ಬುಧವಾರ, ಸೆಪ್ಟೆಂಬರ್ 29, 2021
20 °C
'ಮೂರ್ನಾಲ್ಕು ದಿನಗಳಲ್ಲಿ ಮತ್ತೆ ವರಿಷ್ಠರ ಭೇಟಿ'

ಮುಂದಿನ ಒಂದು ವಾರದೊಳಗೆ ಸಂಪುಟ ವಿಸ್ತರಣೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜ್ಯದಲ್ಲಿ ಪ್ರವಾಹ ಮತ್ತು ಕೊರೊನಾ ತೃತೀಯ ಅಲೆಯ ಆತಂಕ ಇರುವುದರಿಂದ ಮುಂದಿನ ಒಂದು ವಾರದೊಳಗೆ ಸಚಿವ ಸಂಪುಟವನ್ನು ವಿಸ್ತರಿಸಲಾಗುವುದು ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ನಂತರ ಶುಕ್ರವಾರ ಮೊದಲ ಬಾರಿಗೆ ಇಲ್ಲಿಗೆ ಬಂದಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ತ್ವರಿತವಾಗಿ ಸಂಪುಟ ವಿಸ್ತರಣೆ ಮಾಡಬೇಕೆಂದು ಸಂಕ್ಷಿಪ್ತವಾಗಿ ಚರ್ಚೆ ನಡೆಸಲಾಗಿದೆ. ಸಂಪುಟದಲ್ಲಿ ಎಷ್ಟು ಜನ ಇರಲಿದ್ದಾರೆ, ಯಾರೆಲ್ಲ ಸೇರ್ಪಡೆ ಆಗಲಿದ್ದಾರೆ ಎಂಬ ಬಗ್ಗೆ ವಿವರವಾದ ಚರ್ಚೆ ನಡೆಸಲಾಗಿಲ್ಲ ಎಂದು ಅವರು ಹೇಳಿದರು.

‘ಸಚಿವರಿಲ್ಲದೆ ರಾಜ್ಯದ ಸ್ಥಿತಿಗತಿಯ ನಿರ್ವಹಣೆ ಕಷ್ಟಕರವಾಗಲಿದೆ. ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಮನವರಿಕೆ ಮಾಡಿದ್ದೇನೆ. ಅವರಿಂದಲೂ ಸೂಕ್ತ ಸ್ಪಂದನೆ ವ್ಯಕ್ತವಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಮತ್ತೆ ಬಂದು ವರಿಷ್ಠರೊಂದಿಗೆ ಸಮಗ್ರ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ವಿವರಿಸಿದರು.

‘ಮುಖ್ಯವಾಗಿ, ಅನುಭವಿಗಳನ್ನೂ, ಹೊಸತನದ ಚಿಂತನೆಯವರನ್ನೂ ಒಳಗೊಂಡ ಕ್ರಿಯಾಶೀಲ ತಂಡವನ್ನು ಕಟ್ಟಲಿದ್ದೇನೆ. ನಾನು ಆಶಾವಾದಿ, ಆಯಾ ಸನ್ನಿವೇಶದ ಲಾಭ ಪಡೆಯಲಾರೆ ಎಂದೂ ಹೇಳಲಾರೆ’ ಎಂದು ಅವರು ಮಾರ್ಮಿಕವಾಗಿ ನುಡಿದರು.

ಜನಪರ, ದಕ್ಷ, ಸ್ವಚ್ಛ, ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಅಧಿಕಾರಶಾಹಿಗೆ ಚುರುಕು ಮೂಡಿಸಲಾಗುವುದು. ಬಡವರು, ಮಹಿಳೆಯರು, ದಲಿತರು, ಹಿಂದುಳಿದ ವರ್ಗಗಳ ಜನತೆಗೆ ಸರ್ಕಾರದ ಯೋಜನೆಗಳ ಲಾಭ ತಲುಪಿಸುವುದು ಈ ಸರ್ಕಾರದ ಮೊದಲ ಆದ್ಯತೆ ಎಂದು ಬೊಮ್ಮಾಯಿ ಹೇಳಿದರು.

ಕಡತಗಳ ವಿಲೇವಾರಿಯಲ್ಲಿ ಅನುಸರಿಸುವ ವಿಳಂಬ ನೀತಿಯನ್ನು ದೂರ ಮಾಡಿದಲ್ಲಿಭ್ರಷ್ಟಾಚಾರ ನಿರ್ಮೂಲನೆ ಆಗಲಿದೆ. ಸರಳ, ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಗೆ ಗಮನ ಹರಿಸಲಾಗುವುದು ಎಂದು ಅವರು ತಿಳಿಸಿದರು.

‘ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದರಲ್ಲಿ ಸತ್ಯಾಂಶವಿಲ್ಲ. ಅವರ ಐದು ವರ್ಷಗಳ ಭ್ರಷ್ಟ ಆಡಳಿತಕ್ಕೆ ಬೇಸತ್ತು ಜನ ಅವರನ್ನು ತಿರಸ್ಕರಿಸಿದ್ದಾರೆ. ನಮ್ಮ ಸರ್ಕಾರದ ಬಗ್ಗೆ ಆರೋಪ ಮಾಡಲು ಅವರಿಗೆ ಹಕ್ಕಿಲ್ಲ’ ಎಂದು ಅವರು ಪ್ರತಿಕ್ರಿಯೆ ನೀಡಿದರು.

‘ನಾನು ರಬ್ಬರ್ ಸ್ಟ್ಯಾಂಪ್‌ ಎಂದು ವಿರೋಧ ಪಕ್ಷದವರು ಆರೋಪಿಸಿದ್ದಾರೆ. ನಾನು ಏನಿದ್ದರೂ ಬಿಜೆಪಿ ಸ್ಟ್ಯಾಂಪ್‌. ಮೋದಿ, ಅಮಿತ್‌ ಶಾ, ರಾಜನಾಥ ಸಿಂಗ್‌ ಹಾಗೂ ಬಿ.ಎಸ್‌. ಯಡಿಯೂರಪ್ಪ ಅವರ ಜನಪರ ಯೋಜನೆಗಳ ಸ್ಟ್ಯಾಂಪ್‌’ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು