ಮತಕ್ಕಾಗಿ ಬಿಎಸ್ಎಫ್ ಮೂಲಕ ಗಡಿ ಗ್ರಾಮಗಳ ಮೇಲೆ ಬಿಜೆಪಿ ಒತ್ತಡ: ಟಿಎಂಸಿ ಆರೋಪ

ಕೊಲ್ಕತ್ತಾ: ರಾಜ್ಯದ ಗಡಿ ಪ್ರದೇಶದ ಜನರಿಗೆ ನಿರ್ದಿಷ್ಟ ರಾಜಕೀಯ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ಗಡಿ ಭದ್ರತಾ ಪಡೆ ಬೆದರಿಕೆ ಹಾಕುತ್ತಿದೆ ಎಂದು ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಆರೋಪಿಸಿದೆ.
ಗುರುವಾರ ಭಾರತದ ಚುನಾವಣಾ ಆಯೋಗದ (ಇಸಿಐ) ಪೂರ್ಣ ಪೀಠವನ್ನು ಭೇಟಿಯಾಗಿರುವ ಟಿಎಂಸಿ ನಾಯಕರು ಈ ಸಂಬಂಧ ದೂರು ಹೇಳಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ನೇತೃತ್ವದ ಚುನಾವಣಾ ಆಯೋಗದ ಪೂರ್ಣ ಪೀಠ ಎರಡು ದಿನಗಳ ಭೇಟಿಗಾಗಿ ಬುಧವಾರ ಸಂಜೆ ಪಶ್ಚಿಮ ಬಂಗಾಳಕ್ಕೆ ಆಗಮಿಸಿದೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಇನ್ನಷ್ಟೇ ಘೋಷಣೆ ಆಗಬೇಕಿದೆ.
'ಗಡಿ ಪ್ರದೇಶಗಳಲ್ಲಿ ಬಿಎಸ್ಎಫ್ ಪಡೆ ಮತದಾರರಿಗೆ ಬೆದರಿಕೆ ಹಾಕುತ್ತಿದೆ ಎಂದು ನಾವು ಚುನಾವಣೆ ಆಯೋಗದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅರೆಸೈನಿಕ ಪಡೆಗಳ ಅಧಿಕಾರಿಗಳು ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ನಿರ್ದಿಷ್ಟ ರಾಜಕೀಯ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ಜನರನ್ನು ಅವರು ಒತ್ತಾಯಿಸುತ್ತಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ. ಇದು ಅಪಾಯಕಾರಿ ಬೆಳವಣಿಗೆ. ಚುನಾವಣಾ ಆಯೋಗ ಇದನ್ನು ಪರಿಶೀಲಿಸಬೇಕು,' ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥೊ ಚಟರ್ಜಿ ಹೇಳಿದ್ದಾರೆ.
ಇನ್ನೊಂದೆಡೆ ಸುದ್ದಿಸಂಸ್ಥೆ, ಎಎನ್ಐ ಜೊತೆಗೆ ಪ್ರತ್ಯೇಕವಾಗಿ ಮಾತನಾಡಿರುವ ಪಾರ್ಥೊ ಚಟರ್ಜಿ, 'ಗಡಿ ಗ್ರಾಮಗಳಿಗೆ ಬಿಜೆಪಿಯು ಬಿಎಸ್ಎಫ್ ಪಡೆಗಳನ್ನು ರವಾನಿಸುತ್ತಿದೆ. ಈ ಮೂಲಕ ಅಲ್ಲಿನ ಜನರನ್ನು ಬಿಜೆಪಿಗೇ ಮತ ನೀಡಬೇಕು ಎಂದು ಬೆದರಿಸುತ್ತಿದೆ. ಇದು ನನ್ನ ಆರೋಪ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಚುನಾವಣಾ ಯೋಗ ಹೇಳಿದೆ,' ಎಂದು ಹೇಳಿದ್ದಾರೆ.
ಕರ್ತವ್ಯನಿಷ್ಠೆಗೆ ಬದ್ಧವಾಗಿದ್ದೇವೆ: ಬಿಎಸ್ಎಫ್
ಬಿಎಸ್ಎಫ್ ಗಡಿ ಕಾವಲು ಪಡೆ. ಹಿಂದೆ ಮತ್ತು ಇಂದು ನಮ್ಮ ಅಂತರರಾಷ್ಟ್ರೀಯ ಗಡಿಗಳನ್ನು ಪ್ರಾಮಾಣಿಕತೆ ಮತ್ತು ಸಮರ್ಪಣೆಯೊಂದಿಗೆ ಬಿಎಸ್ಎಫ್ ಕಾಪಾಡಿದೆ. ಅಕ್ರಮ ಒಳನುಸುಳುವಿಕೆ ಮತ್ತು ಕಳ್ಳಸಾಗಣೆ ಮೇಲೆ ನಾವು ತೀವ್ರ ನಿಗಾ ವಹಿಸಿದ್ದೇವೆ. ಅಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರನ್ನು ನಾವು ಬಂಧಿಸಿದ್ದೇವೆ. ಪಾರ್ಥೊ ಚಟರ್ಜಿ ಮತ್ತು ಫಿರ್ಹಾದ್ ಹಕೀಮ್ ಅವರು ಬಿಎಸ್ಎಫ್ ವಿರುದ್ಧದ ಮಾಡಿರುವ ಆರೋಪಗಳು ಆಧಾರರಹಿತ. ಸತ್ಯಕ್ಕೆ ದೂರವಾದದ್ದು. ಬಿಎಸ್ಎಫ್ ತನ್ನ ಕರ್ತವ್ಯನಿಷ್ಠೆಗೆ ಬದ್ಧವಾಗಿದೆ ಎಂದು ಬಿಎಸ್ಎಫ್ ಹೇಳಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.