ಸೋಮವಾರ, ಜನವರಿ 25, 2021
15 °C
ವಾಯುಪಡೆಗೆ ಅತ್ಯಾಧುನಿಕ ‘ತೇಜಸ್‌’

₹48,000 ಕೋಟಿ ಮೊತ್ತದ 83 ತೇಜಸ್ ಯುದ್ಧವಿಮಾನಗಳ ಖರೀದಿಗೆ ಕೇಂದ್ರ ಒಪ್ಪಿಗೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ವಾಯುಪಡೆಗಾಗಿ (ಐಎಎಫ್‌) ಸ್ವದೇಶಿ ನಿರ್ಮಿತ 83 ತೇಜಸ್‌ ಎಂಕೆ 1ಎ ಲಘು ಯುದ್ಧವಿಮಾನ ಖರೀದಿಸುವ ₹47 ಸಾವಿರ ಕೋಟಿ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟದ ಭದ್ರತೆಯ ಬಗೆಗಿನ ಸಮಿತಿಯು ಬುಧವಾರ ಒಪ್ಪಿಗೆ ನೀಡಿದೆ. ಈ ಒಪ್ಪಂದವು ಸ್ವದೇಶಿ ವಿಮಾನ ಉದ್ಯಮಕ್ಕೆ ಬಹುದೊಡ್ಡ ಉತ್ತೇಜನ ನೀಡಲಿದೆ.

ವಾಯುಪಡೆಗಾಗಿ ಅತ್ಯಾಧುನಿಕವಾದ 73 ಯುದ್ಧ ವಿಮಾನಗಳು, ತರಬೇತಿಗಾಗಿ ಅಂತಹುದೇ 10 ಯುದ್ಧ ವಿಮಾನಗಳನ್ನು ₹45,696 ಕೋಟಿ ವೆಚ್ಚದಲ್ಲಿ ಖರೀದಿಸಲು, ದುರಸ್ತಿ ಡಿಪೊಗಳ ನಿರ್ಮಾಣಕ್ಕೆ ₹1,202 ಕೋಟಿ ವ್ಯಯಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯು ಒಪ್ಪಿಗೆ ಕೊಟ್ಟಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. 

ಲಘು ಯುದ್ಧ ವಿಮಾನ ತೇಜಸ್‌ ಮಾರ್ಕ್‌ 1ಎ, ಅತ್ಯಂತ ಸುಧಾರಿತವಾದ ಆವೃತ್ತಿ. ಬೆಂಗಳೂರಿನ ಹಿಂದೂಸ್ಥಾನ ಎರೊನಾಟಿಕಲ್‌ ಲಿ.ನಿಂದ (ಎಚ್‌ಎಎಲ್‌) ಭಾರತೀಯ ವಾಯುಪಡೆಯು ₹8,802 ಕೋಟಿ ವೆಚ್ಚದಲ್ಲಿ ಈ ಹಿಂದೆ 40 ತೇಜಸ್‌ ಯುದ್ಧ ವಿಮಾನಗಳನ್ನು ಖರೀದಿಸಿತ್ತು. ಮಾರ್ಕ್‌ 1ಎ ಆವೃತ್ತಿಯಲ್ಲಿ 43 ಸುಧಾರಣೆಗಳನ್ನು ಮಾಡಲಾಗಿದೆ. 

ತೇಜಸ್‌ ಲಘು ಯುದ್ಧ ವಿಮಾನವು ಮುಂದಿನ ದಿನಗಳಲ್ಲಿ ಭಾರತೀಯ ವಾಯುಪಡೆಯ ಯುದ್ಧ ಘಟಕದ ಬೆನ್ನೆಲುಬಾಗಿ ರೂಪುಗೊಳ್ಳಲಿದೆ. ಈ ವಿಮಾನಗಳಲ್ಲಿ ಈವರೆಗೆ ಭಾರತದಲ್ಲಿ ಬಳಕೆಯಾಗದ ಹಲವು ಹೊಸ ತಂತ್ರಜ್ಞಾನ ಇರಲಿವೆ. ಮಾರ್ಕ್‌ 1ಎ ಆವೃತ್ತಿಯಲ್ಲಿ ಸ್ವದೇಶಿ ನಿರ್ಮಿತ ಭಾಗಗಳು ಶೇ 50ರಷ್ಟಿವೆ ಮತ್ತು ಅದನ್ನು ಮುಂದೆ ಶೇ 60ಕ್ಕೆ ಹೆಚ್ಚಿಸಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ. 

ಐಎಎಫ್‌ನಲ್ಲಿ ಈಗಾಗಲೇ ತೇಜಸ್‌ನ ಎರಡು ತುಕಡಿಗಳಿವೆ. 45ನೇ ತುಕಡಿ (ಫ್ಲೈಯಿಂಗ ಡ್ಯಾಗರ್ಸ್‌) ಮತ್ತು 18ನೇ ತುಕಡಿ (ಫ್ಲೈಯಿಂಗ ಬುಲೆಟ್ಸ್‌) ಈ ಲಘು ಯುದ್ಧ ವಿಮಾನಗಳನ್ನು ಹೊಂದಿವೆ. 

ಐಎಎಫ್‌ ಮತ್ತು ರಕ್ಷಣಾ ಸಚಿವಾಲಯದ ನಡುವಣ ಈ ಒಪ್ಪಂದದಿಂದ ಭಾರತದ ವಿಮಾನ ತಯಾರಿಕಾ ಕ್ಷೇತ್ರಕ್ಕೆ ಭಾರಿ ಅನುಕೂಲ ದೊರೆಯಲಿದೆ. ಈ ಯೋಜನೆಯಲ್ಲಿ ದೇಶದ 560 ಕಂಪನಿಗಳು ಭಾಗಿಯಾಗಲಿವೆ. ದೇಶದಾದ್ಯಂತ ಐದು ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮಾಧವನ್‌ ತಿಳಿಸಿದ್ದಾರೆ.

ಸಕಾಲದಲ್ಲಿ ಪೂರೈಕೆಗೆ ವ್ಯವಸ್ಥೆ

ತೇಜಸ್‌ ಮಾರ್ಕ್‌ 1ಎ ಲಘು ಯುದ್ಧವಿಮಾನಗಳನ್ನು ಸಕಾಲದಲ್ಲಿ ಪೂರೈಸುವುದಕ್ಕಾಗಿ ಎಚ್‌ಎಎಲ್‌ ಹಲವು ಕ್ರಮಗಳನ್ನು ಕೈಗೊಂಡಿದೆ. ಅದಕ್ಕಾಗಿ ನಾಸಿಕ್‌ ಮತ್ತು ಬೆಂಗಳೂರಿನಲ್ಲಿ ಎರಡನೇ ಹಂತದ ನಿರ್ಮಾಣ ಘಟಕಗಳನ್ನು ಆರಂಭಿಸಲಾಗಿದೆ. ಎಚ್‌ಎಎಲ್‌ ಮತ್ತು ರಕ್ಷಣಾ ಸಚಿವಾಲಯದ ನಡುವೆ ವಿಮಾನ ಖರೀದಿಯ ಒಪ್ಪಂದವಾದ ಮೂರು ವರ್ಷಗಳ ಬಳಿಕ ವಿಮಾನಗಳ ಪೂರೈಕೆ ಆರಂಭವಾಗಲಿದೆ ಎಂದು ರಾಜನಾಥ್‌ ತಿಳಿಸಿದ್ದಾರೆ. 

ಐಎಎಫ್‌ನ ಹೊಸ ಬೇಡಿಕೆಗಳನ್ನು ಪೂರೈಸುವುದಕ್ಕಾಗಿ ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಎಚ್‌ಎಎಲ್‌ನ ಬೆಂಗಳೂರು ಘಟಕದ ವಾರ್ಷಿಕ ವಿಮಾನ ನಿರ್ಮಾಣ ಸಾಮರ್ಥ್ಯವನ್ನು ಈಗಿನ 8ರಿಂದ 16ಕ್ಕೆ ಏರಿಸಲಾಗಿದೆ ಎಂದು ಎಚ್‌ಎಎಲ್‌ ಅಧ್ಯಕ್ಷ ಆರ್‌. ಮಾಧವನ್‌ ತಿಳಿಸಿದ್ದಾರೆ.

ತೇಜಸ್‌ ಮಾರ್ಕ್‌ 1ಎ ವೈಶಿಷ್ಟ್ಯ

l ತೇಜಸ್‌ ಮಾರ್ಕ್‌ 1ಎ, ಸ್ವದೇಶಿ ನಿರ್ಮಿತ, ಅತ್ಯಾಧುನಿಕವಾದ ನಾಲ್ಕನೇ ತಲೆಮಾರಿನ ಯುದ್ಧ ವಿಮಾನ

l ವಿದ್ಯುನ್ಮಾನ ಸಕ್ರಿಯ ರೇಡಾರ್‌ ವ್ಯವಸ್ಥೆ ಈ ಯುದ್ಧ ವಿಮಾನದ ಪ್ರಮುಖ ವೈಶಿಷ್ಟ್ಯ

l ಆಗಸದಿಂದ ಆಗಸಕ್ಕೆ, ಅಲ್ಪದೂರ ಮತ್ತು ಮಧ್ಯಮ ದೂರದ ಗುರಿಗಳಿಗೆ ದಾಳಿ ಮಾಡಬಲ್ಲ ಕ್ಷಿಪಣಿ ವ್ಯವಸ್ಥೆ

l ಆಗಸದಲ್ಲಿಯೇ ಇಂಧನ ತುಂಬಿಸುವ ವ್ಯವಸ್ಥೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು