ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಶೋಷಣೆ ಆರೋಪ: ಉಮ್ಮನ್ ಚಾಂಡಿಗೆ ಸಿಬಿಐ ಕ್ಲೀನ್ ಚಿಟ್

Last Updated 28 ಡಿಸೆಂಬರ್ 2022, 8:31 IST
ಅಕ್ಷರ ಗಾತ್ರ

ತಿರುವನಂತಪುರ: ಸೋಲಾರ್ ಪ್ಯಾನಲ್ ಹಗರಣದ ಪ್ರಮುಖ ಆರೋಪಿ ಮಹಿಳೆ ಮಾಡಿದ್ದ ಲೈಂಗಿಕ ಶೋಷಣೆ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಕ್ಲೀನ್ ಚಿಟ್ ನೀಡಿದೆ.

ಇಲ್ಲಿನ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸಿಬಿಐ ಮಂಗಳವಾರ ತನಿಖಾ ವರದಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ಯುಡಿಎಫ್ ಸರ್ಕಾರದ ಅವಧಿಯ ಬಹುಕೋಟಿ ಸೋಲಾರ್ ಪ್ಯಾನಲ್ ಹಗರಣದ ಆರೋಪಿ ಮಹಿಳೆ ನೀಡಿದ್ದ ದೂರಿನ ಆಧಾರದ ಮೇಲೆ ಚಾಂಡಿ ಸೇರಿದಂತೆ ಆರು ಜನರ ವಿರುದ್ಧ ಕೇರಳ ಪೊಲೀಸರ ಅಪರಾಧ ವಿಭಾಗವು ಪ್ರಕರಣ ದಾಖಲಿಸಿಕೊಂಡಿತ್ತು. 2012ರಲ್ಲಿ ಈ ಆರೋಪಿಗಳು ನನ್ನ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.

2021ರಲ್ಲಿ ಸಿಪಿಐ(ಎಂ) ನೇತೃತ್ವದ ಕೇರಳ ಸರ್ಕಾರ ಉಮ್ಮನ್ ಚಾಂಡಿ, ಮಾಜಿ ಕೇಂದ್ರ ಸಚಿವ ಕೆ ಸಿ ವೇಣುಗೋಪಾಲ್ ಮತ್ತು ಇತರ ರಾಜಕಾರಣಿಗಳ ವಿರುದ್ಧದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.

ಈ ಕ್ರಮವನ್ನು ಖಂಡಿಸಿದ್ದ ಪ್ರತಿಪಕ್ಷ ಕಾಂಗ್ರೆಸ್, ರಾಜಕೀಯ ಪ್ರೇರಿತ ಎಂದು ಕರೆದಿತ್ತು. ಎಲ್‌ಡಿಎಫ್ ಸರ್ಕಾರಕ್ಕೆ ಕಾಂಗ್ರೆಸ್‌ ನಾಯಕರ ವಿರುದ್ಧದ ಯಾವುದೇ ಆರೋಪ ಸಾಬೀತುಮಾಡಲು ಸಾಧ್ಯವಾಗಿಲ್ಲ. ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಉದ್ದೇಶದಿಂದ ತನಿಖೆಯನ್ನು ಸಿಬಿಐಗೆ ವಹಿಸಿದೆ ಎಂದು ಆರೋಪಿಸಿತ್ತು.

ಈ ನಡುವೆ, ಮಹಿಳೆ ಆರೋಪಿಸಿರುವಂತೆ ಆ ಒಂದು ನಿರ್ದಿಷ್ಟ ದಿನ ಅಂದಿನ ಸಿಎಂ ಊಮ್ಮನ್ ಚಾಂಡಿ ಮನೆಗೆ ಅವರು ಹೋಗಿದ್ದರು ಎಂಬುದನ್ನು ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯ ಸಿಬಿಐ ತನಿಖೆಯಲ್ಲಿ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಸಿಬಿಐ ಕೂಡ ಇದೊಂದು ಕಪೋಲಕಲ್ಪಿತ ಪ್ರಕರಣ ಎಂಬ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಜುಲೈ 19, 2013ರಂದು ತಿರುವನಂತಪುರದ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದಿದ್ದ ಮಹಿಳೆ, ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಕೆಲವು ಸಚಿವರು ಮತ್ತು ಇಬ್ಬರು ಮಾಜಿ ಕೇಂದ್ರ ಸಚಿವರು ಸೇರಿದಂತೆ ಕಾಂಗ್ರೆಸ್ ಮತ್ತು ಯುಡಿಎಫ್‌ನ ಹಲವು ನಾಯಕರ ಮೇಲೆ ಲೈಂಗಿಕ ಶೋಷಣೆ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT