ಬುಧವಾರ, ನವೆಂಬರ್ 30, 2022
17 °C

ಸಿಎಂ ಆಗುವ ಕನಸು ನನಸು ಮಾಡಿಕೊಳ್ಳಲಾರದವರು, ನನ್ನನ್ನು ಪಿಎಂ ಮಾಡುವರೇ? –ಮಾಯಾವತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರಪ್ರದೇಶದ ಮುಖ್ಯಮಂತ್ರಿಯಾಗಬೇಕು ಎನ್ನುವ ತಮ್ಮದೇ ಕನಸು ನನಸು ಮಾಡಿಕೊಳ್ಳಲಾರದವರು, ಮತ್ತೊಬ್ಬರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲು ಹೇಗೆ ಸಾಧ್ಯ? ಎಂದು ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು, ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಖಿಲೇಶ್‌ ಯಾದವ್‌ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಮಾಯಾವತಿ ಪ್ರಧಾನಿಯಾಗಬೇಕು ಎಂದು ತಾವು ಬಯಸಿದ್ದಾಗಿ ಅಖಿಲೇಶ್‌ ಹೇಳಿಕೆ ನೀಡಿದ್ದರು. ಇದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಮಾಯಾವತಿ, ಮುಸ್ಲಿಮರು ಹಾಗೂ ಯಾದವ ಸಮುದಾಯದ ಮತಗಳನ್ನು ಹಿಡಿದಿಟ್ಟುಕೊಂಡು, ಹಲವು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡ ನಂತರವೂ.. ಮುಖ್ಯಮಂತ್ರಿಯಾಗಬೇಕು ಎನ್ನುವ ತಮ್ಮದೇ ಕನಸನ್ನು ನನಸು ಮಾಡಿಕೊಳ್ಳಲಾರದ ಎಸ್‌ಪಿ ನಾಯಕ, ಪ್ರಧಾನ ಮಂತ್ರಿಯಾಗಬೇಕು ಎಂಬ ಮತ್ತೊಬ್ಬರ ಕನಸನ್ನು ಹೇಗೆ ಈಡೇರಿಸಬಲ್ಲರು?' ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು, ಉತ್ತರ ಪ್ರದೇಶದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕೇವಲ ಐದು ಸ್ಥಾನಗಳನ್ನು ಗೆದ್ದ ಎಸ್‌ಪಿ, ತಮ್ಮನ್ನು ಪ್ರಧಾನಿಯನ್ನಾಗಿಸಲು ಹೇಗೆ ಸಾಧ್ಯ? ಅವರು (ಅಖಿಲೇಶ್‌) ಇಂತಹ ಸಣ್ಣತನದ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

ಮಣಿಪುರದಲ್ಲಿ ಬಿಎಸ್‌ಪಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದ್ದ ಅಖಿಲೇಶ್‌, ಉತ್ತರ ಪ್ರದೇಶದಲ್ಲಿ ಈ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಬಿಎಸ್‌ಪಿ ನೆರವಾಗಿದೆ. ಆ ಕಾರಣಕ್ಕೆ ಬಿಜೆಪಿಯು ಮಾಯಾವತಿಯವರನ್ನು ರಾಷ್ಟ್ರಪತಿಯನ್ನಾಗಿಸಬಹುದು ಎಂದು ಹೇಳಿದ್ದರು.

ಇದನ್ನೂ ಓದಿ: ರಾಷ್ಟ್ರಪತಿ ಆಗೋದು ಬೇಕಿಲ್ಲ, ನನ್ನದೇನಿದ್ದರೂ ಪ್ರಧಾನಿಯಾಗುವ ಗುರಿ: ಮಾಯಾವತಿ

ಇದಕ್ಕೆ ಗುರುವಾರ ಪ್ರತಿಕ್ರಿಯೆ ನೀಡಿದ್ದ ಮಾಯಾವತಿ, ತಮಗೆ ಭಾರತದ ರಾಷ್ಟ್ರಪತಿಯಾಗುವ ಆಸೆಯಿಲ್ಲ. ಈ ದೇಶದ ಪ್ರಧಾನಿಯಾಗಬೇಕು ಅಥವಾ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರಬೇಕು ಎಂಬುದೇ ತಮ್ಮ ಪ್ರಮುಖ ಗುರಿ ಎಂದಿದ್ದರು.

ಮಾಯಾವತಿಯವರ 'ಪ್ರಧಾನಿಯಾಗುವ ಗುರಿ' ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ್ದ ಅಖಿಲೇಶ್‌, ಅವರ ಹೇಳಿಕೆ ಬಗ್ಗೆ ಸಂತಸವಿದೆ. ನಾನೂ ಸಹ ಅದನ್ನು (ಮಾಯಾವತಿ ಪ್ರಧಾನಿಯಾಗುವುದನ್ನು) ಬಯಸಿದ್ದೆ. ಆ ಕಾರಣದಿಂದಲೇ 2019ರ ಲೋಕಸಭೆ ಚುನಾವಣೆ ವೇಳೆ ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೆವು ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಮಾಯಾವತಿ ಇಂದು (ಶುಕ್ರವಾರ) ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು