ಜಮ್ಮು–ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ನೀಡಲು ಗುಲಾಂ ನಬಿ ಆಜಾದ್ ಆಗ್ರಹ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ಕಲ್ಪಿಸಲು ಮಸೂದೆ ಮಂಡಿಸುವಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ರಾಜ್ಯಸಭೆಯಲ್ಲಿ ಬುಧವಾರ ಒತ್ತಾಯಿಸಿದರು.
ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಜಮ್ಮು ಮತ್ತು ಕಾಶ್ಮೀರ ಪ್ರಗತಿಯಾಗಬೇಕಾದರೆ ಮತ್ತು ಗಡಿಯಲ್ಲಿನ ಶತ್ರುಗಳ ವಿರುದ್ಧ ಹೋರಾಟ ನಡೆಸಬೇಕಾದರೆ ನಮ್ಮ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಮತ್ತು ಪ್ರೀತಿಯಿಂದ ಕಾಣಬೇಕು’ ಎಂದು ಹೇಳಿದರು.
‘ರಾಜ್ಯದ ಸ್ಥಾನಮಾನ ನೀಡಿದ ಬಳಿಕವೇ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸಬೇಕು. ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಪಂಜಾಬ್ ಸೇರಿದಂತೆ ಈಶಾನ್ಯ ಮತ್ತು ಗಡಿ ಪ್ರದೇಶಗಳಲ್ಲಿನ ಜನರ ಆಶಯದ ವಿರುದ್ಧ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಬಾರದು. ಬೇರೆ ರಾಜ್ಯಗಳ ಜನರಿಗೆ ಜಮೀನು ಖರೀದಿಸಲು ಅವಕಾಶ ಕಲ್ಪಿಸಿರುವುದರಿಂದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಜನತೆ ಈಗ ಸಂತೋಷದಿಂದ ಬದುಕು ಸಾಗಿಸುತ್ತಿಲ್ಲ’ ಎಂದರು.
ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಿರುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ‘ರಾಜ್ಯದ ಸ್ಥಾನಮಾನ ಇದ್ದಾಗಲೇ ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಈಗಿನ ಪರಿಸ್ಥಿತಿಗಿಂತಲೂ 100 ಪಟ್ಟು ಅತ್ಯುತ್ತಮವಾಗಿತ್ತು. ಭಯೋತ್ಪಾದನೆ ಚಟುವಟಿಕೆಗಳು ಕಡಿಮೆಯಾಗಿದ್ದವು. ಅಭಿವೃದ್ಧಿ ಕಾರ್ಯಗಳು ಸಹ ವೇಗವಾಗಿ ನಡೆಯುತ್ತಿದ್ದವು’ ಎಂದು ಪ್ರತಿಪಾದಿಸಿದರು.
‘ಕಾಶ್ಮಿರದಲ್ಲಿ ಪ್ರವಾಸೋದ್ಯಮ ಸಂಪೂರ್ಣ ನಾಶವಾಗಿದೆ. ಕಳೆದ ಎರಡು ವರ್ಷಗಳಿಂದ ಶಾಲೆ ಮತ್ತು ಕಾಲೇಜುಗಳು ಮುಚ್ಚಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣವೂ ಸಂಪೂರ್ಣ ಕುಂಠಿತಗೊಂಡಿದೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.