ಶನಿವಾರ, ಏಪ್ರಿಲ್ 1, 2023
31 °C

‘ಕೈ’ಗೆ ಹುರುಪು, ಕಮಲಕ್ಕೆ ಮಿಶ್ರಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

EVM PTI

ನವದೆಹಲಿ: ಲೋಕಸಭೆಯ ಮೂರು ಕ್ಷೇತ್ರಗಳು ಮತ್ತು ವಿವಿಧ ರಾಜ್ಯಗಳ ವಿಧಾನಸಭೆಯ 29 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶವು ಕಾಂಗ್ರೆಸ್‌ಗೆ ಹುರುಪು ತುಂಬಿದ್ದರೆ, ಬಿಜೆಪಿಗೆ ಮಿಶ್ರಫಲ ಕೊಟ್ಟಿದೆ.

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯಿಂದ ಕಾಂಗ್ರೆಸ್‌ ಕಸಿದುಕೊಂಡಿದೆ. ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳೂ ಕಾಂಗ್ರೆಸ್‌ ಪಾಲಾಗಿವೆ. ಇದು ಆಡಳಿತಾರೂಢ ಬಿಜೆಪಿಗೆ ದೊಡ್ಡಹೊಡೆತ. ರಾಜಸ್ಥಾನದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಗಳಿಸಿದೆ. ಮಧ್ಯಪ್ರದೇಶದ ರಾಯ್‌ಗಾಂವ್‌  ಮತ್ತು ಮಹಾರಾಷ್ಟ್ರದ ದೇಗಲುರ್‌ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದಿದೆ. 

ಮಧ್ಯಪ್ರದೇಶದ ಖಂಡ್ವಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಇಲ್ಲಿ ಉಪಚುನಾವಣೆ ನಡೆದ ವಿಧಾನಸಭೆಯ ಎರಡು
ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ. ಉಪ ಚುನಾವಣೆ ನಡೆದ ಅಸ್ಸಾಂನ ಐದೂ ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಬಾಚಿಕೊಂಡಿವೆ. ಬಿಜೆಪಿ ಮೂರು ಮತ್ತು ಯುನೈಟೆಡ್‌ ಪೀಪಲ್ಸ್‌ ಪಾರ್ಟಿ ಲಿಬರಲ್‌ ಎರಡು ಕ್ಷೇತ್ರಗಳಲ್ಲಿ ಗೆದ್ದಿವೆ.

ತೆಲಂಗಾಣದ ಹುಜೂರಾಬಾದ್‌ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ, ಬಿಜೆಪಿಯ ಈಟಾಲ ರಾಜೇಂದರ್‌ ಗೆದ್ದಿದ್ದಾರೆ. ಅವರು ಟಿಆರ್‌ಎಸ್‌ ತೊರೆದು ಬಿಜೆಪಿ ಸೇರಿದ್ದರು. ದಾದ್ರಾ ಮತ್ತು ನಗರ್‌ ಹವೇಲಿ ಲೋಕಸಭಾ ಕ್ಷೇತ್ರದಲ್ಲಿ ಶಿವಸೇನಾದ ಮೋಹನ್‌ ದೇಲ್ಕರ್‌ ಜಯಗಳಿಸಿದ್ದಾರೆ. ಮೇಘಾಲಯದ ಮೂರು ಕ್ಷೇತ್ರಗಳಲ್ಲಿ ಆಡಳಿತಾರೂಢ ಎನ್‌ಪಿಪಿ ಮತ್ತು ಯುಪಿಪಿ ಗೆದ್ದಿವೆ. ಮಿಜೋರಾಂನ ಒಂದು ಕ್ಷೇತ್ರವು ಮಿಜೋ ನ್ಯಾಷನಲ್‌ ಫ್ರಂಟ್‌ ಪಾಲಾಗಿದೆ. 

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಭಾರಿ ಗೆಲುವು ಸಿಕ್ಕಿದೆ. ಉಪಚುನಾವಣೆ ನಡೆದ ನಾಲ್ಕೂ ಕ್ಷೇತ್ರಗಳಲ್ಲಿ ಟಿಎಂಸಿ ಗೆದ್ದಿದೆ. ದಿನ್‌ಹತ ಮತ್ತು ಶಾಂತಿಪುರ ಕ್ಷೇತ್ರಗಳನ್ನು ಬಿಜೆಪಿಯಿಂದ ಕಸಿದುಕೊಂಡಿದೆ. ಈಗ ಕೇಂದ್ರ ಗೃಹ ಖಾತೆಯರಾಜ್ಯ ಸಚಿವರಾಗಿರುವ ನಿಸಿತ್ ಪ್ರಮಾಣಿಕ್‌ ಅವರು ಕಳೆದ ಚುನಾವಣೆಯಲ್ಲಿ ದಿನ್‌ಹತ ಕ್ಷೇತ್ರದಲ್ಲಿ ಅಲ್ಪ ಅಂತರದಿಂದ ಗೆದ್ದಿದ್ದರು. ಆದರೆ, ಈ ಬಾರಿ ಟಿಎಂಸಿ ಇಲ್ಲಿ 1.64 ಲಕ್ಷ ಮತಗಳ ದಾಖಲೆ ಅಂತರದಿಂದ ಗೆಲುವು ಸಾಧಿಸಿದೆ. ಇನ್ನೆರಡು ಕ್ಷೇತ್ರಗಳಲ್ಲಿ ಟಿಎಂಸಿ ಶಾಸಕರೇ ಹಿಂದೆ ಇದ್ದರು. 294 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿಎಂಸಿಯ ಬಲವು ಈಗ 215ಕ್ಕೆ ಏರಿದೆ. ಬಿಜೆಪಿ ಬಲವು 77ರಿಂದ 75ಕ್ಕೆ ಕುಸಿದಿದೆ. ನಾಲ್ಕೂ ಕ್ಷೇತ್ರಗಳಲ್ಲಿ ಟಿಎಂಸಿ ಶೇ 75.02ರಷ್ಟು ಮತ ಪಡೆದಿದೆ. ಬಿಜೆಪಿ ಪಡೆದ ಮತಗಳ ಪ್ರಮಾಣ ಶೇ 14.48ರಷ್ಟು. 

ಹರಿಯಾಣದ ಎಲ್ಲೆನಾಬಾದ್‌ ಉಪಚುನಾವಣೆಯಲ್ಲಿ ಐಎನ್‌ಎಲ್‌ಡಿಯ ಅಭಯ್‌ ಸಿಂಗ್ ಚೌತಾಲಾ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ ಗೆದ್ದಿದ್ದಾರೆ. ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಚೌತಾಲಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅಲ್ಲಿ ಉಪಚುನಾವಣೆ ನಡೆದಿತ್ತು. 

ಬಿಹಾರದಲ್ಲಿ ಉಪಚುನಾವಣೆ ನಡೆದ ಎರಡೂ ಕ್ಷೇತ್ರಗಳಲ್ಲಿ ಜೆಡಿಯು ಗೆದ್ದಿದೆ. ಆಂಧ್ರ ಪ್ರದೇಶದ ಒಂದು ಕ್ಷೇತ್ರದಲ್ಲಿ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಗೆಲುವು ಸಾಧಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು