ಮಂಗಳವಾರ, ಆಗಸ್ಟ್ 16, 2022
21 °C
ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಖರೀದಿ ಪ್ರಸ್ತಾವಕ್ಕೆ ಕೇಂದ್ರ ಸಂಪುಟದ ಭದ್ರತಾ ಸಮಿತಿ ಒಪ್ಪಿಗೆ

ದೂರಸಂಪರ್ಕ: ಚೀನಾ ಉಪಕರಣಕ್ಕೆ ಕೊಕ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೂರಸಂಪರ್ಕ ಸೇವಾ ಕಂಪನಿಗಳು ‘ವಿಶ್ವಾಸಾರ್ಹ ಮೂಲ’ಗಳಿಂದಲೇ ಉಪಕರಣಗಳನ್ನು ಖರೀದಿಸಬೇಕು ಎಂಬ ಪ್ರಸ್ತಾವಕ್ಕೆ ಭದ್ರತೆ ಬಗೆಗಿನ ಸಂಪುಟ ಸಮಿತಿಯು ಬುಧವಾರ ಒಪ್ಪಿಗೆ ನೀಡಿದೆ. ಚೀನಾದಿಂದ ದೂರಸಂಪರ್ಕ ಉಪಕರಣಗಳ ಆಮದಿಗೆ ನಿರ್ಬಂಧ ಹೇರುವ ಅವಕಾಶ ಇದರಿಂದ ದೊರೆಯಲಿದೆ ಎಂದು ಹೇಳಲಾಗಿದೆ.  

ರಾಷ್ಟ್ರೀಯ ಭದ್ರತೆಯನ್ನು ಗಮನದಲ್ಲಿ ಇರಿಸಿಕೊಂಡು ದೂರಸಂಪರ್ಕ ಕ್ಷೇತ್ರಕ್ಕೆ ರಾಷ್ಟ್ರೀಯ ಸುರಕ್ಷತಾ ನಿರ್ದೇಶನಗಳನ್ನು (ನ್ಯಾಷನಲ್‌ ಸೆಕ್ಯುರಿಟಿ ಡೈರೆಕ್ಟಿವ್) ರೂಪಿಸಲು ನಿರ್ಧರಿಸಲಾಗಿದೆ. ಅದರ ಪ್ರಕಾರ, ದೇಶದ ದೂರಸಂಪರ್ಕ ಜಾಲದಲ್ಲಿ ಅಳವಡಿಸುವುದಕ್ಕಾಗಿ ‘ವಿಶ್ವಾಸಾರ್ಹ ಮೂಲಗಳು’ (ಕಂ‍ಪನಿಗಳು) ಮತ್ತು ‘ವಿಶ್ವಾಸಾರ್ಹ ಉಪಕರಣ’ಗಳ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸಲಿದೆ ಎಂದು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್‌ ತಿಳಿಸಿದ್ದಾರೆ. 

ದೂರಸಂಪರ್ಕ ಮತ್ತು ವಿದ್ಯುತ್‌ ಕ್ಷೇತ್ರಗಳಲ್ಲಿ ಬಳಕೆಯಾಗುವ ಹಲವು ಉಪಕರಣಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುವುದನ್ನು ಕೇಂದ್ರ ಸರ್ಕಾರವು ಇತ್ತೀಚಿನ ಕೆಲವು ತಿಂಗಳಲ್ಲಿ ನಿಷೇಧಿಸಿದೆ. ರಾಷ್ಟ್ರೀಯ ಸುರಕ್ಷತೆಯನ್ನು ಇದಕ್ಕೆ ಕಾರಣವಾಗಿ ನೀಡಲಾಗಿದೆ. ಗೂಢಚರ್ಯೆ ತಂತ್ರಾಂಶಗಳು ಅಥವಾ ಕುತಂತ್ರಾಂಶಗಳನ್ನು ಈ ಉಪಕರಣಗಳಲ್ಲಿ ಅಳವಡಿಸುವ ಅಪಾಯ ಇದೆ ಎಂಬುದು ಈ ನಿಷೇಧಕ್ಕೆ ಕಾರಣ. 

ಯಾವೆಲ್ಲ ಮೂಲಗಳು ವಿಶ್ವಾಸಾರ್ಹ ಎಂಬುದನ್ನು ರಾಷ್ಟ್ರೀಯ ಭದ್ರತೆಯ ಉಪಸಲಹೆಗಾರರ ನೇತೃತ್ವದ ಸಮಿತಿಯು ನಿರ್ಧರಿಸಲಿದೆ. ನಿಷೇಧಿತ ಮೂಲಗಳ ಪಟ್ಟಿಯನ್ನೂ ಸರ್ಕಾರ ಸಿದ್ಧಪಡಿಸಲಿದೆ. ಇಂತಹ ಕಂಪನಿಗಳಿಂದ ಯಾವುದೇ ಉಪಕರಣ ಖರೀದಿಗೆ ಅವಕಾಶ ಇರುವುದಿಲ್ಲ. 

ದೂರಸಂ‍ಪರ್ಕ ಸೇವಾ ಕಂಪನಿಗಳು ತಮ್ಮ ಜಾಲದಲ್ಲಿ ಈಗಾಗಲೇ ಅಳವಡಿಸಿರುವ ಉಪಕರಣಗಳನ್ನು ಕಡ್ಡಾಯವಾಗಿ ಬದಲಾಯಿಸಬೇಕು ಎಂಬ ಅಂಶವನ್ನು ಈಗ ಅಂಗೀಕರಿಸಲಾದ ನಿರ್ದೇಶನವು ಹೊಂದಿಲ್ಲ ಎಂದು ಪ್ರಸಾದ್‌ ತಿಳಿಸಿದ್ದಾರೆ. ವಾರ್ಷಿಕ ನಿರ್ವಹಣಾ ಗುತ್ತಿಗೆ ಅಥವಾ ಈಗಾಗಲೇ ಪಡೆದುಕೊಂಡಿರುವ ಉಪಕರಣಗಳ ಪರಿಷ್ಕರಣೆಗೆ ಯಾವುದೇ ತೊಡಕು ಇಲ್ಲ ಎಂದು ಅವರು ಹೇಳಿದ್ದಾರೆ.

ಐಎಂಇಐ (ಅಂತರರಾಷ್ಟ್ರೀಯ ಮೊಬೈಲ್‌ ಉಪಕರಣ ಗುರುತು) ಇಲ್ಲದ ಕಾರಣಕ್ಕೆ ಚೀನಾದ ಕೆಲವು ಮೊಬೈಲ್‌ ಉಪಕರಣಗಳ ಆಮದನ್ನು ಸರ್ಕಾರವು ಕಳೆದ ವರ್ಷ ನಿಷೇಧಿಸಿತ್ತು.

ಈ ನಿರ್ದೇಶನಗಳ ಪಾಲನೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ದೂರಸಂಪರ್ಕ ಸಚಿವಾಲಯವು ಪ್ರಕಟಿಸಲಿದೆ. ಹಾಗೆಯೇ, ಈ ನಿರ್ದೇಶನಗಳನ್ನು ದೂರಸಂಪರ್ಕ ಕಂ‍ಪನಿಗಳು ಪಾಲಿಸುತ್ತಿವೆಯೇ ಎಂಬುದರ ಮೇಲೆ ನಿಗಾ ಇರಿಸಲಿದೆ. ಅನುಮೋದನೆ ಪಡೆದುಕೊಂಡ 180 ದಿನಗಳ ಬಳಿಕ ಈ ನಿರ್ದೇಶನಗಳು ಜಾರಿಗೆ ಬರಲಿವೆ. ದೇಶೀಯ ತಯಾರಕರು ‘ವಿಶ್ವಾಸಾರ್ಹ ಮೂಲ’ ವರ್ಗಕ್ಕೆ ಸೇರ್ಪಡೆಯಾಗುವುದಕ್ಕೆ ನಿರ್ದೇಶನವು ಅವಕಾಶ ಕಲ್ಪಿಸಲಿದೆ. 

ತರಂಗಾಂತರ ಹರಾಜು: ₹3.92 ಲಕ್ಷ ಕೋಟಿ ವರಮಾನ ನಿರೀಕ್ಷೆ
ಮುಂದಿನ ಹಂತದ ತರಂಗಾಂತರ (ಸ್ಪೆಕ್ಟ್ರಂ) ಹರಾಜಿಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. 2021ರ ಮಾರ್ಚ್‌ನಲ್ಲಿ ಹರಾಜು ನಡೆಯಲಿದೆ. ತರಂಗಾಂತರಗಳನ್ನು 20 ವರ್ಷಕ್ಕೆ ಹರಾಜು ಮಾಡಲಾಗುವುದು. ಈ ಹರಾಜಿನಿಂದ ₹3.92 ಲಕ್ಷ ಕೋಟಿ ವರಮಾನವನ್ನು ಸರ್ಕಾರ ನಿರೀಕ್ಷಿಸಿದೆ. 

ನಾಲ್ಕು ವರ್ಷಗಳಿಂದ ತರಂಗಾಂತರ ಹರಾಜು ನಡೆದಿಲ್ಲ. ಈ ಬಾರಿಯ ಹರಾಜಿಗೆ 2016ರಲ್ಲಿ ಇದ್ದ ನಿಯಮಗಳೇ ಅನ್ವಯ ಆಗುತ್ತವೆ. ಹರಾಜಿನಲ್ಲಿ ಭಾಗವಹಿಸಲು ಈ ತಿಂಗಳಲ್ಲಿಯೇ ಅರ್ಜಿ ಆಹ್ವಾನಿಸಲಾಗುವುದು ಎಂದು ರವಿಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ. 

ಹರಾಜಿನಲ್ಲಿ ಸ್ಪೆಕ್ಟ್ರಂ ಖರೀದಿಸುವುದರಿಂದ ದೂರಸಂಪರ್ಕ ಕಂಪನಿಗಳು ತಮ್ಮ ಜಾಲಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹೊಸ ಕಂಪನಿಗಳು ದೂರಸಂಪ‍ರ್ಕ ಸೇವಾ ಕ್ಷೇತ್ರಕ್ಕೆ ಬರುವುದಕ್ಕೂ ಅವಕಾಶ ಇದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. 5ಜಿ ಸೇವೆಗಳಿಗಾಗಿ ಗುರುತಿಸಲಾದ ತರಂಗಾಂತರಗಳನ್ನು ಇದರ ಜತೆಯಲ್ಲಿ ಹರಾಜು ಮಾಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.

₹5.22 ಲಕ್ಷ ಕೋಟಿ ಮೌಲ್ಯದ ತರಂಗಾಂತರಗಳ ಹರಾಜಿಗೆ ದೂರಸಂಪರ್ಕ ಇಲಾಖೆಯ ನಿರ್ಧಾರ ಕೈಗೊಳ್ಳುವಿಕೆಯ ಅತ್ಯುನ್ನತ ಸಮಿತಿಯಾದ ಡಿಜಿಟಲ್‌ ಸಂವಹನ ಆಯೋಗವು ಮೇ ತಿಂಗಳಲ್ಲಿ ಒಪ್ಪಿಗೆ ನೀಡಿತ್ತು. ಅದರಲ್ಲಿ 5ಜಿ ತರಂಗಾಂತರಗಳೂ ಸೇರಿವೆ. 

ಕಬ್ಬು ಬೆಳೆಗಾರರಿಗೆ ಸಬ್ಸಿಡಿ
ಕಬ್ಬು ಬೆಳೆಗಾರರಿಗೆ ₹3,500 ಕೋಟಿ ಸಹಾಯಧನ ನೀಡಲು ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. 2020–21ನೇ ವರ್ಷದಲ್ಲಿ 60 ಲಕ್ಷ ಟನ್‌ ಸಕ್ಕರೆಯನ್ನು ರಫ್ತು ಮಾಡಲಾಗುವುದು. ಈ ರಫ್ತಿಗೆ ಕೇಂದ್ರ ಸರ್ಕಾರವು ಸಹಾಯಧನ ನೀಡಲಿದೆ. ಅದನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುವುದು. 

ಸಕ್ಕರೆ ಕಾರ್ಖಾನೆಗಳಲ್ಲಿ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದ ಸಕ್ಕರೆಯ ದಾಸ್ತಾನು ಇದೆ. ಕಾರ್ಖಾನೆಗಳಿಗೆ ಕಬ್ಬು ಪೂರೈಸಿರುವ ರೈತರಿಗೆ ಹಣ ಪಾವತಿ ಆಗಿಲ್ಲ. ಹಾಗಾಗಿ, ಹೆಚ್ಚುವರಿ ದಾಸ್ತಾನು ಇರುವ ಸಕ್ಕರೆಯ ರಫ್ತಿಗೆ ಸರ್ಕಾರವು ಸಹಾಯಧನ ನೀಡಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ. 

ಸಕ್ಕರೆ ಕಾರ್ಖಾನೆಗಳ ಪರವಾಗಿ ಸರ್ಕಾರವೇ ರೈತರ ಖಾತೆಗಳಿಗೆ ಹಣ ಜಮೆ ಮಾಡಲಿದೆ. ಕಬ್ಬು ಪೂರೈಕೆಯ ಬಾಕಿಯನ್ನು ಹೀಗೆ ಚುಕ್ತಾ ಮಾಡಲಾಗುವುದು. ಅದಲ್ಲದೆ, ಹಣ ಉಳಿದರೆ ಅದನ್ನು ಸಕ್ಕರೆ ಕಾರ್ಖಾನೆಗಳಿಗೆ ನೀಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು