ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭಾ ಸದಸ್ಯತ್ವದ ಭರವಸೆ: ₹ 100 ಕೋಟಿ ವಂಚಿಸುವ ಯತ್ನದ ಜಾಲ ಭೇದಿಸಿದ ಸಿಬಿಐ

Last Updated 26 ಜುಲೈ 2022, 2:18 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಪಾಲರ ಹುದ್ದೆ ಕೊಡಿಸುವ ಹಾಗೂ ರಾಜ್ಯಸಭಾ ಸದಸ್ಯರನ್ನಾಗಿ ಮಾಡುವುದಾಗಿ ನಂಬಿಸಿ ₹100 ಕೋಟಿ ವಂಚಿಸಲು ಮುಂದಾಗಿದ್ದ ಅಂತರರಾಜ್ಯದ ವಂಚಕರ ಜಾಲವೊಂದನ್ನು ಸಿಬಿಐ ಭೇದಿಸಿದೆ.

‘ಪ್ರಕರಣ ಸಂಬಂಧ ಕರ್ನಾಟಕ, ನವದೆಹಲಿ, ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶದ ಏಳು ಸ್ಥಳಗಳಲ್ಲಿ ಇತ್ತೀಚೆಗೆ ಶೋಧ ನಡೆಸಲಾಗಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸದ್ಯ ಕರ್ನಾಟಕದ ಬೆಳಗಾವಿಯಲ್ಲಿ ವಾಸವಿರುವ ರವೀಂದ್ರ ವಿಠಲ ನಾಯ್ಕ, ಮಹಾರಾಷ್ಟ್ರದ ಲಾತೂರಿನ ಕಮಲಾಕರ ಪ್ರೇಮಕುಮಾರ್ ಬಾಂದಗರ, ದೆಹಲಿಯ ಮಹೇಂದ್ರ ಪಾಲ್ ಅರೋರಾ, ಅಭಿಷೇಕ್ ಬೂರಾ ಅವರನ್ನು ಬಂಧಿಸಲಾಗಿದೆ. ಶೋಧ ಕಾರ್ಯದ ವೇಳೆ, ಸಿಬಿಐ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದನೆನ್ನಲಾದ ಆರೋಪಿಮೊಹಮ್ಮದ್ ಏಜಾಜ್ ಖಾನ್‌ ಪರಾರಿಯಾಗಿದ್ದಾನೆ. ಈ ಸಂಬಂಧ ಆತನ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದೂ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿಐವರ ವಿರುದ್ಧವೂ ಎಫ್‌ಐಆರ್‌ ದಾಖಲಿಸಲಾಗಿದೆ. ಆದರೆ ಬಂಧನಕ್ಕೊಳಗಾದ ನಾಲ್ವರು ಆರೋಪಿಗಳಿಗೆ ಸಿಬಿಐ ವಿಶೇಷ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

‘ತಾನು ಸಿಬಿಐ ಅಧಿಕಾರಿ, ತನಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಂಪರ್ಕ ಇದೆ ಎಂದು ಬಾಂದಗರ ಹೇಳಿಕೊಳ್ಳುತ್ತಿದ್ದ. ಭಾರಿ ಹಣಕೊಟ್ಟರೆ ಯಾವುದೇ ಕೆಲಸವನ್ನಾದರೂ ಮಾಡಿಕೊಡುವುದಾಗಿ ತಿಳಿಸುತ್ತಿದ್ದ. ಹಣ ಕೊಡಲು ಸಿದ್ಧರಿರುವ ಜನರನ್ನು ಕರೆತರುವಂತೆ ಬೂರಾ, ಅರೋರಾ ಹಾಗೂ ಖಾನ್‌ ಅವರಿಗೆ ಸೂಚಿಸುತ್ತಿದ್ದ’ ಎಂದು ಆರೋಪಿಸಲಾಗಿದೆ.

‘ರಾಜ್ಯಪಾಲರ ಹುದ್ದೆ ಹಾಗೂ ರಾಜ್ಯಸಭಾ ಸೀಟು ಕೊಡಿಸುವ, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ ಹಾಗೂ ಇಲಾಖೆಗಳಡಿ ಕಾರ್ಯ ನಿರ್ವಹಿಸುವ ಸಂಸ್ಥೆಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿಸುವುದಾಗಿ ಜನರನ್ನು ನಂಬಿಸಿ ಅವರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಲು ಆರೋಪಿಗಳು ಸಂಚು ರೂಪಿಸಿದ್ದರು’ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

‘ನೇರವಾಗಿ ಅಥವಾ ಅಭಿಷೇಕ್‌ ಬೂರಾ ಅವರಂತಹಮಧ್ಯವರ್ತಿಗಳ ಮೂಲಕ ತಮ್ಮನ್ನು ಸಂಪರ್ಕಿಸುತ್ತಿದ್ದವರನ್ನು ಮೆಚ್ಚಿಸುವ ಸಲುವಾಗಿ ಆರೋಪಿಗಳು ಹಿರಿಯ ಅಧಿಕಾರಿಗಳು ಹಾಗೂ ರಾಜಕೀಯ ವ್ಯಕ್ತಿಗಳ ಹೆಸರುಗಳನ್ನುಹೇಳುತ್ತಿದ್ದರು. ತಾನು ಸಿಬಿಐ ಹಿರಿಯ ಅಧಿಕಾರಿ ಎಂದು ಹೇಳಿಕೊಳ್ಳುತ್ತಿದ್ದಬಾಂದಗರ ವಿವಿಧ ಪೊಲೀಸ್‌ ಠಾಣೆಗಳಿಗೆ ಕರೆಮಾಡಿಅಲ್ಲಿನ ಅಧಿಕಾರಿಗಳಿಗೆ ಬೆದರಿಸುತ್ತಿದ್ದ. ತನ್ನ ಹೆಸರು ಹೇಳಿಕೊಂಡು ಬರುವವರಿಗೆ ನೆರವಾಗುವಂತೆ ಸೂಚಿಸುತ್ತಿದ್ದ. ತನಿಖಾ ಹಂತದಲ್ಲಿರುವ ಪ್ರಕರಣಗಳನ್ನು ಮುಚ್ಚಿಹಾಕಲೂ ಪ್ರಯತ್ನಿಸುತ್ತಿದ್ದ’ ಎಂದೂ ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT