ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕ್ರೀದ್‌: ಗಡಿಯಲ್ಲಿ ಯೋಧರ ಸಿಹಿ ವಿನಿಮಯ

ಕೇರಳದಲ್ಲಿ ಸರಳ ಆಚರಣೆ
Last Updated 21 ಜುಲೈ 2021, 13:20 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಗಡಿಯುದ್ದಕ್ಕೂ ವಿವಿಧೆಡೆ ಗಡಿಭದ್ರತಾ ಪಡೆ (ಬಿಎಸ್ಎಫ್‌) ಮತ್ತು ಪಾಕಿಸ್ತಾನ ರೇಂಜರ್ಸ್‌ ಯೋಧರು ಬುಧವಾರ ‘ಈದ್‌ ಉಲ್ ಅದಾ’ ಹಬ್ಬದ ನಿಮಿತ್ತ ‍ಪರಸ್ಪರ ಸಿ‌ಹಿ ವಿನಿಮಯ ಮಾಡಿಕೊಂಡರು.

2019ರ ನಂತರ ಹೀಗೆ ಸಿಹಿ ವಿನಿಮಯ ಆಗುತ್ತಿರುವುದು ಇದೇ ಮೊದಲು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ2019ರ ಆ.5ರಂದು ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಬಳಿಕ, ಅದಕ್ಕೂ ಹಿಂದಿನವರೆಗೂ ಚಾಲ್ತಿಯಲ್ಲಿದ್ದ ಸಂಪ್ರದಾಯವನ್ನು ಪಾಕಿಸ್ತಾನದ ಯೋಧರು ಕೈಬಿಟ್ಟಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ‌ಬಿಎಸ್‌ಎಫ್‌ ವಕ್ತಾರರು, ‘ಈದ್‌ ನಿಮಿತ್ತ ಉಭಯ ದೇಶಗಳ ಯೋಧರು ಪಂಜಾಬ್‌ನ ಅಟ್ಟರಿಯ ಜಂಟಿ ಚೆಕ್‌ಪೋಸ್ಟ್‌ ಬಳಿ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ. ವಾಗಾ ಗಡಿ, ರಾಜಸ್ಥಾನದ ಗಡಿಯಲ್ಲೂ ಸಿಹಿ ವಿನಿಮಯವಾಗಿದೆ’ ಎಂದು ತಿಳಿಸಿದರು.

ಕಳೆದ ವರ್ಷ ಕೋವಿಡ್ ‍ಪರಿಸ್ಥಿತಿಯ ಕಾರಣದಿಂದಾಗಿ ಈ ಪದ್ಧತಿಯನ್ನು ಕೈಬಿಡಲಾಗಿತ್ತು. ಜಮ್ಮು‌, ಪಂಜಾಬ್‌, ರಾಜಸ್ಥಾನ, ಗುಜರಾತ್‌ಗೆ ಹೊಂದಿಕೊಂಡ 2,290 ಕಿ.ಮೀ ಉದ್ದದ ಭಾರತ–ಪಾಕ್‌ ಗಡಿಯಲ್ಲಿ ಬಿಎಸ್‌ಎಫ್‌ ಕಾವಲಿದೆ.

ದೀಪಾವಳಿ ಹಬ್ಬ, ಸ್ವಾತಂತ್ರ್ಯ ದಿನ, ಗಣರಾಜ್ಯ ದಿನ, ಬಿಎಸ್‌ಎಫ್‌ ಸ್ಥಾಪನಾ ದಿನವಾದ ಡಿಸೆಂಬರ್ 1, ಪಾಕಿಸ್ತಾನದ ಸ್ವಾತಂತ್ರ್ಯ ದಿನವಾದ ಆಗಸ್ಟ್‌ 14ರಂದೂ ಗಡಿಯಲ್ಲಿ ಯೋಧರು ಸಿಹಿ ವಿನಿಮಯ ಮಾಡಿಕೊಳ್ಳಲಿದ್ದಾರೆ.

ಕೇರಳದಲ್ಲಿ ಸರಳ ಆಚರಣೆ

ತಿರುವನಂತಪುರ ವರದಿ: ಕೋವಿಡ್ ಸೋಂಕಿನ ಪರಿಸ್ಥಿತಿಯಿಂದಾಗಿ ಮುಸಲ್ಮಾನರು ಬುಧವಾರ ಕೇರಳದಾದ್ಯಂತ ಸರಳವಾಗಿ ಬಕ್ರೀದ್‌ ಹಬ್ಬವನ್ನು ಆಚರಿಸಿದರು. ಆಚರಣೆಯು ಬಹುತೇಕ ಮನೆಗಳಿಗೇ ಸೀಮಿತವಾಗಿತ್ತು.

ಸಾಮೂಹಿಕ ಪ್ರಾರ್ಥನೆ, ಸಮುದ್ರ ತೀರದಲ್ಲಿ ಪ್ರಾರ್ಥನೆಗಳು ಇರಲಿಲ್ಲ. ಕೋವಿಡ್‌ 2ನೇ ಅಲೆ ಗಂಭೀರವಾಗಿರುವ ಕಾರಣ ಸರ್ಕಾರ ಸಾರ್ವಜನಿಕ ಆಚರಣೆಯ ವಿರುದ್ಧ ವಿವಿಧ ನಿರ್ಬಂಧಗಳನ್ನು ಹೇರಿದೆ.

ಕೋವಿಡ್ ಮಾರ್ಗಸೂಚಿಗಳಿಗೆ ಅನುಸಾರವಾಗಿ ಕೇವಲ 40 ಜನರಷ್ಟೇ ಸೇರಿ ಪ್ರಾರ್ಥನೆಯನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಬಹುತೇಕ ಕುಟುಂಬಗಳು ಮನೆಯಲ್ಲಿಯೇ ಉಳಿದರು. ಹಬ್ಬದ ನಿಮಿತ್ತ ಆತ್ಮೀಯರನ್ನು ಭೇಟಿಯಾಗಿ ಶುಭ ಕೋರುವ ಚಿತ್ರಣಗಳು ವಿರಳವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT