ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ನಗರ ವಶಕ್ಕೆ ಬಿಎಸ್‌ಪಿ ಯತ್ನ

ಉತ್ತರ ಪ್ರದೇಶ: ಪಕ್ಷಾಂತರಿಗಳಿಂದ ಬಹುಜನ ಸಮಾಜ ಪಕ್ಷಕ್ಕೆ ಪೆಟ್ಟು l ಐದೂ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ
Last Updated 2 ಮಾರ್ಚ್ 2022, 23:15 IST
ಅಕ್ಷರ ಗಾತ್ರ

ಅಂಬೇಡ್ಕರ್ ನಗರ (ಉತ್ತರ ಪ್ರದೇಶ) (ಪಿಟಿಐ): ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ಅಂಬೇಡ್ಕರ್ ನಗರ ಜಿಲ್ಲೆಯ ಐದೂವಿಧಾನಸಭಾ ಕ್ಷೇತ್ರಗಳನ್ನು ಮತ್ತೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಭಾರಿ ಸವಾಲು ಎದುರಿಸುತ್ತಿದೆ. ಪಕ್ಷದ ಹಿರಿಯ ಮುಖಂಡರು ಸಮಾಜವಾದಿ ಪಕ್ಷಕ್ಕೆ ವಲಸೆ ಹೋಗಿರುವುದರಿಂದ ಬಿಎಸ್‌ಪಿಗೆ ಇಲ್ಲಿ ಅಗ್ನಿಪರೀಕ್ಷೆ ಎದುರಾಗಿದೆ.

1995ರಲ್ಲಿ ಮಾಯಾವತಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈಗ ಅಯೋಧ್ಯೆ ಎಂದು ಕರೆಯಲಾಗುವ ಅಂದಿನ ಫೈಜಾಬಾದ್‌ನಿಂದ ಬೇರ್ಪಡಿಸಿ, ಅಂಬೇಡ್ಕರ್ ನಗರ ಜಿಲ್ಲೆಯನ್ನು ಹೊಸದಾಗಿ ಸೃಷ್ಟಿಸಿದ್ದರು. ಸಾಕಷ್ಟು ವರ್ಷಗಳ ಕಾಲ ಮಾಯಾವತಿ ಅವರ ಕೋಟೆ ಎಂದೇ ಕರೆಯಿಸಿಕೊಂಡಿದ್ದ ಈ ಜಿಲ್ಲೆಯ ಮೇಲೆ ಕಳೆದ ಎರಡು ಚುನಾವಣೆಗಳಲ್ಲಿ ಎಸ್‌ಪಿ ಹಾಗೂ ಬಿಜೆಪಿ ಹಿಡಿತ ಸಾಧಿಸಿದ್ದವು.

2012ರ ಚುನಾವಣೆಯಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿರುವಕಥೇರಿ, ಅಕ್ಬರಪುರ, ಜಲಾಲಪುರ, ತಾಂಡಾ ಮತ್ತು ಅಲಾಪುರ ವಿಧಾನಸಭಾ ಕ್ಷೇತ್ರಗಳಿಂದ ಬಿಎಸ್‌ಪಿಯನ್ನು ಸಮಾಜವಾದಿ ಪಕ್ಷ ಹೊರಗಟ್ಟಿತ್ತು. ಆದರೆ 2017ರಲ್ಲಿ ಈ ಸಮೀಕರಣ ಬದಲಾಯಿತು. ಐದರ ಪೈಕಿ ಬಿಜೆಪಿ ಎರಡು ಕ್ಷೇತ್ರಗಳನ್ನು ಗೆದ್ದುಕೊಂಡಿತು. ಉಳಿದ ಮೂರು ಮಾಯಾವತಿ ಅವರ ಪಕ್ಷದ ಪಾಲಾದವು.

ಈ ಬಾರಿಯ ಚುನಾವಣೆಗೂ ಮುನ್ನ ಬಿಎಸ್‌ಪಿಗೆ ದೊಡ್ಡ ಹೊಡೆತ ನೀಡಿದ್ದು ಲಾಲ್‌ಜಿ ವರ್ಮಾ, ರಾಮ್ ಅಚಲ್ ರಾಜ್‌ಭರ್ ಮತ್ತು ರಾಕೇಶ್ ಪಾಂಡೆ ಅವರ ಪಕ್ಷಾಂತರ. ಈ ಮೂವರೂ ಈ ಬಾರಿ ಸಮಾಜವಾದಿ ಪಕ್ಷದ ಟಿಕೆಟ್‌ನಡಿ ಸ್ಪರ್ಧಿಸುತ್ತಿದ್ದಾರೆ. ಬಿಎಸ್‌ಪಿಗೆ ದ್ರೋಹ ಬಗೆದು ಹೊರಹೋಗಿರುವ ಮುಖಂಡರಿಂದ ಪಕ್ಷಕ್ಕೆ ಯಾವುದೇ ನಷ್ಟ ಉಂಟಾಗುವುದಿಲ್ಲ ಎಂದು ಬಿಎಸ್‌ಪಿ ಹೇಳಿಕೊಂಡಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಬುಡಸಮೇತ ಕಿತ್ತು ಹಾಕಲುಸಮಾಜವಾದಿಗಳು ಹಾಗೂ ಅಂಬೇಡ್ಕರ್‌ವಾದಿಗಳು ಕೈಜೋಡಿ ಸಿದ್ದಾರೆ ಎಂದು ಅಖಿಲೇಶ್ ಪ್ರತಿಪಾದಿಸಿದ್ದಾರೆ.

ಲಾಲ್‌ಜಿ ವರ್ಮಾ ಅವರು ಕಥೇರಿ ಕ್ಷೇತ್ರದಲ್ಲಿ ಬಿಎಸ್‌ಪಿಯ ಪ್ರತೀಕ್ ಪಾಂಡೆ ಅವರಿಗೆ ಸವಾಲೊಡ್ಡಿದ್ದಾರೆ. ಬಿಜೆಪಿ ತನ್ನ
ಮಿತ್ರಪಕ್ಷವಾದ ನಿಶಾದ್ ಪಕ್ಷಕ್ಕೆ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದು, ಅವದೀಶ್ ಕುಮಾರ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಇಲ್ಲಿಂದ ಕಣಕ್ಕಿಳಿದಿದ್ದಾರೆ.
ಅಕ್ಬರ್‌ಪುರದಿಂದ ರಾಮ್‌ ಅಚಲ್‌ ರಾಜ್‌ಭರ್ ಅವರು ಕಣಕ್ಕಿಳಿದಿದ್ದಾರೆ. ಚಂದ್ರಪ್ರಕಾಶ್ ವರ್ಮಾ ಅವರಿಗೆ ಬಿಎಸ್‌ಪಿ ಟಿಕೆಟ್ ನೀಡಿದೆ. ಧರ್ಮರಾಜ್ ನಿಶಾದ್ ಅವರನ್ನು ಬಿಜೆಪಿ ಹೆಸರಿಸಿದೆ.

ಅಂಬೇಡ್ಕರ್ ನಗರದ ಮಾಜಿ ಸಂಸದ ರಾಕೇಶ್ ಪಾಂಡೆ ಅವರು ಜಲಾಲ್‌ಪುರದಿಂದ ಎಸ್‌ಪಿ ಟಿಕೆಟ್‌ನಡಿ ಸ್ಪರ್ಧೆಗಿಳಿದಿದ್ದಾರೆ. ಇವರು ಕಳೆದ ಬಾರಿ ಬಿಎಸ್‌ಪಿಯಿಂದ ಗೆದ್ದಿದ್ದರು. ಈ ಬಾರಿ ಬಿಎಸ್‌ಪಿಯ ರಾಜೇಶ್ ಸಿಂಗ್ ಹಾಗೂ ಬಿಜೆಪಿಯ ಸುಭಾಷ್ ರಾಯ್ ಅವರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ.ತಾಂಡಾ ಹಾಗೂ ಅಲಾಪುರದಲ್ಲಿ ಎಸ್‌ಪಿ, ಬಿಎಸ್‌ಪಿ ಹಾಗೂ ಬಿಜೆಪಿ ತೀವ್ರ ಸ್ಪರ್ಧೆ ಒಡ್ಡಿವೆ. ಈ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನೂ ಬಿಜೆಪಿ ಗೆದ್ದುಕೊಳ್ಳಲಿದೆ ಎಂದು ಬಿಜೆಪಿ ಅಭ್ಯರ್ಥಿ ಸುಭಾಷ್ ಚಂದ್ರ ರಾಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಯಾವುದೇ ಅಲೆ ಕಾಣಿಸುತ್ತಿಲ್ಲ’

‘ಹಿರಿಯ ಮುಖಂಡ ಲಾಲ್‌ಜಿ ವರ್ಮಾ ಅವರು ಚುನಾವಣೆ ಹೊಸ್ತಿಲಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿರುವುದರಿಂದ ಜಿಲ್ಲೆಯಲ್ಲಿ ಪಕ್ಷವು ಎಲ್ಲರಿಗಿಂತ ಸ್ವಲ್ಪ ಮುನ್ನಡೆ ಕಾಣಬಹುದು’ ಎಂದು ಔಷಧ ವ್ಯಾಪಾರಿ ಮೋನು ಸಿಂಗ್ ಎಂಬುವರು ಅಭಿಪ್ರಾಯಪಟ್ಟಿದ್ದಾರೆ. ಕ್ಷೇತ್ರದಲ್ಲಿ ಎಸ್‌ಪಿ ಪ್ರಬಲವಾಗಿದೆ ಎಂದು ಭೀಟಿ ಪ್ರದೇಶದ ನಿವಾಸಿ ಭಾಸ್ಕರ್ ಸಿಂಗ್ ಹೇಳುತ್ತಾರೆ.ಎಸ್‌ಪಿ, ಬಿಎಸ್‌ಪಿ ಹಾಗೂ ಬಿಜೆಪಿ ಸ್ಪರ್ಧೆಯಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಎಂದು ಮತ್ತೊಬ್ಬ ನಿವಾಸಿ ಲವಕುಶ್ ಶ್ರೀವಾಸ್ತವ್ ಅಭಿಪ್ರಾಯಪಟ್ಟಿದ್ದಾರೆ. ‘2014, 2017 ಹಾಗೂ 2019ರ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಗಿದ್ದ ಯಾವುದೇ ಅಲೆಯನ್ನು ನಾನು ಈ ಬಾರಿ ನೋಡಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT