, ‘ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ), ಬೈಕುಲ್ಲಾ, ದಾದರ್ ರೈಲ್ವೆ ನಿಲ್ದಾಣಗಳು ಮತ್ತು ಜುಹುದಲ್ಲಿನ ಮೆಗಾಸ್ಟಾರ್ ಅಮಿತಾಭ್‌ ಬಚ್ಚನ್ ಅವರ ಬಂಗಲೆಯಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಹೇಳಿದ್ದ‘ ಎಂಬುದಾಗಿ ಪೊಲೀಸರು ತಿಳಿಸಿದರು.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ರೈಲ್ವೆ ಪೊಲೀಸ್, ರೈಲ್ವೆ ರಕ್ಷಣಾ ಪಡೆ ಹಾಗೂ ಬಾಂಬ್‌ ನಿಷ್ಕ್ರಿಯ ದಳ ಹಾಗೂ ಶ್ವಾನದೊಳ ದೊಂದಿಗೆ ಮೂರು ರೈಲ್ವೆ ನಿಲ್ದಾಣಗಳು ಮತ್ತು ಅಮಿತಾಭ್‌ ನಿವಾಸದ ಜೊತೆಗೆ ಸುತ್ತಮುತ್ತಲಿನ ಸ್ಥಳಗಳಲ್ಲಿ ಶೋಧಕಾರ್ಯ ಕೈಗೊಂಡರು. ಆದರೆ, ಕಾರ್ಯಾಚರಣೆಯಲ್ಲಿ ಎಲ್ಲಿಯೂ ಅನುಮಾನಸ್ಪದ ವಸ್ತುಗಳು ಕಂಡು ಬರಲಿಲ್ಲ. 

ನಂತರ, ಪೊಲೀಸರು ಕರೆ ಮಾಡಿದವರ ಮೊಬೈಲ್ ಸಂಖ್ಯೆಯನ್ನು ಟ್ರ್ಯಾಕ್ ಮಾಡಿದಾಗ, ಕರೆ ಮಾಡಿದ ವ್ಯಕ್ತಿ ಠಾಣೆ ಜಿಲ್ಲೆಯ ಮುಂಬ್ರಾ ಬಳಿಯ ಶಿಲ್ ಫಟಾ ಪ್ರದೇಶದಲ್ಲಿದ್ದಾನೆ ಎಂದು ಗೊತ್ತಾಯಿತು. ಕೊನೆಗೂ ಹುಸಿ ಕರೆ ಮಾಡಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ಬಂಧಿತರಲ್ಲಿ ಒಬ್ಬ ವ್ಯಕ್ತಿ ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಟ್ರಕ್ ಚಾಲಕ. ಅವನೊಬ್ಬ ಮದ್ಯವ್ಯಸನಿ ಎಂದು ತಿಳಿದುಬಂದಿದೆ. ಆತನ ಜೊತೆಗಿದ್ದ ಮತ್ತಿಬ್ಬರನ್ನು ಬಂಧಿಸಿದ್ದು, ಅವರೆಲ್ಲ ಒಟ್ಟಿಗೆ ಸೇರಿ ಮದ್ಯ ಸೇವಿಸುವಾಗ ಹುಸಿ ಕರೆ ಮಾಡಿರಬಹುದು ಎಂದು ಶಂಕಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು