ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಪ್ರಜೆಗಳಿಗೆ ಅಕ್ರಮವಾಗಿ ವೀಸಾ: ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಪ್ರಕರಣ

Last Updated 17 ಮೇ 2022, 18:43 IST
ಅಕ್ಷರ ಗಾತ್ರ

ನವೆದಹಲಿ/ಚೆನ್ನೈ: ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರ ವಿರುದ್ಧ ಸಿಬಿಐ ಮತ್ತೆ ಪ್ರಕರಣ ದಾಖಲಿಸಿಕೊಂಡಿದೆ. ₹50 ಲಕ್ಷ ಲಂಚ ಪಡೆದು ಚೀನಾದ 263 ಮಂದಿಗೆ2011ರಲ್ಲಿ ವೀಸಾ ಕೊಡಿಸಿದ್ದರು ಎಂಬ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ಚೀನಾದ ಈ ಮಂದಿ ಪಂಜಾಬ್‌ನ ಯೋಜನೆಯೊಂದರಲ್ಲಿ ಕೆಲಸ ಮಾಡಬೇಕಾಗಿತ್ತು ಎಂದು ಸಿಬಿಐ ಹೇಳಿದೆ. ಕಾರ್ತಿ ಅವರ ತಂದೆ ಪಿ.ಚಿದಂಬರಂ ಅವರು ಆಗ ಕೇಂದ್ರದಲ್ಲಿ ಗೃಹ ಸಚಿವರಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಬಳಿಕ, ಚಿದಂಬರಂ ಅವರ ಚೆನ್ನೈನ ನಿವಾಸ ಮತ್ತು ಕಾರ್ತಿ ಅವರಿಗೆ ಸಂಬಂಧಿಸಿದ ಎಂಟು ಸ್ಥಳಗಳಲ್ಲಿ ಸಿಬಿಐ ಮಂಗಳವಾರ ಶೋಧ ನಡೆಸಿದೆ. ಲಂಚ ಪಡೆದು ವೀಸಾ ನೀಡಿದ್ದುಐಎನ್‌ಎಕ್ಸ್‌ ಮೀಡಿಯಾ ಮತ್ತು ಏರ್‌ಸೆಲ್‌–ಮ್ಯಾಕ್ಸಿಸ್‌ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಅಧಿಕಾರಿಗಳ ಗಮನಕ್ಕೆ ಬಂತು ಎಂದು ಮೂಲಗಳು ಹೇಳಿವೆ.

ಕಾರ್ತಿ ಅವರು ವಿದೇಶಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ಟ್ವೀಟ್‌ ಮೂಲಕ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಇದು (ಶೋಧ) ಎಷ್ಟು ಬಾರಿ ನಡೆದಿದೆ ಎಂಬುದರ ಲೆಕ್ಕವೇ ಇಲ್ಲ. ಇದು ದಾಖಲೆಯೇ ಇರಬೇಕು’ ಎಂದು ವ್ಯಂಗ್ಯವಾಡಿದ್ದಾರೆ.

ಚೀನಾದ ಕಂಪನಿಯೊಂದಕ್ಕೆ ನೀಡಲಾಗಿದ್ದ ತಲವಂಡಿ ಸಾಬೊ ಉಷ್ಣ ವಿದ್ಯುತ್ ಯೋಜನೆಯ ಕೆಲಸವು ವಿಳಂಬವಾಗಿತ್ತು. ಹಾಗಾಗಿ ಕೆಲಸ ಮಾಡಲು ಚೀನಾದಿಂದ ಇನ್ನಷ್ಟು ಜನರನ್ನು ಕರೆತರಬೇಕಿತ್ತು. ಆದರೆ, ವಿದೇಶಿಯರನ್ನು ಕರೆತರುವುದಕ್ಕೆ ಮಿತಿ ಇತ್ತು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

‘ಆಗಿನ ಗೃಹ ಕಾರ್ಯದರ್ಶಿ ಮತ್ತು ಗೃಹ ಸಚಿವರಿಗೆ ಈ ವಿಷಯದ ಬಗ್ಗೆ ಗೊತ್ತಿದೆ ಎಂದು ಭಾವಿಸಲು ಕಾರಣಗಳಿವೆ. ಆದರೆ, ಅವರಿಗೆ ತಿಳಿದಿತ್ತೇ ಎಂಬುದನ್ನು ದೃಢಪಡಿಸಿಕೊಳ್ಳಲು ಸಾಧ್ಯವಾಗಿಲ್ಲ’ ಎಂದೂ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಶೋಧದ ಸಮಯವು ಆಸಕ್ತಿದಾಯಕವಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.

‘ಅವರು ನನಗೆ ಎಫ್‌ಐಆರ್‌ ತೋರಿಸಿದರು. ಆರೋಪಿ ಎಂದು ಅದರಲ್ಲಿ ನನ್ನನ್ನು ಉಲ್ಲೇಖಿಸಿರಲಿಲ್ಲ. ಶೋಧ ತಂಡಕ್ಕೆ ಏನೂ ಸಿಕ್ಕಿಲ್ಲ ಮತ್ತು ಅವರು ಏನನ್ನೂ ಜಪ್ತಿ ಮಾಡಿಲ್ಲ’ ಎಂದು ಚಿದಂಬರಂ ಹೇಳಿದ್ದಾರೆ.

ತಲವಂಡಿ ಸಾಬೊ ಪವರ್‌ ಲಿ., ವೀಸಾಗಳಿಗಾಗಿ ಕಾರ್ತಿ ಅವರ ಆಪ್ತ ಎಸ್‌. ಭಾಸ್ಕರರಾಮನ್‌ ಅವರನ್ನು ಸಂಪರ್ಕಿಸಿತ್ತು. 2011ರ ಜುಲೈ 30ರಂದು ವೀಸಾ ಅರ್ಜಿಯನ್ನು ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗಿತ್ತು. ನಂತರ ಈ ಅರ್ಜಿಯನ್ನು ಕಾರ್ತಿ ಅವರಿಗೆ ಕಳುಹಿಸಲಾಗಿತ್ತು. ಇದರ ಅನುಮೋದನೆಗಾಗಿ ₹50 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಲಾಗಿತ್ತು. ಈ ಬಗ್ಗೆ ಕಾರ್ತಿ ಅವರು ಚಿದಂಬರಂ ಅವರ ಜತೆ ಮಾತುಕತೆ ನಡೆಸಿದ್ದರು. ಎರಡು ಹುಸಿ ಇನ್‌ವಾಯ್ಸ್‌ಗಳ ಮೂಲಕ ಕಾರ್ತಿ ಅವರಿಗೆ ₹50 ಲಕ್ಷ ನೀಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಕಾರ್ತಿ ಅವರ ವಿರುದ್ಧ ಕೇಂದ್ರ ಕಾನೂನು ಜಾರಿ ಸಂಸ್ಥೆಯು ನಡೆಸಿದ ಆರನೇ ಶೋಧ ಇದು. ಐಎನ್‌ಎಕ್ಸ್‌ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ 2018ರಲ್ಲಿ ಅವರನ್ನು ಸಿಬಿಐ ಬಂಧಿಸಿತ್ತು. ಇದೇ ಪ್ರಕರಣದಲ್ಲಿ ಚಿದಂಬರಂ ಅವರ ಬಂಧನವೂ ಆಗಿತ್ತು.

ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಶೋಧವನ್ನು ಖಂಡಿಸಿದ್ದಾರೆ. ‘ಚಿದಂಬರಂ ಅವರು ರಾಷ್ಟ್ರವಾದಿ, ದೇಶಪ್ರೇಮಿ. ದೇಶದ ಬಗ್ಗೆ ಅವರ ಬದ್ಧತೆಯನ್ನು ಪ್ರಶ್ನಿಸುವಂತಿಲ್ಲ. ಕೇಂದ್ರದ ಮಾಜಿ ಗೃಹ ಸಚಿವರ ಮೇಲೆ ವಿವೇಕರಹಿತವಾಗಿ ಆರೋಪ ಹೊರಿಸುವುದು ಕೀಳು ಮಟ್ಟದ ರಾಜಕೀಯ’ ಎಂದು ಅವರು ಹೇಳಿದ್ದಾರೆ.

ಚಿದಂಬರಂ ಅವರು ತಮಿಳುನಾಡಿನಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ಶೋಧ ನಡೆದಿದೆ. ಇದರ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ತಮಿಳುನಾಡು ಕಾಂಗ್ರೆಸ್‌ ಅಧ್ಯಕ್ಷ ಕೆ.ಎಸ್. ಅಳಗಿರಿ ಹೇಳಿದ್ದಾರೆ. ಚಿದಂಬರಂ ಅವರು ಕೂಡ ಶೋಧದ ಸಂದರ್ಭ ಆಸಕ್ತಿದಾಯಕವಾಗಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT