ಭಾನುವಾರ, ಜೂನ್ 13, 2021
20 °C

ನಾರದ ಪ್ರಕರಣ ವರ್ಗಾಯಿಸಲು ಹೈಕೋರ್ಟ್‌ಗೆ ಸಿಬಿಐ ಮನವಿ: ಅರ್ಜಿಯಲ್ಲಿ ಮಮತಾ ಹೆಸರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ನಾರದ ಮಾರುವೇಷ ಕಾರ್ಯಾಚರಣೆಯ ಮೂಲಕ ಬಹಿರಂಗವಾಗಿರುವ ಲಂಚ ಹಗರಣ ಸಂಬಂಧಿತ ಪ್ರಕರಣವನ್ನು ಪಶ್ಚಿಮ ಬಂಗಾಳದಿಂದ ವರ್ಗಾಯಿಸುವಂತೆ ಕೋರಿ ಸಿಬಿಐ ಕಲ್ಕತ್ತ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾನೂನು ಸಚಿವ ಮಲಯ್‌ ಘಟಕ್‌ ಅವರ ಹೆಸರನ್ನು ಸಿಬಿಐ ಅರ್ಜಿಯಲ್ಲಿ ಹೆಸರಿಸಿದೆ.

ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಲ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಸಿಬಿಐ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 2 ಗಂಟೆಗೆ ನಿಗದಿ ಪಡಿಸಿದೆ.

ನಾರದ‌ ಹಗರಣದಲ್ಲಿ ಸಿಬಿಐ ಬಂಧಿಸಿರುವ ಪಶ್ಚಿಮ ಬಂಗಾಳದ ಸಚಿವರಾದ ಸುಬ್ರತಾ ಮುಖರ್ಜಿ, ಫಿರ್ಹಾದ್‌ ಹಕೀಮ್, ಟಿಎಂಸಿ ಶಾಸಕ ಮದನ್‌ ಮಿತ್ರಾ ಮತ್ತು ಪಕ್ಷದ ಮಾಜಿ ಮುಖಂಡ ಸೋವನ್‌ ಚಟರ್ಜಿ ಅವರಿಂದ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯೂ ಬುಧವಾರ ನಡೆಯಲಿದೆ. ಪ್ರಕರಣದಲ್ಲಿ ನಾಲ್ವರು ಮುಖಂಡರಿಗೂ ಸಿಬಿಐ ವಿಶೇಷ ಕೋರ್ಟ್‌ ಸೋಮವಾರ ಜಾಮೀನು ಮಂಜೂರು ಮಾಡಿತ್ತು. ಆದರೆ, ಕಲ್ಕತ್ತ ಹೈಕೋರ್ಟ್‌ ಜಾಮೀನು ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ತೆರವುಗೊಳಿಸುವಂತೆ ಮುಖಂಡರು ಮನವಿ ಮಾಡಿದ್ದಾರೆ.

ಸಿಬಿಐ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮಮತಾ ಬ್ಯಾನರ್ಜಿ, ಸಚಿವ ಘಟಕ್‌ ಜೊತೆಗೆ ಟಿಎಂಸಿ ಸಂಸದ ಮತ್ತು ವಕೀಲ ಕಲ್ಯಾಣ್‌ ಬ್ಯಾನರ್ಜಿ ಅವರನ್ನೂ ಹೆಸರಿಸಿದೆ.

ಸಿಬಿಐ ಪರವಾಗಿ ಪ್ರತಿನಿಧಿಸಿರುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಸೋಮವಾರ ವಿಭಾಗೀಯ ಪೀಠಕ್ಕೆ ಪ್ರಕರಣದ ಕುರಿತು ವಿವರಿಸುತ್ತ 'ರಾಜ್ಯದ ಮುಖ್ಯಮಂತ್ರಿಯು ತನಿಖಾ ಸಂಸ್ಥೆಯ ಕಚೇರಿಯ ಹೊರಭಾಗದಲ್ಲಿ ಧರಣಿ ನಡೆಸುವ ಮೂಲಕ ವಿಚಿತ್ರ ಸನ್ನಿವೇಶವೊಂದು ಎದುರಾಗಿದೆ' ಎಂದು ಹೇಳಿದ್ದರು.

ಇದನ್ನೂ ಓದಿ– ನಾರದಾ ಲಂಚ ಹಗರಣ: ಸುವೇಂದು ತನಿಖೆಗೆ ಅನುಮತಿ ಸಿಕ್ಕಿಲ್ಲ ಎಂದ ಸಿಬಿಐ

ಆರೋಪಿಗಳನ್ನು ಹಾಜರು ಪಡಿಸುತ್ತಿದ್ದ ಕೋರ್ಟ್‌ನಲ್ಲಿ ಗುಂಪಿನ ಜೊತೆಗೆ ಕಾನೂನು ಸಚಿವ ಘಟಕ್‌ ಸಹ ಹಾಜರಿದ್ದರು ಎಂದು ಸಿಬಿಐ ಉಲ್ಲೇಖಿಸಿದೆ. 'ಬಂಧಿತ ರಾಜಕೀಯ ಮುಖಂಡರ ಅನುಯಾಯಿಗಳು ನಿಜಾಮ್‌ ಪ್ಯಾಲೇಸ್‌ನ ಸಿಬಿಐ ಕಚೇರಿಗೆ ಘೇರಾವ್‌ ಹಾಕಿದರು. ಅಧಿಕಾರಿಗಳನ್ನು ಹೊರ ಹೋಗಲು ಬಿಡದೆ, ಆರೋಪಿಗಳನ್ನು ಕೋರ್ಟ್‌ಗೆ ನೇರವಾಗಿ ಹಾಜರು ಪಡಿಸಲು ಸಾಧ್ಯವಾಗಲಿಲ್ಲ' ಎಂದು ಸಿಬಿಐ ಹೇಳಿದೆ.

ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಸೋಮವಾರ ವರ್ಚುವಲ್‌ ರೀತಿಯಲ್ಲಿ ಹಾಜರು ಪಡಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು