ಮಂಗಳವಾರ, ಮಾರ್ಚ್ 21, 2023
30 °C

ಪೈಲಟ್ ಸಾಠೆ‌ ಕುರಿತು ಫೇಸ್‌ಬುಕ್‌ನಲ್ಲಿ ಕುತೂಹಲಕಾರಿ ಅಂಶ ಹಂಚಿಕೊಂಡ ಸೋದರ ಸಂಬಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಕೋಯಿಕ್ಕೋಡ್‌ನಲ್ಲಿ ಶುಕ್ರವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾದ ಪೈಲಟ್‌ ಕ್ಯಾಪ್ಟನ್ ದೀಪಕ್ ಸಾಠೆ ಅಪಘಾತಕ್ಕಿಂತಲೂ ಮೊದಲು ವಿಮಾನ ನಿಲ್ದಾಣದ ಮೇಲೆ ಆಗಸದಲ್ಲಿಯೇ ಮೂರು ಸುತ್ತು ಹಾಕಿ, ವಿಮಾನದಲ್ಲಿದ್ದ ಎಲ್ಲ ಇಂಧನವನ್ನೂ ಖಾಲಿ ಮಾಡಿದ್ದರು!

‘ಹಾಗಾಗಿ ಅಪಘಾತಕ್ಕೀಡಾದ ನಂತರವೂ ವಿಮಾನ ಹೋಳಾದರೂ ಬೆಂಕಿ ಹೊತ್ತಿಕೊಳ್ಳಲಿಲ್ಲ ಮತ್ತು ಸ್ಫೋಟಗೊಳ್ಳಲಿಲ್ಲ. ಇದರಿಂದ ನೂರಾರು ಜೀವಗಳು ಉಳಿದವು. ಒಂದು ವೇಳೆ ಇಂಧನ ಖಾಲಿ ಮಾಡದಿದ್ದರೆ, ವಿಮಾನ ಹೊತ್ತಿ ಉರಿಯುತ್ತಿತ್ತು. ಅದರಲ್ಲಿದ್ದ ಯಾರೂ ಬದುಕುಳಿಯುತ್ತಿರಲಿಲ್ಲ’ ಎಂಬ ಸಂಗತಿಯನ್ನು ದೀಪಕ್‌ ಸಹೋದರ ಸಂಬಂಧಿ ನೀಲೇಶ್‌ ಸಾಠೆ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

Its hard to believe that Dipak Sathe, my friend more than my cousin, is no more. He was pilot of Air India Express...

Posted by Nilesh Sathe on Friday, August 7, 2020

‘ನನಗೆ ದೊರೆತಿರುವ ಮಾಹಿತಿಯಂತೆ ವಿಮಾನದ ಲ್ಯಾಂಡಿಂಗ್‌ ಗೇರ್‌ಗಳು ಕೆಲಸ ಮಾಡುತ್ತಿರಲಿಲ್ಲ. ಧಾರಾಕಾರ ಮಳೆಯಿಂದ ರನ್ ವೇ ಕೂಡ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳುವುದನ್ನು ತಪ್ಪಿಸಲು ದೀಪಕ್, ವಿಮಾನ ನಿಲ್ದಾಣದ ಮೇಲೆ‌ ಆಗಸದಲ್ಲಿಯೇ ಮೂರು ಸುತ್ತು ಹೊಡೆದರು. ನೆಲಕ್ಕೆ ಅಪ್ಪಳಿಸುವ ಮೊದಲು ಎಂಜಿನ್‌ ಬಂದ್‌ ಮಾಡಿದ್ದರು. ವಿಮಾನ ನೆಲಕ್ಕೆ ಅಪ್ಪಳಿಸಿದರೂ ಸ್ಫೋಟಿಸಲಿಲ್ಲ. ಅದರಿಂದ 180 ಜನರ ಜೀವ ಉಳಿಸಿ ತಾವು ಹುತಾತ್ಮರಾದರು’ ಎಂದು ನೀಲೇಶ್‌ ಕಂಬನಿ ಮಿಡಿದಿದ್ದಾರೆ.  

ಇದರೊಂದಿಗೆ ದೀಪಕ್ ಸಾಠೆ ಅವರ ಜೀವನಗಾಥೆಯನ್ನು ನೀಲೇಶ್‌ ವಿವರವಾಗಿ ಬರೆದುಕೊಂಡಿದ್ದಾರೆ. ಈ ಪತ್ರ ಶನಿವಾರ ವೈರಲ್‌ ಆಗಿದೆ. 

1990ರಲ್ಲಿ ಭಾರತೀಯ ವಾಯುಪಡೆಯಲ್ಲಿ ವಿಂಗ್‌ ಕಮಾಂಡರ್ ಆಗಿ ಕಾರ್ಯನಿರ್ವಹಿಸುವಾಗ ಸಂಭವಿಸಿದ ವಿಮಾನ ಅಪಘಾತದಲ್ಲಿ ದೀಪಕ್ ಸಾಠೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಅಂದು ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರ ಮೆದುಳಿಗೆ ಬಲವಾದ ಪೆಟ್ಟು ಬಿದ್ದಿತ್ತು. ಸುಮಾರು 6 ತಿಂಗಳ ಚಿಕಿತ್ಸೆ ನಂತರ ಗುಣಮುಖರಾಗಿ ಬಂದಿದ್ದರು. ಆದರೆ, ಈ ಬಾರಿ ಅದೃಷ್ಟ ಅವರ ಕೈ ಹಿಡಯಲಿಲ್ಲ ಎಂದು ವಿಷಾದಿಸಿದ್ದಾರೆ. 

ದೀಪಕ್‌ ಸಾಠೆ ಅವರ ಇಡೀ ಕುಟುಂಬವೇ ಸೇನೆಯಲ್ಲಿದೆ. ಅವರ ಅಪ್ಪ ವಸಂತ್ ಸಾಠೆ ಸೇನೆಯಲ್ಲಿ ಬ್ರಿಗೇಡಿಯರ್ ಹುದ್ದೆಯಲ್ಲಿದ್ದವರು. ಸಹೋದರ ಕ್ಯಾಪ್ಟನ್ ವಿಕಾಸ್ ಕೂಡ ಭೂಸೇನೆಯಲ್ಲಿದ್ದಾರೆ. ಅವರ ಇಬ್ಬರು ಪುತ್ರರು ಬಾಂಬೆ ಐಐಟಿಯಲ್ಲಿ ಪದವಿ ಮುಗಿಸಿದ್ದಾರೆ. ಸಾಠೆ ಕುಟುಂಬ 15 ವರ್ಷಗಳಿಂದ ಮುಂಬೈನಲ್ಲಿ ವಾಸಿಸುತ್ತಿದೆ.

ದೀಪಕ್‌ ವಿಮಾನ ಚಾಲನೆಯಲ್ಲಿ 36 ವರ್ಷಗಳ ಅನುಭವ ಹೊಂದಿದ್ದವರು. ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ ಕೋರ್ಸ್‌ನಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದರು.‘ಸ್ವೋರ್ಡ್ ಆಫ್ ಆನರ್‌‘ ಪ್ರಶಸ್ತಿ ಪುರಸ್ಕೃತರು. 21 ವರ್ಷಗಳ ಕಾಲ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ ನಂತರ 2005ರಲ್ಲಿ ಏರ್ ‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್‌ ಕೆಲಸಕ್ಕೆ ಸೇರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು