ಸೋಮವಾರ, ಜುಲೈ 4, 2022
21 °C
ಸಿಎಎ, ಎನ್‌ಆರ್‌ಸಿ ಜಾರಿಯಿಂದ ತೊಂದರೆ ಆಗದು ಎಂದ ಆರ್‌ಎಸ್‌ಎಸ್‌ ಮುಖ್ಯಸ್ಥ

ಸಿಎಎ, ಎನ್‌ಆರ್‌ಸಿ ಜಾರಿಯಿಂದ ತೊಂದರೆ ಆಗದು: ಮುಸ್ಲಿಮರಿಗೆ ಮೋಹನ್‌ ಭಾಗವತ್‌ ಅಭಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಬಗ್ಗೆ ಭಾರತೀಯ ಮುಸ್ಲಿಮರು ಆತಂಕ ಪಡಬೇಕಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು.

‘ಎನ್‌ಆರ್‌ಸಿ, ಸಿಎಎ–ಅಸ್ಸಾಂ ಮತ್ತು ಇತಿಹಾಸದ ರಾಜಕಾರಣ’ ಶೀರ್ಷಿಕೆಯ ಕೃತಿಯನ್ನು ಬಿಡುಗಡೆ ಮಾಡಿ ಭಾಗವತ್‌ ಬುಧವಾರ ಮಾತನಾಡಿದರು. ‘ಹಿಂದೂ–ಮುಸ್ಲಿಮರನ್ನು ಒಡೆಯುವ ಉದ್ದೇಶವು ಪೌರತ್ವ ನೋಂದಣಿಗಾಗಲೀ ಪೌರತ್ವ ತಿದ್ದುಪಡಿ ಕಾಯ್ದೆಗಾಗಲೀ ಇಲ್ಲ. ಇವುಗಳಿಂದ ದೇಶದ ಯಾವ ಮುಸ್ಲಿಮರಿಗೂ ತೊಂದರೆಯಾಗದು. ಆದರೆ, ರಾಜಕೀಯ ಲಾಭಕ್ಕಾಗಿ ಕೆಲವರು ಇದಕ್ಕೆ ಕೋಮು ಬಣ್ಣ ಹಚ್ಚುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯಾನಂತರ, ಅಲ್ಪಸಂಖ್ಯಾತರ ಹಿತ ಕಾಯಲಾಗುತ್ತದೆ ಎಂದು ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಹೇಳಿದ್ದರು. ಭಾರತವು ಹಾಗೆಯೇ ನಡೆದುಕೊಂಡು ಬಂದಿದೆ ಕೂಡ. ಇನ್ನು ಮುಂದೆಯೂ ಅದು ಮುಂದುವರಿಯುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾವ ಮುಸ್ಲಿಮರಿಗೂ ಹಾನಿಯಾಗದು ಎಂದರು.

ಎನ್‌ಆರ್‌ಸಿ ಬಗ್ಗೆ ಮಾತನಾಡಿದ ಅವರು, ಪ್ರತಿಯೊಂದು ದೇಶಕ್ಕೂ ಅದರ ಅಧಿಕೃತ ನಾಗರಿಕರು ಯಾರು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಇದೆ. ಹೀಗಾಗಿ, ದೇಶದಲ್ಲಿ ಅನಧಿಕೃತ
ವಾಗಿ ನೆಲೆಸಿದವರನ್ನು ಪತ್ತೆ ಮಾಡಿ, ದೇಶದ ನಾಗರಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಿಕೊಡುವುದು ಸರ್ಕಾರದ ಕೆಲಸ ಎಂದರು.

‘ದೇಶ ವಿಭಜನೆಯ ನಂತರ, ಭಾರತವು ದೇಶದ ಅಲ್ಪಸಂಖ್ಯಾತರ ಬಗೆಗೆ ಕಾಳಜಿ ವಹಿಸಿತು. ಆದರೆ, ಪಾಕಿಸ್ತಾನವು ಆ ಕೆಲಸವನ್ನು ಮಾಡಲಿಲ್ಲ. ಹೀಗಾಗಿ ಅಲ್ಲಿಂದ ಸಾವಿರಾರು ಸಂಖ್ಯೆಯಲ್ಲಿ ಹಿಂದೂ, ಸಿಖ್‌ ಹಾಗೂ ಜೈನ ಕುಟುಂಬಗಳು ಭಾರತಕ್ಕೆ ಬಂದವು. ಪೌರತ್ವ ತಿದ್ದುಪಡಿ ಕಾಯ್ದೆಯು ನೆರೆದೇಶಗಳಲ್ಲಿನ ಅಂಥ ನಿರಾಶ್ರಿತರ ಬೆಂಬಲಕ್ಕಿದೆಯೇ ಹೊರತು ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆ ಮಾಡದು’ ಎಂದು ಹೇಳಿದರು.

ಒಂದು ವೇಳೆ, ಅನಧಿಕೃತವಾಗಿ ನೆಲೆಸಿದವರದೇ ಸಂಖ್ಯಾ ಪ್ರಾಬಲ್ಯ ಹೆಚ್ಚುತ್ತ ಹೋಗಿ ಚುನಾವಣಾ ರಾಜಕೀಯದಲ್ಲಿ ಹಿಡಿತ ಸಾಧಿಸಿದರೆ, ನಿಜವಾದ ನಿವಾಸಿಗಳು ಖಂಡಿತವಾಗಿಯೂ ಭಯದಲ್ಲಿರಬೇಕಾಗುತ್ತದೆ ಎಂದರು.

ದೇಶಕ್ಕೆ ವ್ಯವಸ್ಥಿತವಾಗಿ ವಲಸೆ ಬರುತ್ತಿರುವ ಮುಸ್ಲಿಮರು ಮತ್ತು ನಿರ್ದಿಷ್ಟ ವಿನ್ಯಾಸದಲ್ಲಿ ಹೆಚ್ಚಳವಾಗುತ್ತಿರುವ ಅವರ ಜನಸಂಖ್ಯೆ ಪ್ರಮಾಣವು ಅಸ್ಸಾಮಿಗರಿಗೂ ಸೇರಿದಂತೆ ದೇಶದ ವಿವಿಧ ಸಮುದಾಯಗಳಿಗೆ ನಿಜಕ್ಕೂ ಆತಂಕಕಾರಿಯಾಗಿದೆ ಎಂದರು.

ಭಾರತವು ವಿವಿಧತೆಯಲ್ಲಿ ಏಕತೆ ಇರುವ ರಾಷ್ಷ್ರವಾಗಿದೆ. ಎಲ್ಲರನ್ನೂ ಒಳಗೊಂಡ ‘ವಸುದೈವ ಕುಟುಂಬಕಂ’  ನೀತಿಯನ್ನು ಪಾಲಿಸುತ್ತಿದ್ದು, ಮುಂದೆಯೂ ಅಂತೆಯೇ ಇರುತ್ತದೆ ಎಂದು ಭಾಗವತ್‌ ಹೇಳಿದರು.

ವೈವಿಧ್ಯದ ಪ್ರತಿಪಾದನೆ

ಈ ನೆಲದ ಐದು ಸಾವಿರ ವರ್ಷಗಳ ನಾಗರಿಕತೆಯನ್ನು ಯಾವುದೋ ಒಂದು ಗುಂಪು ನಿರಾಕರಿಸತೊಡಗಿದರೆ, ಒಂದೇ ಧರ್ಮ, ಭಾಷೆ ಮತ್ತು ಸಾಮಾಜಿಕ ಆಚರಣೆ ಇರಬೇಕು ಎಂದು ಬಯಸಿದರೆ ಸಮಸ್ಯೆ ಆರಂಭವಾಗುತ್ತದೆ ಎಂದು ಭಾಗವತ್‌ ಹೇಳಿದ್ದಾರೆ.

ಹೆಚ್ಚುತ್ತಿರುವ ತಮ್ಮ ಜನಸಂಖ್ಯೆಯನ್ನು ಬಳಸಿಕೊಂಡು ಪ್ರಜಾಸತ್ತಾತ್ಮಕವಾಗಿಯೇ ತಮ್ಮ ಶಕ್ತಿಯನ್ನು ಬಳಸಿಕೊಳ್ಳಲು ಅವರು ಹಿಂದೇಟು ಹಾಕುವುದಿಲ್ಲ. ಅದು ಮೂಲ ನಿವಾಸಿಗಳ ಸಾಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಕ್ಕೆ ಬೆದರಿಕೆಯಾಗುತ್ತದೆ ಎಂದು ಅವರು ವಿವರಿಸಿದ್ದಾರೆ. 

ಭಾರತವು ವೈವಿಧ್ಯತೆಯ ನಾಡು. ಪ್ರತಿ ರಾಜ್ಯವೂ ತನ್ನದೇ ಭಾಷೆ, ಸಂಸ್ಕೃತಿ, ಪದ್ಧತಿಗಳು, ಆಹಾರ ವ್ಯವಸ್ಥೆಯನ್ನು ಹೊಂದಿದೆ. ಇವುಗಳ ನಡುವೆ ಪರಸ್ಪರ ಸಂಪರ್ಕವೂ ಇದೆ. ಅದು ಹಾಗೆಯೇ ಮುಂದುವರಿಯಲಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು